Site icon Vistara News

ಕದನದೋಳ್‌ ಇಸ್ರೇಲ್‌ ಕೆಣಕಿ ಉಳಿದವರಿಲ್ಲ; ಹಮಾಸ್‌ ಕಮಾಂಡರ್‌ನ ಕುಟುಂಬವೇ ಸರ್ವನಾಶ!

Mohammed Deif

ಜೆರುಸಲೇಂ: “ಹಮಾಸ್‌ ಉಗ್ರರು ಯುದ್ಧ ಆರಂಭಿಸಿದ್ದಾರೆ ಹಾಗೂ ನಾವು ಯುದ್ಧವನ್ನು ಅಂತ್ಯಗೊಳಿಸುತ್ತೇವೆ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈಗಾಗಲೇ ಘೋಷಣೆ ಮಾಡಿದ್ದಾರೆ. ಅದರಂತೆ, ಮಂಗಳವಾರ ರಾತ್ರಿ (ಅಕ್ಟೋಬರ್‌ 10) ಇಸ್ರೇಲ್‌ ವಾಯುಪಡೆಯು ನಿರಂತರವಾಗಿ ಗಾಜಾಪಟ್ಟಿ ಮೇಲೆ ದಾಳಿ (Israel Palestine War) ನಡೆಸಿದೆ. ಅಷ್ಟೇ ಅಲ್ಲ, ಗಾಜಾಪಟ್ಟಿಯಲ್ಲಿರುವ ಹಮಾಸ್‌ ಉಗ್ರರನ್ನು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದೆ. ಅದರಂತೆ, ಹಮಾಸ್‌ ಉಗ್ರ ಸಂಘಟನೆಯ ಕಮಾಂಡರ್‌, ಮಿಲಿಟರಿ ವಿಭಾಗದ ಮುಖ್ಯಸ್ಥ ಹಾಗೂ ಇಸ್ರೇಲ್‌ ಮೇಲಿನ ದಾಳಿಯ ರೂವಾರಿಯಾದ ಮೊಹಮ್ಮದ್‌ ಡೈಫ್‌ನ ಕುಟುಂಬವನ್ನೇ ಇಸ್ರೇಲ್‌ ಸರ್ವನಾಶ ಮಾಡಿದೆ.

ಹೌದು, ಮೊಹಮ್ಮದ್‌ ಡೈಫ್‌ನ ತಂದೆ ಮೆಹ್ದತ್‌ ಅಲ್‌ ಡೈಫ್‌ ನಿವಾಸದ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿದೆ. ಮೆಹ್ದತ್‌ ಅಲ್‌ ಡೈಫ್‌ ಹಾಗೂ ಮೊಹಮ್ಮದ್‌ ಡೈಫ್‌ ಸಹೋದರ ಅಬೇದ್‌ ಸೇರಿ ಕುಟುಂಬದ ಹಲವರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಉಗ್ರ ಸಂಘಟನೆಯ ಕಮಾಂಡರ್‌ ಮೊಹಮ್ಮದ್‌ ಡೈಫ್‌ ಕತೆ ಏನಾಗಿದೆ ಎಂಬುದರ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ. ಇಸ್ರೇಲ್‌ ದಾಳಿಯಿಂದ ಉಗ್ರನ ತಂದೆಯ ಮನೆಯು ಧ್ವಂಸಗೊಂಡಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಉಗ್ರ ಮೊಹಮ್ಮದ್‌ ಡೈಫ್‌ ಸಹೋದರ ಅಬೇದ್‌ ಡೈಫ್.‌

ಮೊಹಮ್ಮದ್‌ ಡೈಫ್‌ ಯಾರು?

ಮೊಹಮ್ಮದ್‌ ಡೈಫ್‌ ಹಮಾಸ್‌ ಉಗ್ರ ಸಂಘಟನೆಯ ಮಿಲಿಟರಿ ವಿಭಾಗದ ಮುಖ್ಯಸ್ಥನಾಗಿದ್ದಾನೆ. ಈತ 1965ರಲ್ಲಿ ಜನಿಸಿದ್ದು, ಈತ ತನ್ನ 15ನೇ ವಯಸ್ಸಿನಲ್ಲಿಯೇ ಹಮಾಸ್‌ ಉಗ್ರ ಸಂಘಟನೆ ಸೇರಿದ್ದಾನೆ ಎಂದು ತಿಳಿದುಬಂದಿದೆ. ಮೊಹಮ್ಮದ್‌ ಡೈಫ್‌ 2021ರಲ್ಲಿ ಮಿಲಿಟರಿ ವಿಭಾಗದ ಮುಖ್ಯಸ್ಥನಾಗಿದ್ದು, ಸಾವಿರಾರು ರಾಕೆಟ್‌ಗಳು ಇಸ್ರೇಲ್‌ ಮೇಲೆ ಎರಗುವ ಯೋಜನೆಗೆ ಈತನೇ ರೂವಾರಿ ಎಂದು ತಿಳಿದುಬಂದಿದೆ. ಆದರೂ, ಈತನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Israel Palestine War: ಹಮಾಸ್‌ ಉಗ್ರರ ಅಟ್ಟಹಾಸ; ಇಸ್ರೇಲ್‌ನಲ್ಲಿ 1,200 ಜನರ ದುರ್ಮರಣ!

ಮತ್ತೊಂದೆಡೆ, ಎರಡೂ ದೇಶಗಳಲ್ಲಿ ನಡೆಯುತ್ತಿರುವ ದಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 3 ಸಾವಿರ ದಾಟಿದೆ ಎಂದು ತಿಳಿದುಬಂದಿದೆ. ಗಾಜಾಪಟ್ಟಿ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿರುವ ಕಾರಣ ಸಾವಿನ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ ಎನ್ನಲಾಗಿದೆ. ಇಸ್ರೇಲ್‌ನಲ್ಲೂ ಸಾವಿರಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಮಾಸ್‌ ದಾಳಿಗೆ ಇಸ್ರೇಲ್‌ನಲ್ಲಿಯೇ 1,200 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ ಸೇನೆಯೇ ಮಾಹಿತಿ ನೀಡಿದೆ.

Exit mobile version