ತೋಷಖಾನಾ ಭ್ರಷ್ಟಾಚಾರ, ಅಲ್-ಖಾದಿರ್ ಟ್ರಸ್ಟ್ ಪ್ರಕರಣ, ದಂಗೆಗೆ ಕುಮ್ಮಕ್ಕು, ಕೊಲೆಯತ್ನ ಹೀಗೆ ಹಲವು ಕೇಸ್ಗಳಲ್ಲಿ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ (Imran Khan)ರನ್ನು ಇತ್ತೀಚೆಗೆ ಇಸ್ಲಮಾಬಾದ್ ಹೈಕೋರ್ಟ್ ಆವರಣದಿಂದ ಬಂಧಿಸಲಾಗಿತ್ತು. ತಮ್ಮ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಗಾಗಿ ಹೈಕೋರ್ಟ್ಗೆ ತೆರಳಿದ್ದ ಅವರನ್ನು ಬಂಧಿಸಿದ್ದ ಕ್ರಮವನ್ನು ಸುಪ್ರೀಂಕೋರ್ಟ್ ಕಟುವಾಗಿ ಟೀಕಿಸಿತ್ತು. ಇಮ್ರಾನ್ ಖಾನ್ ಬಂಧನ ಕಾನೂನು ಬಾಹಿರವಾಗಿದೆ. ತಕ್ಷಣವೇ ಅವರನ್ನು ಬಿಡುಗಡೆ ಮಾಡಬೇಕು ಮತ್ತು ಅವರ ವಿರುದ್ಧ ಅರ್ಜಿ ವಿಚಾರಣೆ ನಡೆಸುತ್ತಿರುವ ಇಸ್ಲಮಾಬಾದ್ ಹೈಕೋರ್ಟ್ ಏನು ತೀರ್ಮಾನ ಮಾಡುತ್ತದೆಯೋ ಅದರಂತೆಯೇ ಕಾನೂನು ಕ್ರಮ ಆಗಬೇಕು ಎಂದು ಆದೇಶಿಸಿತ್ತು.
ಅದರ ಬೆನ್ನಲ್ಲೇ ಇಮ್ರಾನ್ ಖಾನ್ ಅವರಿಗೆ ಅಲ್ ಖಾದಿರ್ ಟ್ರಸ್ಟ್ ಕೇಸ್ನಲ್ಲಿ ಇಸ್ಲಮಾಬಾದ್ ಹೈಕೋರ್ಟ್ನಿಂದ ಜಾಮೀನು ಸಿಕ್ಕಿದೆ. 2 ವಾರಗಳ ಅವಧಿಯ ಜಾಮೀನನ್ನು ಕೋರ್ಟ್ ನೀಡಿದೆ. ಇಂದು ಇಸ್ಲಮಾಬಾದ್ ಹೈಕೋರ್ಟ್ಗೆ ಅವರು ಬಿಗಿ ಭದ್ರತೆ ನಡುವೆ ಹೋಗಿದ್ದಾರೆ. ಪೊಲೀಸರು, ಪ್ಯಾರಾಮಿಲಿಟರಿ ಸಿಬ್ಬಂದಿ ಅವರ ರಕ್ಷಣೆಗೆ ನಿಯೋಜನೆಗೊಂಡಿದ್ದರು. ಒಳಗೆ ಇಮ್ರಾನ್ ಖಾನ್ ವಿಚಾರಣೆ ನಡೆಯುತ್ತಿದ್ದರೆ, ಹೊರಗೆ ಅವರ ಬೆಂಬಲಿಗರು ಸಾವಿರಾರು ಮಂದಿ ನಿಂತು ಇಮ್ರಾನ್ ಖಾನ್ ಪರ ಘೋಷಣೆಗಳನ್ನು ಕೂಗುತ್ತಿದ್ದರು. ’ಖಾನ್ ನಿನ್ನ ಭಕ್ತರ ಸಂಖ್ಯೆಯಲ್ಲಿ ಲೆಕ್ಕವಿಲ್ಲ’ ‘ವಕೀಲರು ಇನ್ನೂ ಜೀವಂತವಾಗಿದ್ದಾರೆ’ ಎಂಬಿತ್ಯಾದಿ ಬರಹಗಳುಳ್ಳ ಪೋಸ್ಟರ್ ಹಿಡಿದು ನಿಂತಿದ್ದರು. ಅಂದರೆ ಇಮ್ರಾನ್ ಖಾನ್ ಅವರು ಕಾನೂನು ತೊಡಕುಗಳಿಂದ ಹೊರಬರುತ್ತಾರೆ ಎಂದು ಅವರೆಲ್ಲ ಹೇಳುತ್ತಿದ್ದರು.
ಇದನ್ನೂ ಓದಿ: Imran Khan: ವಿಷದ ಇಂಜೆಕ್ಷನ್ ಕೊಡಬಹುದೆಂಬ ಭಯದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್; ಪಾಕಿಸ್ತಾನ ರಣರಂಗ
ಇನ್ನು ತೋಷಖಾನಾ ಭ್ರಷ್ಟಾಚಾರ ಕೇಸ್ನಡಿ ಅರೆಸ್ಟ್ ಆಗುವುದಕ್ಕೆ ಈಗಾಗಲೇ ಅವರು ಕೋರ್ಟ್ನಿಂದ ತಡೆ ಪಡೆದಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಒಂದೆರಡಲ್ಲ 121 ಪ್ರಕರಣಗಳು ಇವೆ. ಸದ್ಯ ಎಲ್ಲ ಪ್ರಕರಣಗಳಲ್ಲೂ ಅವರಿಗೆ ಜಾಮೀನು ಸಿಕ್ಕಿದೆ. ಮೇ 9ರ ನಂತರ ಇಮ್ರಾನ್ ಖಾನ್ ವಿರುದ್ಧ ಯಾವುದೇ ಕೇಸ್ಗಳು ದಾಖಲಾಗಿದ್ದರೂ, ಅದರಡಿಯಲ್ಲಿ ಇಮ್ರಾನ್ರನ್ನು ಬಂಧಿಸುವಂತಿಲ್ಲ ಎಂದು ಕೋರ್ಟ್ ಈಗಾಗಲೇ ನಿರ್ದೇಶನ ನೀಡಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೇ, ಅಲ್ ಖಾದಿರ್ ಟ್ರಸ್ಟ್ ಕೇಸ್ ಎಂದರೆ ಅಲ್ ಖಾದಿರ್ ಯೂನಿವರ್ಸಿಟಿ ಟ್ರಸ್ಟ್ನ ಪ್ರಕರಣ. ಇದೂ ಒಂದು ಭ್ರಷ್ಟಾಚಾರ ಕೇಸ್. ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಒಡೆತನದಲ್ಲಿ ಇರುವ ಈ ಟ್ರಸ್ಟ್ಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು, ಉದ್ಯಮಿ ಮಲಿಕ್ ರಿಯಾಜ್ನಿಂದ ಅಕ್ರಮವಾಗಿ ಪಡೆದಿದ್ದಾರೆ ಎಂಬ ಆರೋಪವನ್ನು ಇಮ್ರಾನ್ ಖಾನ್ ಎದುರಿಸುತ್ತಿದ್ದಾರೆ.