Site icon Vistara News

Gurdaspur Attack: ಗುರುದಾಸಪುರ ಉಗ್ರ ದಾಳಿಯ ರೂವಾರಿ, ಐಎಸ್ಐ ಅಧಿಕಾರಿಯನ್ನು ಕರಾಚಿಯಲ್ಲಿ ಫಿನಿಷ್ ಮಾಡಿದ ‘ಅಪರಿಚಿತರು’!

Gurdaspur attack

ಕರಾಚಿ: 2015ರಲ್ಲಿ ಗುರುದಾಸ್‌ಪುರ(Gurdaspur Attack)ದಲ್ಲಿ ನಡೆದ ಉಗ್ರ ದಾಳಿಯ ರೂವಾರಿ, ಐಎಸ್‌ಐ(ISI) ಅಧಿಕಾರಿಯನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಪಾಕಿಸ್ತಾನ ಗುಪ್ತಚರ ಇಲಾಖೆ ಅಧಿಕಾರಿ, ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯಾಗಿರುವ ಅಲಿ ರಾಝಾ ಅವರ ಮೇಲೆ ಭಾನುವಾರ ದುಷ್ಕರ್ಮಿಗಳು ಗುಂಡಿನ ಮಳೆಗೈದಿದ್ದಾರೆ. ಇನ್ನು ಹಂತಕರು ಯಾರೆಂಬುದು ಪತ್ತೆಯಾಗಿಲ್ಲ. ಪಾಕಿಸ್ತಾನಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

2015 ರಲ್ಲಿ ಭಾರತದಲ್ಲಿ ನಡೆದ ಗುರುದಾಸ್‌ಪುರ ಭಯೋತ್ಪಾದಕ ದಾಳಿಯಲ್ಲಿ ರಾಝಾ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ, ಇದರ ಪರಿಣಾಮವಾಗಿ ನಾಲ್ವರು ಭದ್ರತಾ ಸಿಬ್ಬಂದಿ ಸೇರಿದಂತೆ ಏಳು ಜನರ ಸಾವಿಗೆ ಕಾರಣವಾಯಿತು. ಈ ಘಟನೆಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಗುರುದಾಸ್‌ಪುರ ದಾಳಿ ಹಿನ್ನೆಲೆ

27 ಜುಲೈ 2015 ರಂದು, ಪಾಕಿಸ್ತಾನದ ಸೇನಾ ಸಮವಸ್ತ್ರ ಧರಿಸಿದ್ದ ಮೂವರು ಉಗ್ರರು ದಿನಾನಗರದಲ್ಲಿ ಚಲಿಸುತ್ತಿದ್ದ ಬಸ್ಸೊಂದರ ಮೇಲೆ ಗುಂಡಿನ ಮಳೆ ಸುರಿಸಿ, ಬಳಿಕ ಪೊಲೀಸ್ ಠಾಣೆಯ ಮೇಲೆ ಮುಗಿಬಿದ್ದಿದ್ದರು. ಜಮ್ಮು-ಕಾಶ್ಮೀರದಲ್ಲಿ ದಾಳಿ ನಡೆಸುವುದು ಈ ಉಗ್ರರ ಟಾರ್ಗೆಟ್ ಆಗಿತ್ತಾದರೂ ಅಲ್ಲಿನ ಭಾರಿ ಭದ್ರತೆಯಿಂದ ಅವರು ತಮ್ಮ ಯೋಜನೆ ಬದಲಾಯಿಸಿಕೊಂಡು ಇತ್ತ ಪಂಜಾಬ್‌ನತ್ತ ಲಗ್ಗೆ ಇಟ್ಟರು ಎಂಬುದು ಜಿಪಿಎಸ್ ಟ್ರ್ಯಾಕ್ ಪರಿಶೀಲನೆಯಿಂದ ತಿಳಿದುಬಂದಿದೆ ಎಂದು ಮೂಲಗಳು ಹೇಳಿವೆ.

ಮೊದಲಿಗೆ ಪಾಕಿಸ್ತಾನದ ಶಕರ್‌ಗಢದಿಂದ ಹೊರಟ ಪಾತಕಿಗಳು ಜಮ್ಮು-ಕಾಶ್ಮೀರದ ಗಡಿಯಲ್ಲಿರುವ ಬಾಮಿಯಾಲ್ ಪಟ್ಟಣ ತಲುಪಿದ್ದರು. ಅಲ್ಲಿದ್ದ ಬಿಗಿಭದ್ರತೆಯನ್ನು ಗಮನಿಸಿ, ಅದನ್ನು ಬೇಧಿಸುವುದು ಅಸಾಧ್ಯವೆಂದು ಮನಗಂಡು ದಿನಾನಗರದ ಮಾರ್ಗ ಹಿಡಿದಿದ್ದರು. ಇವರು ‘ರಾವಿ’ ನದಿಯನ್ನು ದಾಟಿ ಪಂಜಾಬ್ ಪ್ರವೇಶಿಸಿದ್ದರು ಎಂದು ತನಿಖಾಧಿಕಾರಿಗಳ ತಂಡ ತಿಳಿಸಿದೆ.

‘ಅಮೃತಸರ-ಪಠಾಣ್‌ಕೋಟ್‌’ ರೈಲು ಹಳಿಯಲ್ಲಿ ಉಗ್ರರು ಅಳವಡಿಸಿದ್ದ ಐದು ಬಾಂಬ್‌ಗಳಲ್ಲಿ ಆರ್‌ಡಿಎಕ್ಸ್ ಬಳಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ. ಅಶ್ವನಿ ಎಂಬ ಟ್ರ್ಯಾಕ್‌ಮೆನ್ ನೀಡಿದ ಮಾಹಿತಿ ಮೇರೆಗೆ ಸೇನೆಯು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಈ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿತ್ತು. ಒಂದೊಂದು ಬಾಂಬ್ ತಲಾ ಒಂದು ಕೆ.ಜಿ. ತೂಕವಿದ್ದವು. ದಿನಾನಗರದಿಂದ 5 ಕಿ.ಮೀ. ದೂರದಲ್ಲಿರುವ ಪರಮನಂದ ರೆಲ್ವೆ ನಿಲ್ದಾಣ ಸಮೀಪದ ಸೇತುವೆಯೊಂದರ ಬಳಿ ಈ ಬಾಂಬ್‌ಗಳನ್ನು ಅಳವಡಿಸಲಾಗಿತ್ತು.

ಇದನ್ನೂ ಓದಿ: Mahadayi Water Dispute: ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ್ ತಂಡ ಭೇಟಿ; ನಾಲೆಗಳ ಪರಿಶೀಲನೆ

Exit mobile version