ವಾಷಿಂಗ್ಟನ್: ಸದಾ ಹೊಸತನಕ್ಕೆ ತೆರೆದುಕೊಳ್ಳುವ ಅಮೆರಿಕ ತನ್ನ ನೀತಿಗಳ ಮೂಲಕವೇ ತಾನೆಷ್ಟು ಪ್ರಗತಿಪರ ಎಂಬುದನ್ನು ತೋರಿಸಿಕೊಡುತ್ತದೆ. ಈ ಗ ಅಮೆರಿಕ ತನ್ನ ಸೇನೆ(US Military)ಯ ಸಮವಸ್ತ್ರ ನೀತಿಯನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಹೊಸ ನೀತಿಯ ಅನ್ವಯ ಅಮೆರಿಕ ಸೇನೆಯ ಎಲ್ಲ ವಿಭಾಗಗಳಲ್ಲೂ ಹಿಜಾಬ್, ಮುಸ್ಲಿಮ್ ಟೋಪಿ, ಟರ್ಬನ್ಸ್, ಯಾರ್ಮಲ್ಕ್(ಯೆಹೂದಿಗಳ ಟೋಪಿ) ಧರಿಸಬಹುದು, ಜತೆಗೆ ಗಡ್ಡ ಕೂಡ ಬಿಡಬಹುದು! ಅಮೆರಿಕದ ಪ್ರೆಸಿಡೆನ್ಷಿಯಲ್ ಕಮಿಷನ್ ಈ ಶಿಫಾರಸುಗಳನ್ನು ಮಾಡಿದೆ. ಸರ್ಕಾರವೇನಾದರೂ ಈ ಶಿಫಾರುಸುಗಳಿಗೆ ಒಪ್ಪಿಗೆ ಸೂಚಿಸಿದರೆ, ಅಮೆರಿಕ ಸೇನೆಯ ಸಮವಸ್ತ್ರ ನೀತಿಯಲ್ಲಿ ಆಮೂಲಾಗ್ರ ಬದಲಾವಣೆಯಾಗಲಿದೆ.
ಏಷ್ಯನ್ ಅಮೆರಿಕನ್ಸ್, ನೇಟಿವ್ ಹವಾಯಿನ್ಸ್, ಪೆಸಿಫಿಕ್ ಐಲ್ಯಾಂಡರ್ಸ್‌ಗೆ ಸಂಬಂಧಿಸಿದಂತೆ ಅಧ್ಯಕ್ಷರಿಗೆ ಸಲಹೆ ನೀಡುವ, ಅಡ್ವೈಸರಿ ಕಮಿಷನ್ ಈ ಶಿಫಾರಸುಗಳ ವರದಿಯನ್ನು ಬಿಡುಗಡೆ ಮಾಡಿದೆ. ಮೇ 12ರಂದೇ ಈ ಶಿಫಾರಸುಗಳಿಗೆ ಒಪ್ಪಿಗೆ ದೊರೆತಿದೆ ಎಂದು ಹೇಳಲಾಗುತ್ತಿದೆ.
1981ರ ಸೇನಾ ಸಮವಸ್ತ್ರ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಅಮೆರಿಕದ ಸೇನೆಯಲ್ಲಿ ಟರ್ಬನ್ಸ್, ಹಿಜಾಬ್, ಯಾರ್ಮಲ್ಕೇಸ್, ಸ್ಕಲ್ ಕ್ಯಾಪ್‌ಗಳನ್ನು ಸೇನೆಯಲ್ಲಿ ಧರಿಸುವುದನ್ನು ನಿಲ್ಲಿಸಲಾಗಿದೆ. 2017 ಮತ್ತ 2020ರಲ್ಲಿ ಅಮೆರಿಕದ ಸೇನೆ ಮತ್ತು ವಾಯು ಪಡೆಯು ಧಾರ್ಮಿಕ ನಂಬಿಕೆ ಸಂಕೇತಗಳಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಪರಿಷ್ಕರಿಸಿದೆ. ಅದರನ್ವಯ ವಾಯುಪಡೆಯಲ್ಲಿ ಈ ಧಾರ್ಮಿಕ ಸಂಕೇತಗಳನ್ನು ಧರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸೇನೆ ಮತ್ತು ವಾಯುಪಡೆಯಲ್ಲಿ ಸಲ್ಲಿಸುತ್ತಿರುವ ನೂರಾರು ಸೈನಿಕರು, ಸಿಬ್ಬಂದಿ ಧಾರ್ಮಿಕ ಸಂಕೇತಗಳನ್ನು ಧರಿಸುತ್ತಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ. ಅದೇ ರೀತಿ, ಅಮೆರಿಕ ಸೇನೆಯ ಎಲ್ಲ ವಿಭಾಗಗಳಲ್ಲಿ ಈ ಅವಕಾಶ ಕೊಡಬೇಕು ಎಂದು ತಿಳಿಸಲಾಗಿದೆ.
ಅಮೆರಿಕ ನೌಕಾ ಪಡೆ ಮತ್ತು ಕರಾವಳಿ ಪಡೆಯಲ್ಲಿ ಇದಕ್ಕೆ ಅವಕಾಶವಿಲ್ಲ. ಧಾರ್ಮಿಕ ಆಚರಣೆಯ ವಸ್ತುಗಳನ್ನು ಧರಿಸಲು ಇಲ್ಲಿ ನಿರ್ಬಂಧಿಸಲಾಗಿದೆ. ಇದರಿಂದಾಗಿ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು ತಮ್ಮ ಧಾರ್ಮಿಕ ಪದ್ಧತಿಗಳನ್ನು ಅವರು ಉಲ್ಲಂಘಿಸುತ್ತಿದ್ದಾರೆಂದು ಅದರಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | Female pilots | ಅಮೆರಿಕಕ್ಕಿಂತಲೂ ದುಪ್ಪಟ್ಟು ಮಹಿಳಾ ಪೈಲಟ್‌ಗಳು ಭಾರತದಲ್ಲಿ!