ಬೆಂಕಿ ಬಸಣ್ಣ, ನ್ಯೂಯಾರ್ಕ್
ಆಲ್ಬನಿ ನಗರದ ಕನ್ನಡ-ಕಲಿ ಶಾಲೆಯ ವಾರ್ಷಿಕೋತ್ಸವ ಮತ್ತು ಗ್ರ್ಯಾಜುಯೇಷನ್ ಪಾರ್ಟಿಯನ್ನು ಜುಲೈ 30ರಂದು ಕ್ಯಾನೋಜಾಹಾರಿ ಪಾರ್ಕಿನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ವರ್ಷ ತೇರ್ಗಡೆಯಾದ ಕನ್ನಡ ಕಲಿ ಮುದ್ದು ಮಕ್ಕಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕನ್ನಡದ ಕಂದಮ್ಮಗಳಾದ ವಿಹಾನ್, ನಚಿಕೇತ್, ಆದ್ಯ, ಯುವಾನ್ ಮತ್ತು ಅವನಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯ ಬೆಂಕಿ ಬಸಣ್ಣ ಮಾತನಾಡಿ, ಆಲ್ಬನಿ ಕನ್ನಡ ಕಲಿ ಶಾಲೆಯ ಪ್ರಾರಂಭ ಮತ್ತು ನಡೆದ ಬಂದ ಇತಿಹಾಸದ ಬಗ್ಗೆ ಮಾಹಿತಿ ಹಂಚಿಕೊಂಡರು. ಅಲ್ಕಾ ರಾವ್, ಮನು, ರಾಜೀವ್ ಮಾತನಾಡಿ, ಈ ಕನ್ನಡ ಕಲಿ ಶಾಲೆಯಿಂದ ತಮ್ಮ ಮಕ್ಕಳಿಗೆ ಸಿಗುತ್ತಿರುವ ಅವಕಾಶ ಮತ್ತು ಪ್ರಯೋಜನಗಳನ್ನು ಹಂಚಿಕೊಂಡು, ಶಾಲೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿರುವ ಲತಾ ಅವರಿಗೆ ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಂಬೈ ಕನ್ನಡ ಸಂಘದ ಹಿರಿಯ ಲೇಖಕಿ ಮತ್ತು ಕನ್ನಡ ಪ್ರೇಮಿ ಶಕುಂತಲಾ, ಕನ್ನಡಿಗ ಮಕ್ಕಳು, ಪೋಷಕರು, ಸಂಬಂಧಿಕರು ಹಾಜರಾಗಿದ್ದರು.
ಇದನ್ನೂ ಓದಿ | ಕೀನ್ಯಾದಲ್ಲಿ ಮೊಳಗಲಿದೆ ಕನ್ನಡ ಡಿಂಡಿಮ: ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರದ ಸಿದ್ಧತೆ
ಮೃಷ್ಟಾನ್ನ ವನ ಭೋಜನ
ಮಕ್ಕಳ ಪೋಷಕರು ಸ್ವತಃ ಪ್ರೀತಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಮಸಾಲ ಪುರಿ, ವೆಜ್ ಪಫ್, ಸಂಡಿಗೆ, ಸ್ಯಾಂಡ್‌ವಿಚ್, ಮೊಟ್ಟೆ, ಈರುಳ್ಳಿ ಬಜ್ಜಿ, ಪಕೋಡ, ಮಸಾಲೆ ಚಹಾ, ಮಜ್ಜಿಗೆ, ಕೋಸಂಬರಿ, ಚಪಾತಿ, ಆಲೂಗಡ್ಡೆ ಪಲ್ಯ, ಕಡಲೆಕಾಳು ಪಲ್ಯ, ಚಿತ್ರಾನ್ನ, ಪುಳಿಯೋಗರೆ, ಮೊಸರನ್ನ, ಪಾಯಸ, ಐಸ್‌ಕ್ರೀಮ್, ಕಲ್ಲಂಗಡಿ ಹಣ್ಣು, ಚಿಪ್ಸ್ ಮತ್ತಿತರ ಪದಾರ್ಥಗಳನ್ನು ಕಾರ್ಯಕ್ರಮದಲ್ಲಿ ಹಾಜರಾಗಿದ್ದವರು ಸವಿದರು. ಪ್ರತಿಯೊಬ್ಬರೂ ಮನೆಯಿಂದ ಒಂದೊಂದು ಪದಾರ್ಥ ಮಾಡಿಕೊಂಡು ಬಂದಿದ್ದರು. ಈ ” ಪಾಟ್ ಲಕ್” ಸಂಸ್ಕೃತಿ ಅಮೆರಿಕದ ಅನಿವಾಸಿ ಭಾರತೀಯರಲ್ಲಿ ಜನಪ್ರಿಯವಾಗಿದೆ.
ಆದರ್ಶ ಗುರು ಲತಾ ಕಲಿಯಾತ್
ಕನ್ನಡ ಶಾಲೆಯನ್ನು ಅತ್ಯಂತ ಶ್ರೇಷ್ಠ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿರುವ ಹೆಗ್ಗಳಿಕೆ ಲತಾ ಕಲಿಯಾತ್ ಅವರಿಗೆ ಸಲ್ಲುತ್ತದೆ. ಅವರು ಕ್ಯಾನ್ಸರ್ ಅನ್ನು ಗೆದ್ದ, ಸದಾ ಲವಲವಿಕೆಯಿಂದ ಇರುವ ಚೈತನ್ಯದ ಸ್ಫೂರ್ತಿಯಾಗಿದ್ದಾರೆ. 75 ವರ್ಷ ದಾಟಿದರೂ 25 ವರ್ಷದ ಯುವತಿಯರಿಗಿಂತಲೂ ಹೆಚ್ಚಿನ ಉತ್ಸಾಹ ಹೊಂದಿದ್ದಾರೆ. ಕೆಲ ತಿಂಗಳ ಹಿಂದೆ ಲತಾ ಅವರ 75ನೇ ಹುಟ್ಟು ಹಬ್ಬದಂದು ಶಿಷ್ಯರಾದ ಜಗನ್ನಾಥರಾವ್ ಬಹುಳೆ ರಚಿಸಿದ ಜೀವನಚರಿತ್ರೆ “ಛಲವೇ ಜೀವನ ಸಾಕ್ಷಾತ್ಕಾರ” ಪುಸ್ತಕ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ | ಮಂತ್ರಾಲಯದಲ್ಲಿ ಕರ್ನಾಟಕ ಯಾತ್ರಿ ನಿವಾಸ ಸ್ಥಾಪನೆ; ಅಯೋಧ್ಯೆಯಲ್ಲೂ ಜಾಗ ಕೇಳಲು ಸರ್ಕಾರ ನಿರ್ಧಾರ