ನವದೆಹಲಿ: ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ (Pakistan election Result) ಈಗ ರಾಜಕೀಯ ಅರಾಜಕತೆ ಕೂಡ ಎದುರಾಗಿದೆ(Political Crisis). ಯಾಕೆಂದರೆ, ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತ ದೊರೆತಿಲ್ಲ. ಹಾಗಾಗಿ, ಸಂಸದರ ಕುದುರೆ ವ್ಯಾಪಾರ ಭೀತಿ ಎದುರಾಗಿದೆ. ಸದ್ಯ ಜೈಲಿನಲ್ಲಿರುವ ಕ್ರಿಕೆಟಿಗ, ಮಾಜಿ ಪಿಎಂ ಇಮ್ರಾನ್ ಖಾನ್(Imran Khan) ಅವರ ಪಕ್ಷದ ಬೆಂಬಲಿತರು 101 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ್ದಾರೆ. ಆದರೂ, ಸರಳ ಬಹುಮತಕ್ಕೆ ಇನ್ನೂ 32 ಸ್ಥಾನಗಳ ಕೊರತೆ ಇದೆ. ಇನ್ನು ಪಿಎಂಎಲ್-ಎನ್ (PML-N) 73 ಮತ್ತು ಪಿಪಿಪಿ (PPP) 54 ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯಲ್ಲಿ ಒಟ್ಟು 266 ಸ್ಥಾನಗಳಿವೆ.
ಗುರುವಾರ ಸಂಜೆ ಮತದಾನ ಮುಗಿದ ಸುಮಾರು 60 ಗಂಟೆಗಳ ನಂತರ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಯಿತು. ಪಾಕಿಸ್ತಾನ ಚುನಾವಣಾ ಆಯೋಗವು ಇಂಟರ್ನೆಟ್ ಸಮಸ್ಯೆಗಳಿಂದ ವಿಳಂಬಕ್ಕೆ ಕಾರಣವಾಗಿದೆ. ಪರಿಣಾಮ ಫಲಿತಾಂಶಗಳನ್ನು ಪ್ರಕಟಿಸುವುದು ಬಾರೀ ತೊಂದರೆಯಾಯಿತು ಎಂದು ತಿಳಿದು ಬಂದಿದೆ.
ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಸೇನೆಯ ಬೆಂಬಲದೊಂದಿಗೆ ಮತ್ತು ಚುನಾವಣೆಯಲ್ಲಿ ಗೆಲ್ಲುವ ನೆಚ್ಚಿನ ಪಕ್ಷವಾಗಿದ್ದು, 266 ಸ್ಥಾನಗಳ ಅಸೆಂಬ್ಲಿಯಲ್ಲಿ ಕೇವಲ 73 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.
ಖಾನ್ ಮತ್ತು ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಇಬ್ಬರೂ ನಿನ್ನೆ ತಾವೇ ಗೆದ್ದಿದ್ದು ಎಂದು ವಿಜಯದ ಭಾಷಣ ಕೂಡ ಮಾಡಿದ್ದರು. ಬಹು ಸವಾಲುಗಳನ್ನು ಎದುರಿಸಲು ತ್ವರಿತ ನೀತಿ ಕ್ರಮದ ಅಗತ್ಯವಿರುವ ಸಮಯದಲ್ಲಿ ಮುಂದಿನ ಸರ್ಕಾರವನ್ನು ಯಾರು ರಚಿಸುತ್ತಾರೆ ಎಂಬುದರ ಕುರಿತು ಭಾರೀ ಅನಿಶ್ಚಿತತೆ ಮೂಡಿದೆ.
ಸ್ವತಂತ್ರ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. 24.1 ಕೋಟಿ ಜನರಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿರಂತರ ಜನಪ್ರಿಯತೆಯನ್ನು ಸೂಚಿಸುತ್ತದೆ. ಏಷ್ಯಾದಲ್ಲೇ ಅತಿ ಹೆಚ್ಚಿನ ಪ್ರಮಾಣದ ಹಣದುಬ್ಬರವನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರ ನಾಯಕತ್ವವೇ ಸೂಕ್ತ ಎಂದು ಹೆಚ್ಚಿನವರು ಭಾವಿಸಿದಂತಿದೆ.
ಪಿಟಿಐ ಬೆಂಬಲಿತ ಹಲವಾರು ಸ್ವತಂತ್ರರು ಚುನಾವಣಾ ಫಲಿತಾಂಶದಲ್ಲಿ ವಂಚನೆ ಮಾಡಿದ್ದಾರೆ ಮತ್ತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಹಲವಾರು ಅಭ್ಯರ್ಥಿಗಳು ಮತಗಳನ್ನು ಕದಿಯಲಾಗಿದೆ ಎಂದು ಆರೋಪಿಸಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಹೇಳಿವೆ. ಫಲಿತಾಂಶಗಳ ಪ್ರಕಟಣೆಯಲ್ಲಿ ಭಾರೀ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿ, ಪಿಟಿಐ ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಪ್ರಾರಂಭಿಸಿದೆ.
ಅಧಿಕಾರದಿಂದ ಇಮ್ರಾನ್ ಖಾನ್ ಅವರನ್ನು ದೂರ ಇಡುವುದಕ್ಕಾಗಿ ನವಾಜ್ ಷರೀಫ್ ಮ್ತತು ಬಿಲಾವಲ್ ಭುಟ್ಟೋ ಅವರು ಸಮ್ಮಿಶ್ರ ಸರ್ಕಾರ ರಚಿಸುವ ಸಂಬಂಧ ಮಾತುಕತೆಗಳನ್ನು ನಡೆಸಿದ್ದಾರೆ. ಷರೀಫ್ ಅವರ ಪಿಎಂಎಲ್-ಎನ್ ಮತ್ತು ಬಿಲಾವಲ್ ಭುಟ್ಟೋ ಅವರ ಪಿಪಿಪಿ ಜತೆಗೂಡಿದರು, ಅವರಿಗೆ ಸರಳ ಬಹುಮತಕ್ಕೆ ಇನ್ನೂ 6 ಸ್ಥಾನಗಳು ಕಡಿಮೆ ಬೀಳುತ್ತವೆ.
ಈ ಸುದ್ದಿಯನ್ನೂ ಓದಿ: Pakistan Election: ಪಾಕ್ ಸೇನೆಯಿಂದ ಇಮ್ರಾನ್ ಖಾನ್ ಕೊಲ್ಲಲು ಸಂಚು? ಸರ್ಕಾರ ರಚನೆಗೆ ನವಾಜ್ ಷರೀಫ್- ಬಿಲಾವಲ್ ಭುಟ್ಟೋ ಒಪ್ಪಂದ