ಲಾಹೋರ್: ಅವಧಿಪೂರ್ವ ಚುನಾವಣೆಗೆ ಆಗ್ರಹಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ದೀರ್ಘ ನಡಿಗೆ(Long March)ಗೆ ಚಾಲನೆ ನೀಡಿದ್ದಾರೆ. ಈ ದೀರ್ಘ ನಡಿಗೆಗೆ ಪಾಕಿಸ್ತಾನದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಜನರು ನಡಿಗೆಯನ್ನು ಸೇರ್ಪಡೆಯಾಗುತ್ತಿದ್ದಾರೆ. ಈಗಾಗಲೇ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದ ಸರ್ಕಾರದ ಮೇಲೆ ದೀರ್ಘ ನಡಿಗೆ ಮೂಲಕ ಇಮ್ರಾನ್ ಖಾನ್ ಮತ್ತಷ್ಟು ಒತ್ತಡ ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಪಾಕಿಸ್ತಾನಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ರಿಕೆಟ್ ತಂಡದ ನಾಯಕರೂ ಆಗಿದ್ದ ಇಮ್ರಾನ್ ಖಾನ್ ಅವರು, ಕಳೆದ ಏಪ್ರಿಲ್‌ನಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಕೆಲವು ಮಿತ್ರ ಪಕ್ಷಗಳು ಬೆಂಬಲವನ್ನು ವಾಪಸ್ ಪಡೆದಿದ್ದರಿಂದ ಅನಿವಾರ್ಯವಾಗಿ ಅವರು ರಾಜೀನಾಮೆ ನೀಡಬೇಕಾಯಿತು. ಆದರೆ, ಸರ್ಕಾರ ಬಿದ್ದರೂ ಜನರಿಂದ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಈ ದೀರ್ಘ ನಡಿಗೆಯು ಲಾಹೋರ್‌ದಿಂದ ಇಸ್ಲಾಮಾಬಾದ್‌ವರೆಗೆ ಸುಮಾರು 380 ಕಿ.ಮೀ. ನಡೆಯಲಿದೆ. ದಾರಿ ಮಧ್ಯೆ ರ್ಯಾಲಿಗಳು, ಪ್ರತಿಭಟನೆಗಳು, ಸಭೆಗಳನ್ನು ಇಮ್ರಾನ್ ಖಾನ್ ಹಮ್ಮಿಕೊಳ್ಳಲಿದ್ದಾರೆ. ಈ ನಡಿಗೆಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನರು ಬೆಂಬಲ ನೀಡುತ್ತಿದ್ದಾರೆ.
ತಮ್ಮ ಸ್ವಹಿತಾಸಕ್ತಿ ದೇಶದ ಹಣವನ್ನು ಕದಿಯುತ್ತಿರುವ ಮತ್ತು ಲೂಟಿ ಮಾಡುತ್ತಿರುವವರಿಂದ ದೇಶವನ್ನು ರಕ್ಷಿಸಬೇಕಿದೆ. ನಾನು ಇಮ್ರಾನ್ ಖಾನ್ ಅವರನ್ನು ಬೆಂಬಲಿಸುತ್ತೇನೆ ಎಂದು ದೀರ್ಘ ನಡಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ 36 ವರ್ಷದ ಮೊಹಮ್ಮದ್ ಮಝಾರ್ ಅವರು ತಿಳಿಸಿದ್ದಾರೆ. ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಈಗಾಗಲೇ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸರ್ಕಾರಿ ಕಚೇರಿ ಸಂಕೀರ್ಣಗಳನ್ನು ಮುತ್ತಿಗೆ ಹಾಕುವ ಪ್ರತಿಭಟನಾಕಾರರನ್ನು ತಡೆಯಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ | Imran Khan | ನವಾಜ್ ಷರೀಫ್‌ರನ್ನು ಟೀಕಿಸಿ, ಮೋದಿಯನ್ನು ಹೊಗಳಿದ ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್!