ಕರಾಚಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Pakistan Ex PM Imran Khan) ಅವರಿಗೆ ಮತ್ತೊಂದು ಪ್ರಕರಣದಲ್ಲಿ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅವರ ಪತ್ನಿ ಬುಶ್ರಾ ಬೀಬಿಗೂ (Bushra Bibi) ಇದೇ ಶಿಕ್ಷೆಯಾಗಿದೆ. ನಿನ್ನೆ ತಾನೇ ಸರ್ಕಾರಿ ರಹಸ್ಯಗಳನ್ನು ಬಹಿರಂಗ ಮಾಡಿದ ಪ್ರಕರಣವೊಂದರಲ್ಲಿ ಅವರಿಗೆ 10 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿತ್ತು.
ತೋಷಖಾನಾ (ಖಜಾನೆಗೆ ಸೇರಬೇಕಾದ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ ಪ್ರಕರಣ) ಪ್ರಕರಣದಲ್ಲಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿಗೆ 14 ವರ್ಷಗಳ ಜೈಲು ಶಿಕ್ಷೆಯಾಗಿದೆ ಎಂದು ಡಾನ್ ವರದಿ ಮಾಡಿದೆ. ಮುಂಬರುವ ಫೆಬ್ರವರಿ 8ರ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರಿ ಸ್ಪರ್ಧೆ ಒಡ್ಡಲು ಮುಂದಾಗಿದ್ದ ಇಮ್ರಾನ್ ಅವರ ಚುನಾವಣಾ ಮಹತ್ವಾಕಾಂಕ್ಷೆಗಳಿಗೆ ಇದರಿಂದ ಮತ್ತೊಂದು ಹಿನ್ನಡೆಯಾಗಿದೆ.
ಅಕೌಂಟಬಿಲಿಟಿ ಕೋರ್ಟ್ ನ್ಯಾಯಾಧೀಶ ಮೊಹಮ್ಮದ್ ಬಶೀರ್ ಅವರು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಇಮ್ರಾನ್ ಖಾನ್ ಅವರ ವಿಚಾರಣೆ ನಡೆಸಿದರು. ಅಲ್ಲಿ ಮಾಜಿ ಪ್ರಧಾನಿಯನ್ನು ಪ್ರಸ್ತುತ ಬಂಧಿಸಿಡಲಾಗಿದೆ. ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಇಬ್ಬರೂ 14 ವರ್ಷಗಳ ಜೈಲು ಶಿಕ್ಷೆ ಮತ್ತು ಭಾರಿ ದಂಡವನ್ನು ಪಡೆದರು. ಜೊತೆಗೆ ಮುಂದಿನ 10 ವರ್ಷಗಳ ಕಾಲ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದದಿರುವ ನಿರ್ಬಂಧವೂ ಸೇರಿದೆ.
ನಿನ್ನೆ, ಸರ್ಕಾರಿ ದಾಖಲೆ ಹೊರಗೆಡವಿದ ಪ್ರಕರಣದಲ್ಲಿ ಇಮ್ರಾನ್‌ಗೆ 10 ವರ್ಷ ಜೈಲು ವಿಧಿಸಲಾಗಿತ್ತು. ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಯೊಂದನ್ನು ಅಮೆರಿಕಕ್ಕೆ ನೀಡಿದ್ದಾರೆ ಎಂಬ ಆರೋಪ. ಇದಕ್ಕೆ ಸಂಬಂಧಿಸಿದಂತೆ ಅಫಿಶಿಯಲ್ ಸೀಕ್ರೆಟ್ಸ್ ಆ್ಯಕ್ಟ್ ಅನ್ವಯ ಇಮ್ರಾನ್ ಖಾನ್ ಹಾಗೂ ಮಾಜಿ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಇಮ್ರಾನ್ ಖಾನ್ ಹಾಗೂ ಶಾ ಮಹ್ಮೂದ್ ಖುರೇಷಿ ಅವರಿಗೆ ತಲಾ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇಮ್ರಾನ್ ಖಾನ್ ಅವರು ರಹಸ್ಯ ದಾಖಲೆಯನ್ನು ತನಿಖಾ ಸಂಸ್ಥೆಗಳಿಗೆ ವಾಪಸ್ ನೀಡಿಲ್ಲ ಎಂದು ಫೆಡರಲ್ ಏಜೆನ್ಸಿಯು ಕೋರ್ಟ್ ತಿಳಿಸಿದೆ. ಇದಾದ ಬಳಿಕ ಕೋರ್ಟ್ ಶಿಕ್ಷೆ ವಿಧಿಸಿದೆ.
ಚುನಾವಣೆ ಆಯೋಗವು ಈಗಾಗಲೇ ಇಮ್ರಾನ್ ಖಾನ್ ಅವರಿಗೆ ಭಾರಿ ಶಾಕ್ ನೀಡಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಇಮ್ರಾನ್ ಖಾನ್ ಅವರು 2024ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸವಂತಿಲ್ಲ ಎಂದು ಪಾಕಿಸ್ತಾನ ಚುನಾವಣೆ ಆಯೋಗ (Election Commission of Pakistan) ಹೇಳಿದೆ. ಇಮ್ರಾನ್ ಖಾನ್ ಅವರು ಸಲ್ಲಿಸಿದ ನಾಮನಿರ್ದೇಶನಗಳನ್ನು ಪಾಕ್ ಚುನಾವಣೆ ಆಯೋಗವು ನಿರಾಕರಿಸಿದೆ. ಇದರ ಬೆನ್ನಲ್ಲೇ ಇಮ್ರಾನ್ ಖಾನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: Imran Khan: ಇಮ್ರಾನ್ ಖಾನ್‌ಗೆ 10 ವರ್ಷ ಜೈಲು; ಪಾಕ್ ಚುನಾವಣೆ ಮೊದಲೇ ಶಾಕ್