ಲಾಹೋರ್, ಪಾಕಿಸ್ತಾನ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಅವರ ಬಂಧನಕ್ಕೆ ಆಗಮಿಸಿರುವ ಪೊಲೀಸರನ್ನು, ಖಾನ್ ಬೆಂಬಲಿಗರು ತಡೆದಿರುವ ಘಟನೆ ಲಾಹೋರ್‌ನಲ್ಲಿ ನಡೆದಿದೆ. ಈ ವೇಳೆ, ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಇಮ್ರಾನ್ ಖಾನ್ ಅವರು, ನಾನು ಜೈಲಿಗೆ ಹೋದರೂ ಅಥವಾ ಹತ್ಯೆಗೀಡಾದರೂ ನೀವು ನಿಮ್ಮ ಹಕ್ಕುಗಳಿಗೆ ಹೋರಾಡುವುದನ್ನು ಬಿಡಬೇಡಿ ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನಕ್ಕೆ ಮುಂದಾಗಿದ್ದಾರೆ. ಬಂಧಿಸಲು ಆಗಮಿಸಿದ ಪೊಲೀಸರ ಮೇಲೆ ಖಾನ್ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಜಲ ಫಿರಂಗಿಗಳನ್ನು ಸಿಡಿಸಿ, ಜನರನ್ನು ಚುದುರಿಸುವ ಪ್ರಯತ್ನ ಮಾಡಿದ್ದಾರೆ.
ವಿಡಿಯೋ ಸಂದೇಶ ರಿಲೀಸ್ ಮಾಡಿದ ಇಮ್ರಾನ್
ವಿಡಿಯೋವೊಂದನ್ನು ಬಿಡುಗಡೆ ಮಾಡಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿರುವ ಇಮ್ರಾನ್ ಖಾನ್ ಅವರು, ನನ್ನನ್ನು ಬಂಧಿಸಲು ಪೊಲೀಸರು ಆಗಮಿಸಿದ್ದಾರೆ. ಒಂದು ವೇಳೆ ಇಮ್ರಾನ್ ಖಾನ್ ಜೈಲಿಗೆ ಹೋದರೆ, ಜನರು ನಿದ್ದೆ ಮಾಡಲು ಹೊರಟು ಹೋಗುತ್ತಾರೆಂದು ಅವರು ಭಾವಿಸಿದ್ದಾರೆ. ಆದರೆ, ಅವರ ಎಣಿಕೆ ತಪ್ಪೆಂದು ನೀವು ಸಾಬೀತು ಮಾಡಬೇಕು. ಜನರು ಇನ್ನೂ ಜೀವಂತವಾಗಿದ್ದಾರೆಂದು ನೀವು ನಿರೂಪಿಸಬೇಕು ಎಂದು ಖಾನ್ ಹೇಳಿದ್ದಾರೆ.
ನಿಮ್ಮ ಹಕ್ಕುಗಳಿಗಾಗಿ ನೀವು ಹೋರಾಡಬೇಕು. ಬೀದಿಗಿಳಿಯಿರಿ. ನಾನು ನಿಮ್ಮ ಯುದ್ಧವನ್ನು ಹೋರಾಡುತ್ತೇನೆ. ನನ್ನ ಜೀವನ ಪೂರ್ತಿ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಅದನ್ನು ಮುಂದುವರಿಸುತ್ತೇನೆ. ಒಂದು ವೇಳೆ, ನನಗೇನಾದರೂ ಆದರೆ? ಅವರು ನನ್ನನ್ನು ಜೈಲಿನಲ್ಲಿಡಬಹುದು ಅಥವಾ ಕೊಂದೇ ಹಾಕಬಹುದು. ಆದರೆ, ನೀವು ಇಮ್ರಾನ್ ಖಾನ್ ಇಲ್ಲದೆಯೂ ಹೋರಾಟ ಮಾಡಬಲ್ಲೆವು ಎಂಬುದನ್ನು ಸಾಬೀತು ಮಾಡಬೇಕು. ಗುಲಾಮಿತನ ಎಂದೂ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ನೀವು ಸಾಬೀತು ಮಾಡಬೇಕು ಎಂದು ಹೇಳಿರುವ ಇಮ್ರಾನ್ ಖಾನ್ ಪಾಕಿಸ್ತಾನ್ ಜಿಂದಾಬಾದ್ ಎಂದು ಮಾತು ಮುಗಿಸಿದ್ದಾರೆ.
ಇದನ್ನೂ ಓದಿ: Imran Khan | ಇಮ್ರಾನ್ ಖಾನ್ ಕೊಲ್ಲುವುದಷ್ಟೇ ಗುರಿಯಾಗಿತ್ತು! ಬಂಧಿತ ದಾಳಿಕೋರನ ಹೇಳಿಕೆ
ಏನಿದು ತೋಷಖಾನಾ ಭ್ರಷ್ಟಾಚಾರ ಕೇಸ್?
70 ವರ್ಷದ ರಾಜಕಾರಣಿ, ಕ್ರಿಕೆಟ್ ದಂತಕಥೆಯೂ ಆಗಿರುವ ಇಮ್ರಾನ್ ಖಾನ್ ಅವರು ತೋಷಖಾನಾ ಭ್ರಷ್ಟಾಚಾರ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ವಿದೇಶಿ ಗಣ್ಯರಿಂದ ಪಡೆದುಕೊಂಡಿರುವ ಉಡುಗೊರೆಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿರುವ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಚುನಾವಣಾ ಆಯೋಗದಿಂದ ಘೋಷಿಸಿಲ್ಪಟ್ಟಿದ್ದಾರೆ. ಈ ಸಂಬಂಧ ಪಾಕಿಸ್ತಾನ ಚುನಾವಣಾ ಆಯೋಗವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಮ್ರಾನ್ ವಿರುದ್ಧ ವಿಚಾರಣೆ ನಡೆಸಿತ್ತು. ಬಳಿಕ ಅವರ ವಿರುದ್ಧ ಭ್ರಷ್ಟಾಚಾರ-ವಿರೋಧಿ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಯಿತು. ಅವರ ವಿರುದ್ಧ ಸಮನ್ಸ್ ಹೊರಡಿಸಲಾಗಿತ್ತು. ಆದರೆ, ಅವರು ಹಾಜರಾಗಲು ವಿಫಲವಾದ್ದರಿಂದ ಈಗ ಬಂಧನದ ವಾರಂಟ್ ಹೊರಡಿಸಲಾಗಿದೆ.