ನವದೆಹಲಿ: ಬಲೂಚಿ ಬಂಡುಕೋರರು ಪಾಕಿಸ್ತಾನದ ಗ್ವಾದರ್ ಬಂದರಿನಲ್ಲಿರುವ ತೈಲ ಸಂಗ್ರಹಗಾರವನ್ನು ಸ್ಫೋಟಿಸಿದ ಘಟನೆ ಬುಧವಾರ ಸಂಜೆ ನಡೆದಿದೆ. ಈ ಸುದ್ದಿಯನ್ನು ಪಾಕಿಸ್ತಾನದ ಸರ್ಕಾರವು ಖಚಿತಪಡಿಸಿಲ್ಲವಾದರೂ ಸೋಷಿಯಲ್ ಮೀಡಿಯಾಗಳಲ್ಲಿ ತೈಲ ಸಂಗ್ರಹಗಾರ ಹೊತ್ತಿ ಉರಿಯುತ್ತಿರುವ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಗ್ವಾದರ್ ಪಾಕಿಸ್ತಾನದ ಬಲೂಚಿಸ್ತಾನ ಕರವಾಳಿ ಬಂದರು ನಗರಿಯಾಗಿದೆ.
ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಈ ಅನಿರೀಕ್ಷಿತ ದಾಳಿಯಿಂದಾಗಿ ಪಾಕಿಸ್ತಾನ ಸರ್ಕಾರಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಇದೇ ವೇಳೆ, ಪಾಕಿಸ್ತಾನಿ ನೌಕಾ ಪಡೆಯನ್ನು ಕೂಡ ಟಾರ್ಗೆಟ್ ಮಾಡಲಾಗಿತ್ತು ಎನ್ನಲಾಗಿದೆ. ತೈಲ ಸಂಗ್ರಹಗಾರ ಉರಿಯುತ್ತಿರುವುದನ್ನು ನೋಡಿದರೆ ಹೆಚ್ಚಿನ ಪ್ರಮಾಣದಲ್ಲಿ ಸಾವು ಕೂಡ ಸಂಭವಿಸಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಏತನ್ಮಧ್ಯೆ, ಗ್ವಾದರ್ ಬಂದರಿನಲ್ಲಿರುವ ಜನರೇಟರ್‌ನಲ್ಲಿನ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಅದು ಸಂಪೂರ್ಣ ಡೀಸೆಲ್ ಸಂಗ್ರಹವನ್ನು ಭಸ್ಮ ಮಾಡಿದೆ. ಬೆಂಕಿಯಿಂದ ಸಮುದ್ರ ತೀರದಲ್ಲಿ ನಿಂತಿದ್ದ 12 ಕ್ಕೂ ಹೆಚ್ಚು ಹಡಗುಗಳು ಸುಟ್ಟುಹೋಗಿವೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಮಿನಿಟ್ ಮಿರರ್ ಎಬ ಪಾಕಿಸ್ತಾನ ಮೂಲದ ನ್ಯೂಸ್ ವೆಬ್‌ಸೈಟ್ ಮಾಡಿದೆ. ಈ ಘಟನೆ ಆಕಸ್ಮಿಕವೇ ಅಥವಾ ಬಲೂಚಿ ಬಂಡುಕೋರರ ದಾಳಿಯೇ ಎಂಬುದನ್ನು ಪಾಕಿಸ್ತಾನ ಸರ್ಕಾರವು ಇನ್ನಷ್ಟೇ ಖಚಿತಪಡಿಸಬೇಕಿದೆ.
ಇದನ್ನೂ ಓದಿ | ಪಾಕಿಸ್ತಾನ ಸೇನಾ ಹೆಲಿಕಾಪ್ಟರ್ ಪತನ, 6 ಅಧಿಕಾರಿಗಳ ಸಾವು; ಬಲೂಚ್ ಹೋರಾಟಗಾರರ ಮೇಲೆ ಅನುಮಾನ