ಇಸ್ಲಾಮಾಬಾದ್: ಆರ್ಥಿಕವಾಗಿ ದಿವಾಳಿತನ, ರಾಜಕೀಯವಾಗಿ ಅರಾಜಕತೆ, ಉಗ್ರರ ಪೋಷಣೆಯಿಂದಾಗಿ ಜಾಗತಿಕವಾಗಿ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನವೀಗ (Pakistan) ಮತ್ತೆ ಹಲವು ರೀತಿಯ ಸಂಕಷ್ಟಕ್ಕೆ ಸಿಲುಕಿದೆ. ಅಫಘಾನಿಸ್ತಾನದ (Afghanistan) ಉಗ್ರರು ಪಾಕಿಸ್ತಾನದ ಮೇಲೆ ಸೇಡಿನ ದಾಳಿ ನಡೆಸುತ್ತಿದ್ದಾರೆ. ಇದರ ಮಧ್ಯೆಯೇ, ಪಾಕಿಸ್ತಾನದ ಗ್ವಾದರ್ ಬಂದರಿನ (Gwadar) ಮೇಲೆ ಬಲೂಚಿಸ್ತಾನದ (Balochistan) ಬಂಡುಕೋರರು ಗುಂಡು ಹಾಗೂ ಬಾಂಬ್‌ಗಳ ದಾಳಿ (Terror Attack In Pakistan) ನಡೆಸಿದ್ದಾರೆ. ಇದು ಈಗ ಪಾಕಿಸ್ತಾನಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಗ್ವಾದರ್ ಪೋರ್ಟ್ ಅಥಾರಿಟಿ ಕಾಂಪ್ಲೆಕ್ಸ್ ಆವರಣದ ಮೇಲೆ ಬಲೂಚಿಸ್ತಾನದ ಬಂಡುಕೋರರು ಬಾಂಬ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ನಡೆಯುತ್ತಲೇ ಪಾಕಿಸ್ತಾನದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯು ಎಚ್ಚೆತ್ತುಕೊಂಡಿದ್ದು, ಎಂಟು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇದು ಪಾಕಿಸ್ತಾನದ ಪ್ರಮುಖ ಬಂದರು ಆಗಿರುವ ಕಾರಣ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸಲಾಗತ್ತು. ಹಾಗಾಗಿ, ಉಗ್ರರ ದಾಳಿಯನ್ನು ನಿಗ್ರಹಿಸಲು ಸಾಧ್ಯವಾಯಿತು ಎಂದು ತಿಳಿದುಬಂದಿದೆ.
UPDATE : A major part of the Gwadar Port Authority complex is under control of Baloch fighters. Multiple Chinese and Pak personnel have been killed. Operation is still going on. pic.twitter.com/FYZD4yaPQ1
— Frontalforce 🇮🇳 (@FrontalForce) March 20, 2024
“ಗ್ವಾದರ್ ಬಂದರಿನ ಆವರಣದಲ್ಲಿ ಹಲವು ಸ್ಫೋಟಗಳು ಸಂಭವಿಸಿದವು. ಕೂಡಲೇ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡಿತು” ಎಂದು ಮಕ್ರಾನ್ ಪೊಲೀಸ್ ಆಯುಕ್ತ ಸಯೀದ್ ಅಹ್ಮದ್ ಉಮ್ರಾನಿ ಮಾಹಿತಿ ನೀಡಿದ್ದಾರೆ. “ಉಗ್ರರು ಏಕಾಏಕಿ ದಾಳಿ ನಡೆಸಿದ ಕಾರಣ ಭದ್ರತಾ ಸಿಬ್ಬಂದಿಯು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿತು. ಗುಂಡಿನ ಚಕಮಕಿ ವೇಳೆ ಭದ್ರತಾ ಸಿಬ್ಬಂದಿಯು ಎಂಟು ಉಗ್ರರನ್ನು ಹೊಡೆದುರುಳಿಸಿದ್ದಾರೆ” ಎಂದು ಗ್ವಾದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊಹೈಬ್ ಮೊಹ್ಸಿನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Pakistan Terrorist : ಪಾಕಿಸ್ತಾನದಲ್ಲಿ ಭಾರತದ ವಾಂಟೆಡ್ ಲಿಸ್ಟ್ನಲ್ಲಿರುವ ಉಗ್ರನ ಹತ್ಯೆ; ಯಾರಿವ ಉಗ್ರಗಾಮಿ?
ಬಲೂಚಿಸ್ತಾನದ ಬಂಡುಕೋರರು ಪಾಕಿಸ್ತಾನದಿಂದ ಪ್ರತ್ಯೇಕವಾಗಲು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಲೇ ಇದ್ದಾರೆ. ಇದರ ಭಾಗವಾಗಿಯೇ ಹಲವು ಉಗ್ರ ದಾಳಿಗಳು ನಡೆಯುತ್ತಲೇ ಇರುತ್ತವೆ. ಇದರ ಮಧ್ಯೆಯೇ, ಪಾಕಿಸ್ತಾನಕ್ಕೆ ಅಫಘಾನಿಸ್ತಾನದ ಉಗ್ರರ ದಾಳಿ ಭೀತಿ ಎದುರಾಗಿದೆ. ಕಳೆದ ಶನಿವಾರ (ಮಾರ್ಚ್ 16) ಪಾಕಿಸ್ತಾನದಲ್ಲಿರುವ ಸೇನಾ ನೆಲೆಯ ಮೇಲೆ ಅಫಘಾನಿಸ್ತಾನದ ಉಗ್ರರು ದಾಳಿ ನಡೆಸಿದ್ದರು. ಅಪರಿಚಿತರು ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ 7 ಸೈನಿಕರು ಮೃತಪಟ್ಟಿದ್ದರು. ಇದಾದ ಬಳಿಕ ಪಾಕಿಸ್ತಾನವು ಅಫಘಾನಿಸ್ತಾನದ ಎರಡು ಪ್ರಾಂತ್ಯಗಳ ಮೇಲೆ ವಾಯುದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಆಫ್ಘನ್ ಉಗ್ರರು ಕೂಡ ದಾಳಿ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ