ಟೆಹ್ರಾನ್: ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ನಿಯಮ ಏನೇ ಇರಲಿ, ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಒಂದಷ್ಟು ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ನಾವು ಪರೀಕ್ಷೆಯನ್ನೇ ಬರೆಯುವುದಿಲ್ಲ ಎಂದು ಪರೀಕ್ಷಾ ಕೊಠಡಿಯಿಂದಲೇ ಹೊರಬಂದು ಶಿಕ್ಷಣ, ಭವಿಷ್ಯವನ್ನೇ ಅಡಕತ್ತರಿಗೆ ಸಿಲುಕಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಹಿಜಾಬ್ ಬೇಡ, ವಸ್ತ್ರಸಂಹಿತೆ ಕಿತ್ತುಹಾಕಿ ಎಂದು ಇಸ್ಲಾಮಿಕ್ ರಾಷ್ಟ್ರವಾದ ಇರಾನ್‌ನಲ್ಲಿಯೇ ಹೋರಾಟ ನಡೆಯುತ್ತಿದೆ!
22 ವರ್ಷದ ಮಹ್ಸಾ ಅಮಿನಿ ಎಂಬ ಯುವತಿಯ ಸಾವಿನಿಂದಾಗಿ ಇರಾನ್‌ನಲ್ಲಿ ಮಹಿಳೆಯರ ಆಕ್ರೋಶವು ಕಿಚ್ಚಾಗಿ ಬದಲಾಗಿದೆ. ಹಾಗಾದರೆ, ಇರಾನ್‌ನಲ್ಲಿ ಏಕೆ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ? ಅಲ್ಲಿ ಹಿಜಾಬ್ ವಿರುದ್ಧ ಏಕೆ ಹೋರಾಟ ನಡೆಯುತ್ತಿದೆ? ಅಷ್ಟಕ್ಕೂ, ಇಸ್ಲಾಮಿಕ್ ರಾಷ್ಟ್ರದಲ್ಲಿರುವ ಕಠಿಣ ನಿಯಮಗಳಾದರೂ ಯಾವವು? ಎಷ್ಟು ವರ್ಷದಿಂದ ಹೆಣ್ಣುಮಕ್ಕಳು ಇಷ್ಟದ ಬಟ್ಟೆ ಧರಿಸದೆ, ಇಷ್ಟದ ರೀತಿ ಇರದೆ ನೋವು ಅನುಭವಿಸುತ್ತಿದ್ದಾರೆ ಎಂಬುದರ ಸಂಕ್ಷಿಪ್ತ ವಿವರ, ಹೋರಾಟದ ಚಿತ್ರಣ ಇಲ್ಲಿದೆ.
ಕಿಡಿ ಹೊತ್ತಿಸಿದ ಮಹ್ಸಾ ಅಮಿನಿ ಪ್ರಕರಣ
ಇರಾನ್‌ನಲ್ಲಿ ಮಹ್ಸಾ ಅಮಿನಿ ಎಂಬ ೨೨ ವರ್ಷದ ಯುವತಿಯ ಸಾವಿನ ಪ್ರಕರಣವು ಆಕ್ರೋಶದ ಕಿಡಿಯನ್ನು ಕಾಡ್ಗಿಚ್ಚಾಗಿಸಿದೆ. ಕಳೆದ ವಾರ ಟೆಹ್ರಾನ್‌ನಲ್ಲಿ ಕುಟುಂಬಸ್ಥರ ಜತೆ ಮೆಟ್ರೊದಲ್ಲಿ ಸುತ್ತಾಡುವ ವೇಳೆ ಆಕೆ ಹಿಜಾಬ್ ನಿಯಮ ಉಲ್ಲಂಘಿಸಿದ್ದಾರೆ ಎಂದು ನೈತಿಕ ಪೊಲೀಸರು ಬಂಧಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ನೈತಿಕ ಪೊಲೀಸರು ಮಹ್ಸಾಗೆ ಮನಬಂದಂತೆ ಥಳಿಸಿದ್ದಾರೆ. ಹಿಜಾಬ್ ಧರಿಸಿಲ್ಲ ಎಂದು ಹಲ್ಲೆ ನಡೆಸಿದ್ದಾರೆ. ಹಾಗೆಯೇ, ಭಯಂಕರ ಕಿರುಕುಳ ನೀಡುವ ವೊಜಾರ ದಿಗ್ಬಂಧನ ಕೇಂದ್ರದಲ್ಲಿ ಆಕೆಯನ್ನು ಇರಿಸಿ, ಕಿರುಕುಳ ನೀಡಿದ್ದಾರೆ. ಹಾಗಾಗಿಯೇ, ಮಹ್ಸಾ ಅಮಿನಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಆದಾಗ್ಯೂ, ಬಂಧಿಸುವಾಗಲೇ ಆಕೆ ಅನಾರೋಗ್ಯಕ್ಕೀಡಾಗಿದ್ದಳು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರಾದರೂ, ಮಹಿಳೆಯರ ಆಕ್ರೋಶದ ಮುಂದೆ ಯಾವ ಸ್ಪಷ್ಟನೆಯೂ ಲೆಕ್ಕಕ್ಕೆ ಬರುತ್ತಿಲ್ಲ.
ಹೇಗಿದೆ ಇರಾನ್ ಮಹಿಳೆಯರ ಆಕ್ರೋಶ?
ಇರಾನ್‌ನಲ್ಲಿ ನಾಲ್ಕು ದಶಕದಿಂದ ನಡೆಯುತ್ತಿರುವ ದೌರ್ಜನ್ಯದ ವಿರುದ್ಧದ ಆಕ್ರೋಶವು ಕಟ್ಟೆಯೊಡೆದಿದೆ. ಅದರಲ್ಲೂ, ಮಹ್ಸಾ ಅಮಿನಿ ಪ್ರಕರಣವು ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿಯಷ್ಟೇ ತೀವ್ರವಾಗಿದೆ. ಪರದೆಯ ಹಿಂದೆ ಬಂಧಿಯಾಗಿದ್ದ ಹೆಣ್ಣುಮಕ್ಕಳು ಈಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಹಿಜಾಬ್ ವಿರುದ್ಧ ಹೋರಾಟ ನಡೆಯುತ್ತಿದೆ. ಟೆಹ್ರಾನ್ ಮಾತ್ರವಲ್ಲ ಹಲವು ನಗರಗಳಲ್ಲೂ ಹೋರಾಟವು ಜನಾಂದೋಲನದ ರೂಪ ಪಡೆಯುತ್ತಿದ್ದಾರೆ. ಹೆಣ್ಣುಮಕ್ಕಳು ಸಾರ್ವಜನಿಕವಾಗಿಯೇ ಹಿಜಾಬ್‌ಅನ್ನು ಸುಟ್ಟು, ಕೂದಲು ಕತ್ತರಿಸಿಕೊಂಡು ಸರ್ಕಾರದ ವಿರುದ್ಧ ಸೆಟೆದು ನಿಂತಿದ್ದಾರೆ. ಟಿಕ್‌ಟಾಕ್‌ನಂತಹ ವಿಡಿಯೊ ವೇದಿಕೆಗಳಲ್ಲಿ ಕೂದಲು ಕತ್ತರಿಸಿದ, ಹಿಜಾಬ್ ಸುಟ್ಟ ವಿಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಇರಾನ್‌ನಲ್ಲಿರುವ ಕಟ್ಟಳೆಯ ಉಗ್ರ ರೂಪವನ್ನು ಜಗತ್ತಿಗೆ ತೋರಿಸುತ್ತಿದ್ದಾರೆ.
ಹೀಗಿದೆ ಹಿಜಾಬ್ ನಿಯಮ
ಇರಾನ್‌ನಲ್ಲಿ ಏಳು ವರ್ಷ ದಾಟಿದ ಪ್ರತಿಯೊಬ್ಬ ಹೆಣ್ಣುಮಕ್ಕಳು ಹಿಜಾಬ್ ಧರಿಸಬೇಕು. ೧೯೭೯ರಲ್ಲಿ ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿಯಾದ ಬಳಿಕ ಹೆಣ್ಣುಮಕ್ಕಳಿಗೆ ಇಂತಹ ನಿಯಮ ರೂಪಿಸಲಾಗಿದೆ. ಯಾವುದೇ ಮಹಿಳೆಯು ಹೊರಗೆ ಬರುವಾಗ ತಲೆ, ಕುತ್ತಿಗೆ, ಕೂದಲೂ ಕಾಣಿಸದ ಹಾಗೆ ಹಿಜಾಬ್ ಧರಿಸಿಯೇ ಹೊರಬರಬೇಕು ಎಂಬ ನಿಯಮವಿದೆ. ಇಲ್ಲದಿದ್ದರೆ ಅದು ಶಿಕ್ಷಾರ್ಹ ಅಪರಾಧ ಎನಿಸಲಿದೆ. ಭಾರಿ ದಂಡ ವಿಧಿಸುವ, ಜೈಲಿಗೆ ಹಾಕುವ ಹಾಗೂ ದಿಗ್ಬಂಧನ ಕೇಂದ್ರಗಳಲ್ಲಿ ಕಿರುಕುಳ ನೀಡುವ ಹಕ್ಕುಗಳು ಈ ನೈತಿಕ ಪೊಲೀಸರಿಗೆ ಇವೆ.
ನೈತಿಕ ಪೊಲೀಸ್ ಎಂಬ ಸರ್ವಾಧಿಕಾರ
ಷರಿಯಾ ಕಾನೂನಿನ ಅಡಿಯಲ್ಲಿಯೇ ಇರಾನ್‌ನಲ್ಲಿ ನಿಯಮ ರೂಪಿಸಲಾಗಿದೆ. ಅದರಲ್ಲೂ, ಹೆಣ್ಣುಮಕ್ಕಳ ವಸ್ತ್ರಸಂಹಿತೆಯ ಜಾರಿಯಲ್ಲಿ ಸರ್ವಾಧಿಕಾರ ಮೆರೆಯಲಾಗುತ್ತದೆ. ಹೆಣ್ಣುಮಕ್ಕಳು ತಮಗೆ ಇಷ್ಟಬಂದ ಬಟ್ಟೆ ಧರಿಸದಂತೆ ನೋಡಿಕೊಳ್ಳಲು, ಹಿಜಾಬ್ ಕಡ್ಡಾಯ ನಿಯಮವನ್ನು ಜಾರಿಗೊಳಿಸಲು, ಇಸ್ಲಾಮಿಕ್ ಧಾರ್ಮಿಕ ಪೊಲೀಸ್ ಅಥವಾ ನೈತಿಕ ಪೊಲೀಸರ (Morality Police) ಪಡೆಯನ್ನೇ ರಚಿಸಲಾಗಿದೆ.
ನೈತಿಕ ಪೊಲೀಸರು ದೇಶಾದ್ಯಂತ ಹೆಣ್ಣುಮಕ್ಕಳು ವಸ್ತ್ರಸಂಹಿತೆ ಪಾಲಿಸುವಂತೆ ನೋಡಿಕೊಳ್ಳುವ ಜತೆಗೆ ಪಾಲಿಸದವರನ್ನು ಬಂಧಿಸುವ ಅಧಿಕಾರವನ್ನು ಹೊಂದಿದ್ದಾರೆ. ಇದರ ವಿರುದ್ಧ ಹಲವು ವರ್ಷಗಳಿಂದ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಇರಾನ್ ಪೊಲೀಸರ “ಅನೈತಿಕ” ಹಕ್ಕು ಮಾತ್ರ ಮುಂದುವರಿಯುತ್ತಲೇ ಇದೆ.
ಮುಸ್ಲಿಂ ಹೆಣ್ಣುಮಕ್ಕಳ ನೋವಿಗೆ ಕಿವಿಯಾಗುವುದು ಯಾರು?
ಭಾರತದಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಶಿಕ್ಷಣವೇ ಬೇಡ ಎನ್ನುವ ವಿದ್ಯಾರ್ಥಿನಿಯರಿದ್ದಾರೆ. ಆದರೆ, ಇರಾನ್‌ನಂತಹ ಇಸ್ಲಾಮಿಕ್ ರಾಷ್ಟ್ರದಲ್ಲಿಯೇ ಹಿಜಾಬ್ ಬೇಡ, ನಮಗೂ ಬಟ್ಟೆ ಧರಿಸುವ ಸ್ವಾತಂತ್ರ್ಯ ನೀಡಿ ಎಂದು ಹೆಣ್ಣುಮಕ್ಕಳು ದಶಕಗಳಿಂದಲೂ ಹೋರಾಡುತ್ತಿದ್ದಾರೆ. ೨೦೨೦ರಲ್ಲಿ ಪ್ರಕಟವಾದ ಸಮೀಕ್ಷಾ ವರದಿ ಪ್ರಕಾರ, ಶೇ.೭೨ರಷ್ಟು ಇರಾನ್ ಮಹಿಳೆಯರು ಮುಖ ಮುಚ್ಚಿಕೊಂಡೇ ತಿರುಗಾಡಬೇಕು ಎಂಬ ನಿಯಮ ಬೇಡ ಎಂದಿದ್ದಾರೆ. ೨೦೧೪ರಲ್ಲಿ ಪ್ರಕಟವಾದ ಸಮೀಕ್ಷಾ ವರದಿಯಲ್ಲಿ ಹೀಗೆ ಹಿಜಾಬ್ ಬೇಡ ಎನ್ನುವವರ ಸಂಖ್ಯೆ ಶೇ.೪೯ರಷ್ಟಿತ್ತು. ಆರೇ ವರ್ಷದಲ್ಲಿ ಇದು ಶೇ.೭೨ಕ್ಕೆ ಏರಿಕೆಯಾಗಿರುವುದು ಅಲ್ಲಿನ ಹೆಣ್ಣುಮಕ್ಕಳ ಮನಸ್ಥಿತಿ ಬದಲಾಗಿರುವುದಕ್ಕೆ ಸಾಕ್ಷಿಯಾಗಿದೆ. ಆದರೆ, ಇರಾನ್‌ನಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಆಸೆ, ಆಕಾಂಕ್ಷೆಗಳಿಗೆ, ನೋವಿಗೆ ಕಿವಿಯಾಗುವವರು ಯಾರು ಎಂಬುದೇ ಜಾಗತಿಕ ಪ್ರಶ್ನೆಯಾಗಿದೆ.
ಕೈಕಟ್ಟಿ ಕುಳಿತ ಜಾಗತಿಕ ಸಂಸ್ಥೆಗಳು
ಭಾರತದಲ್ಲಿ ಒಂದು ಸಣ್ಣ ಘಟನೆಯಾದರೂ ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸುತ್ತದೆ. ಆದರೆ, ಅಫಘಾನಿಸ್ತಾನದಲ್ಲಿ ಹೆಣ್ಣುಮಕ್ಕಳು ಒಂಟಿಯಾಗಿ ಹೊರಬರದಂತಹ ಸ್ಥಿತಿ ಇದೆ. ತಾಲಿಬಾನಿಗಳು ಹಲವು ತಿಂಗಳಿಂದ ಇಂತಹ ಕಠಿಣ ಕ್ರಮ ವಿಧಿಸಿದ್ದಾರೆ. ಈಗ ಇರಾನ್‌ನಲ್ಲಿ ಮಹ್ಸಾ ಅಮಿನಿ ಪ್ರಕರಣವು ಭುಗಿಲೆದ್ದಿದೆ. ದಶಕಗಳಿಂದ ಸ್ತ್ರೀಯರ ಹಕ್ಕುಗಳನ್ನು ದಮನ ಮಾಡಲಾಗಿದೆ. ಹೀಗಿದ್ದರೂ ವಿಶ್ವಸಂಸ್ಥೆ ಮಹಿಳಾ ಹಕ್ಕುಗಳ ಸಂಸ್ಥೆ, ಮಾನವ ಹಕ್ಕುಗಳ ಸಂಸ್ಥೆಗಳು ಸೇರಿ ಜಗತ್ತಿನ ಯಾವುದೇ ಮಹಿಳಾ ಹಕ್ಕುಗಳ ಸಂಘಟನೆಗಳು ಸೊಲ್ಲೆತ್ತುವುದಿಲ್ಲ. ಜಾಗತಿಕವಾಗಿ ಇಂತಹ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುವುದಿಲ್ಲ. ಯಾವಾಗಲೂ ಒಂದು ಸಭೆ ನಡೆಸಿ, ಖಂಡನೆ ವ್ಯಕ್ತಪಡಿಸಿ, ಬಳಿಕ ಮಗುಮ್ಮಾಗಿ ಬಿಡುತ್ತವೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ.
ಇದನ್ನೂ ಓದಿ | Mahsa Amini | ಕೂದಲು ಕತ್ತರಿಸಿ, ಹಿಜಾಬ್ ಸುಟ್ಟು ಇರಾನಿ ಮುಸ್ಲಿಮ್ ಮಹಿಳೆಯರ ಪ್ರತಿಭಟನೆ!