Site icon Vistara News

ಎಲ್ಲೆ ಮೀರಿದ ಹಮಾಸ್‌ ಉಗ್ರರ ಅಟ್ಟಹಾಸ; ಗಾಯಗೊಂಡ ಇಸ್ರೇಲಿ ಮಹಿಳಾ ಸೈನಿಕರ ಮೇಲೆ ಲೈಂಗಿಕ ದೌರ್ಜನ್ಯ: ಭಯಾನಕ ವಿಡಿಯೊ ಇಲ್ಲಿದೆ

Hamas Terrorists

Hamas Terrorists

ಗಾಜಾ: 2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು (Hamas Terrorists) ನಡೆಸಿದ ದಾಳಿಗೆ ತೀವ್ರ ಪ್ರಮಾಣದಲ್ಲಿ ಪ್ರತಿದಾಳಿ (Israel Hamas War) ನಡೆಸುತ್ತಿರುವ ಇಸ್ರೇಲ್‌ ಸೈನಿಕರು ಇಂದಿಗೂ ಕದನ ವಿರಾಮ ಘೋಷಿಸಿಲ್ಲ. ಈ ಮಧ್ಯೆ ಹಮಾಸ್‌ ಉಗ್ರರ ದೌರ್ಜನ್ಯವನ್ನು ಬಹಿರಂಗಪಡಿಸುವ ಇನ್ನೊಂದು ಭಯಾನಕ ವಿಡಿಯೊ ಹೊರ ಬಂದಿದ್ದು, ವೈರಲ್‌ ಆಗಿದೆ. ಗಾಯಗೊಂಡ ಇಸ್ರೇಲಿ ಮಹಿಳಾ ಸೈನಿಕರ ಮೇಲೆ ಹಮಾಸ್‌ ಉಗ್ರರು ಲೈಂಗಿಕ ದೌರ್ಜನ್ಯ ನಡೆಸುವ ವಿಡಿಯೊ ಇದಾಗಿದ್ದು, ಅವರ ಕ್ರೂರತೆಗೆ ಜಗತ್ತೇ ಬೆಚ್ಚಿ ಬಿದ್ದಿದೆ (Viral Video)

ಒತ್ತೆಯಾಳುಗಳು ಮತ್ತು ಕಾಣೆಯಾದವರ ಕುಟುಂಬ ವೇದಿಕೆ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಈ ಆಘಾತಕಾರಿ ದೃಶ್ಯ ಕಂಡು ಬಂದಿದೆ. ಅಕ್ಟೋಬರ್‌ 7ರಂದು ನಡೆದ ದಾಳಿಯ ವೇಳೆ ಹಮಾಸ್‌ ಉಗ್ರರು ಸೆರೆಸಿಕ್ಕ ಇಸ್ರೇಲ್‌ನ 5 ಮಹಿಳಾ ಸೈನಿಕರಿಗೆ ಕೈಕೋಳ ತೊಡಿಸಿ ಗೋಡೆಗೆ ಒತ್ತಿ ಹಿಡಿದಿರುವುದು ಕಂಡು ಬರುತ್ತಿದೆ. ಹತರಾದ ಇತರ ಸೈನಿಕರ ಶವವೂ ಪಕ್ಕದಲ್ಲೇ ಕಂಡು ಬರುತ್ತಿದೆ. ಬಂಧಿತ ಮಹಿಳಾ ಸೈನಿಕರು ಗಾಯಗೊಂಡಿದ್ದು, ಅವರ ಮುಖದ ಮೇಲೆ ರಕ್ತ ಹರಿಯುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸಾರಿ ಹೇಳುತ್ತಿದೆ.

ಗಾಜಾ ಪಟ್ಟಿಯ ಹೊರಗಿನ ನಹಾಲ್ ಓಜ್ ನೆಲೆಯಲ್ಲಿ ಈ ಯೋಧರು ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಬಂಧಿತರನ್ನು ಲಿರಿ ಅಲ್ಬಾಗ್, ಕರೀನಾ ಆರೀವ್, ಅಗಮ್ ಬರ್ಗರ್, ಡೇನಿಯೆಲ್ಲಾ ಗಿಲ್ಬೋವಾ ಮತ್ತು ನಾಮಾ ಲೆವಿ ಎಂದು ಗುರುತಿಸಲಾಗಿದೆ.

ಭಯಾನಕ ವಿಡಿಯೊದಲ್ಲಿ ಏನಿದೆ?

ಬಂದೂಕುಧಾರಿ ಭಯೋತ್ಪಾದಕನೊಬ್ಬ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ತಮ್ಮ ಯೋಜನೆಯನ್ನು ಘೋಷಿಸುವುದು ಕೂಡ ವಿಡಿಯೊದಲ್ಲಿ ಸೆರೆಯಾಗಿದೆ. ʼʼಗರ್ಭಿಣಿಯಾಗಬಹುದಾದ ಕೆಲವು ಮಹಿಳೆಯರು ಇಲ್ಲಿದ್ದಾರೆʼʼ ಒಂದು ಓರ್ವ ಹೇಳಿದರೆ, ಇನ್ನೋರ್ವ ಸೆರೆ ಸಿಕ್ಕ ಮಹಿಳೆಯ ಸೌಂದರ್ಯವನ್ನು ಹೊಗಳುತ್ತಿರುವುದೂ ಕಂಡು ಬಂದಿದೆ.

ನಹಾಲ್ ಓಜ್‌ನ ಬಾಂಬ್‌ ಶೆಲ್ಟರ್‌ನಲ್ಲಿ ಸೆರೆ ಹಿಡಿಯಲಾದ ಈ ವಿಡಿಯೊದಲ್ಲಿ ಉಗ್ರರು ಸೆರೆಸಿಕ್ಕವರು ನಾಯಿಗಳೆಂದು ನಿಂದಿಸುತ್ತಿರುವುದೂ ಸೆರೆಯಾಗಿದೆ. ಜತೆಗೆ ಫೋಟೊಗಳಿಗೆ ಪೋಸ್‌ ನೀಡುವಂತೆಯೂ ಮಹಿಳೆಯರಿಗೆ ಹಿಂಸೆ ನೀಡುತ್ತಾರೆ. ಈ ಪೈಕಿ ಒಬ್ಬಾಕೆಯ ಮುಖದಲ್ಲಿ ರಕ್ತ ಸೋರುತ್ತಿದ್ದರೆ, ಇನ್ನೋರ್ವ ಮಹಿಳೆಯ ಬಾಯಿಯಿಂದ ರಕ್ತ ಜಿನುಗುತ್ತಿದೆ. ಮಹಿಳೆಯರ ಪೈಕಿ ಒಬ್ಬಾಕೆ ಇಂಗ್ಲಿಷ್‌ ಗೊತ್ತಿರುವವರನ್ನು ಕರೆತನ್ನಿ ಎಂದು ಮನವಿ ಮಾಡುತ್ತಾರೆ. ಜತೆಗೆ ಇನ್ನೊಬ್ಬರು ತಮಗೆ ಗಾಜಾದಲ್ಲಿ ಸ್ನೇಹಿತರೊಬ್ಬರಿದ್ದು, ಅವರನ್ನು ಭೇಟಿ ಮಾಡಿಸುವಂತೆ ಆಗ್ರಹಿಸುತ್ತಾರೆ. ಆದರೆ ಬಂಧೂಕುದಾರಿಗಳು ಇದ್ಯಾವುದನ್ನೂ ಲೆಕ್ಕಿಸುವುದಿಲ್ಲ. ಕಿರುಚಿ ಸುಮ್ಮನೆ ಕುಳಿತುಕೊಳ್ಳುವಂತೆ ಬೆದರಿಸುತ್ತಾರೆ. ತಮ್ಮ ಸಂಗಾತಿಗಳ ಸಾವಿಗೆ ಇವರೇ ಕಾರಣ ಎಂದು ಆರೋಪಿಸುತ್ತಾರೆ.

ಇದನ್ನೂ ಓದಿ: Al Jazeera: ಹಮಾಸ್‌ ಉಗ್ರರ ಪರ ನಿಲುವು; ಇಸ್ರೇಲ್‌ನಲ್ಲಿ ಅಲ್‌ಜಜೀರಾ ಚಾನೆಲ್‌ ಬಂದ್‌ ಮಾಡಿದ ನೆತನ್ಯಾಹು!

ಸ್ವಲ್ಪ ಸಮಯದ ಬಳಿಕ ಉಗ್ರರು ಪ್ರಾರ್ಥನೆಗಾಗಿ ಕೆಲ ಕಾಲ ಸುಮ್ಮನಾಗುತ್ತಾರೆ. ಬಳಿಕ ಮಹಿಳೆಯರನ್ನು ತಳ್ಳಿಕೊಂಡು ಹೊರಗೆ ಕರೆತಂದು ಕಾರಿಗೆ ಹತ್ತಿಸುತ್ತಾರೆ. ಕಾಲಿಗೆ ಗಾಯಗೊಂಡ ಕೆಲವು ಮಹಿಳೆಯರು ನಡೆಯಲೂ ಕಷ್ಟಪಡುತ್ತಾರೆ. ಹಿನ್ನೆಲೆಯಲ್ಲಿ ಗುಂಡಿನ ಸದ್ದು ಕೂಡ ಕೇಳಿಸುತ್ತದೆ. ಮಹಿಳೆಯರನ್ನು ಹತ್ತಿಸಿಕೊಂಡ ಕಾರು ಅಲ್ಲಿಂದ ಮುಂದೆಕ್ಕೆ ಚಲಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೊ ಬಗ್ಗೆ ವಿಶ್ವಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದೆ. ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

Exit mobile version