Site icon Vistara News

Independence Day 2024: ಒಂದೇ ದಿನ ಸ್ವಾತಂತ್ರ್ಯ ಪಡೆದಿದ್ದರೂ ಪಾಕಿಸ್ತಾನದಲ್ಲೇಕೆ ಭಾರತಕ್ಕಿಂತ ಮೊದಲು ಸ್ವಾತಂತ್ರ್ಯ ದಿನಾಚರಣೆ?

Independence day 2024

ಭಾರತ ಮತ್ತು ಪಾಕಿಸ್ತಾನ (India and Pakistan) ಒಟ್ಟಿಗೆ ಈ ಬಾರಿ 78ನೇ ಸ್ವಾತಂತ್ರ್ಯ ದಿನವನ್ನು (Independence day 2024) ಆಚರಿಸುವ ಸಂಭ್ರಮದಲ್ಲಿದೆ. ಆದರೆ ಭಾರತವು ಆಗಸ್ಟ್ 15ರಂದು ಸಂಭ್ರಮಾಚರಣೆ ನಡೆಸಿದರೆ ನೆರೆಯ ರಾಷ್ಟ್ರ ಪಾಕಿಸ್ತಾನವು ಒಂದು ದಿನ ಮುಂಚಿತವಾಗಿ ಅಂದರೆ ಆಗಸ್ಟ್ 14ರಂದು ಈ ಆಚರಣೆಯನ್ನು ನಡೆಸುತ್ತದೆ. 1947ರ ಆಗಸ್ಟ್‌ನಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ದೇಶವನ್ನು ಎರಡು ಸ್ವತಂತ್ರ ರಾಷ್ಟ್ರಗಳಾಗಿ ವಿಭಜಿಸಿದರು. ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು ಏಕಕಾಲದಲ್ಲಿ ವಿಭಜನೆಯಾಗಿದ್ದರೂ ಎರಡು ವಿಭಿನ್ನ ದಿನಗಳಲ್ಲಿ ಯಾಕೆ ಸ್ವಾತಂತ್ರ್ಯವನ್ನು ಆಚರಿಸುತ್ತಾರೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಇತಿಹಾಸದಲ್ಲಿ ಏನಿದೆ?

1947ರ ಜುಲೈ 18ರಂದು ಘೋಷಿಸಲಾದ 1947ರ ಭಾರತೀಯ ಸ್ವಾತಂತ್ರ್ಯ ಕಾಯಿದೆಯು ಭಾರತ ಮತ್ತು ಪಾಕಿಸ್ತಾನಕ್ಕೆ ಜನ್ಮ ನೀಡಿತು. ಕಾಯಿದೆಯ ಪ್ರಕಾರ, 1947ರ ಆಗಸ್ಟ್ 15ರಂದು ಭಾರತದಲ್ಲಿ ಎರಡು ಸ್ವತಂತ್ರ ರಾಷ್ಟ್ರಗಳನ್ನು ಸ್ಥಾಪಿಸಲಾಗುವುದು. ಇದನ್ನು ಕ್ರಮವಾಗಿ ಭಾರತ ಮತ್ತು ಪಾಕಿಸ್ತಾನ ಎಂದು ಕರೆಯಲಾಗುತ್ತದೆ ಎಂಬ ಉಲ್ಲೇಖ ಇತ್ತು.


ಆಗಸ್ಟ್ 15 ಪಾಕಿಸ್ತಾನದ ಸ್ವಾತಂತ್ರ್ಯ ದಿನವಾಗಿತ್ತು ಎಂಬುದು ಪಾಕಿಸ್ತಾನದ ಸ್ಥಾಪಕ ಪಿತಾಮಹ ಮೊಹಮ್ಮದ್ ಅಲಿ ಜಿನ್ನಾ ಅವರ ಐತಿಹಾಸಿಕ ರೇಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಇದರಲ್ಲಿ ಅವರು, ಆಗಸ್ಟ್ 15 ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾದ ಪಾಕಿಸ್ತಾನದ ಜನ್ಮದಿನವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ತನ್ನ ತಾಯ್ನಾಡನ್ನು ಹೊಂದಲು ದೊಡ್ಡ ತ್ಯಾಗ ಮಾಡಿದ ಮುಸ್ಲಿಂ ರಾಷ್ಟ್ರದ ಜನತೆಯ ಕನಸನ್ನು ಇದು ನನಸು ಮಾಡಿರುವುದನ್ನು ಸೂಚಿಸುತ್ತದೆ ಎಂದು ಜಿನ್ನಾ ಹೇಳಿದ್ದರು.

2016ರಲ್ಲಿ ಪಾಕಿಸ್ತಾನದ ಹಿರಿಯ ಪತ್ರಕರ್ತೆ ಶಾಹಿದಾ ಖಾಜಿ ಅವರು ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ, ನಾವು ಯಾವುದೇ ರೀತಿಯ ತರ್ಕವನ್ನು ಬಳಸಿದರೂ ಆಗಸ್ಟ್ 15 ಪಾಕಿಸ್ತಾನ ತನ್ನ ಸ್ವಾತಂತ್ರ್ಯವನ್ನು ಆಚರಿಸಬೇಕಾದ ದಿನವಾಗಿದೆ ಎಂದು ಹೇಳಿದ್ದರು. ಜಿನ್ನಾ ಮತ್ತು ಪಾಕಿಸ್ತಾನ ಕ್ಯಾಬಿನೆಟ್ 1947ರ ಆಗಸ್ಟ್ 15ರಂದು ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದರು.

Independence day 2024

ಅಂಚೆ ಚೀಟಿಗಳಲ್ಲೂ ಮುದ್ರಣ

ಜುಲೈ 1948ರಲ್ಲಿ ಬಿಡುಗಡೆಯಾದ ಪಾಕಿಸ್ತಾನದ ಮೊದಲ ಸ್ಮರಣಾರ್ಥ ಅಂಚೆ ಚೀಟಿಗಳಲ್ಲಿ 1947ರ ಆಗಸ್ಟ್ 15 ಅನ್ನು ದೇಶದ ಸ್ವಾತಂತ್ರ್ಯ ದಿನವೆಂದು ಉಲ್ಲೇಖಿಸಲಾಗಿದೆ. ಮುಸ್ಲಿಮರಿಗೆ 1947ರ ಆಗಸ್ಟ್ 15ರಂದು ಪವಿತ್ರವಾದ ರಂಜಾನ್ ತಿಂಗಳ ಕೊನೆಯ ಶುಕ್ರವಾರವಾದ್ದರಿಂದ ಇದು ಮಂಗಳಕರ ದಿನವಾಗಿತ್ತು.

ಪಾಕಿಸ್ತಾನದ ಮಾಜಿ ಪ್ರಧಾನಿ ಚೌಧರಿ ಮುಹಮ್ಮದ್ ಅಲಿ ಅವರು ತಮ್ಮ 1967ರ ಪುಸ್ತಕ ʼದಿ ಎಮರ್ಜೆನ್ಸ್ ಆಫ್ ಪಾಕಿಸ್ತಾನʼದಲ್ಲಿ ಹೀಗೆ ಬರೆದಿದ್ದಾರೆ: ಹದಿನೈದನೇ ಆಗಸ್ಟ್ 1947 ರಂಜಾನ್-ಉಲ್-ಮುಬಾರಕ್‌ನ ಕೊನೆಯ ಶುಕ್ರವಾರ ಇದು ಇಸ್ಲಾಂ ಧರ್ಮದ ಪವಿತ್ರ ದಿನಗಳಲ್ಲಿ ಒಂದಾಗಿದೆ. ಆ ಮಂಗಳಕರ ದಿನದಂದು, ಕ್ವೈಡ್-ಇ-ಆಜಮ್ [ಜಿನ್ನಾ] ಪಾಕಿಸ್ತಾನದ ಗವರ್ನರ್-ಜನರಲ್ ಆದರು ಮತ್ತು ಸಂಪುಟವು ಪ್ರಮಾಣ ವಚನ ಸ್ವೀಕರಿಸಿತು. ನಕ್ಷತ್ರ ಮತ್ತು ಅರ್ಧಚಂದ್ರ ಧ್ವಜವನ್ನು ಹಾರಿಸಲಾಯಿತು. ಪಾಕಿಸ್ತಾನವು ವಿಶ್ವ ಭೂಪಟದಲ್ಲಿ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು.

1947ರ ಆಗಸ್ಟ್ 14ರಂದು ಏನಾಯಿತು?

1947ರ ಆಗಸ್ಟ್ 14ರಂದು ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಪಾಕಿಸ್ತಾನದ ಸಂವಿಧಾನ ಸಭೆಯಲ್ಲಿ ಭಾಷಣ ಮಾಡಿದರು. ಅವರು ಆಗಸ್ಟ್ 15ರ ಮಧ್ಯರಾತ್ರಿ ಭಾರತ ಮತ್ತು ಪಾಕಿಸ್ತಾನಕ್ಕೆ ಅಧಿಕಾರವನ್ನು ಹಸ್ತಾಂತರಿಸಬೇಕಿತ್ತು. ಆದರೆ, ಮೌಂಟ್ ಬ್ಯಾಟನ್ ಏಕಕಾಲದಲ್ಲಿ ನವದೆಹಲಿ ಮತ್ತು ಕರಾಚಿ ಎರಡರಲ್ಲೂ ಇರಲು ಸಾಧ್ಯವಿರಲಿಲ್ಲ. ಹಾಗಾಗಿ
ಮೌಂಟ್ ಬ್ಯಾಟನ್ ಅವರು ಆಗಸ್ಟ್ 14ರಂದು ಕರಾಚಿಯಲ್ಲಿ ಮೊದಲು ಪಾಕಿಸ್ತಾನಕ್ಕೆ ಅಧಿಕಾರವನ್ನು ವರ್ಗಾಯಿಸಿದರು ಮತ್ತು ಅನಂತರ ನವದೆಹಲಿಗೆ ಪ್ರಯಾಣಿಸಿದರು.


ಖ್ಯಾತ ಪಾಕಿಸ್ತಾನಿ ಇತಿಹಾಸಕಾರ ಖುರ್ಷೀದ್ ಕಮಲ್ ಅಜೀಜ್ ಅವರು ತಮ್ಮ ʼಮರ್ಡರ್ ಆಫ್ ಹಿಸ್ಟರಿʼ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: ಭಾರತದಲ್ಲಿ ಬ್ರಿಟಿಷ್ ರಾಜನ ಏಕೈಕ ಪ್ರತಿನಿಧಿಯಾಗಿದ್ದ ವೈಸ್‌ರಾಯ್ ಅಧಿಕಾರವನ್ನು ವೈಯಕ್ತಿಕವಾಗಿ ಹೊಸ ದೇಶಗಳಿಗೆ ವರ್ಗಾಯಿಸಬೇಕಾಗಿತ್ತು. ಲಾರ್ಡ್ ಮೌಂಟ್ ಬ್ಯಾಟನ್ ಕರಾಚಿ ಮತ್ತು ನವದೆಹಲಿಯಲ್ಲಿ ಒಂದೇ ಕ್ಷಣದಲ್ಲಿ ಖುದ್ದಾಗಿ ಹಾಜರಾಗಲು ಸಾಧ್ಯವಾಗಲಿಲ್ಲ. ಆಗಸ್ಟ್ 15ರ ಬೆಳಗ್ಗೆ ಭಾರತಕ್ಕೆ ಅಧಿಕಾರವನ್ನು ವರ್ಗಾಯಿಸಿ ಅನಂತರ ಕರಾಚಿಗೆ ಹೋಗುವುದು ಸಾಧ್ಯವಿರಲಿಲ್ಲ. ಯಾಕೆಂದರೆ ಆ ಹೊತ್ತಿಗೆ ಅವರು ಹೊಸ ಭಾರತೀಯ ಡೊಮಿನಿಯನ್‌ನ ಗವರ್ನರ್ ಜನರಲ್ ಆಗುತ್ತಿದ್ದರು. ಹೀಗಾಗಿ ಅವರು ಭಾರತದ ವೈಸ್‌ರಾಯ್ ಆಗಿ ಆಗಸ್ಟ್ 14ರಂದು ಪಾಕಿಸ್ತಾನಕ್ಕೆ ಹೋಗಿ ಅಧಿಕಾರವನ್ನು ವರ್ಗಾಯಿಸಿದರು. ಇದರ ಅರ್ಥ ಪಾಕಿಸ್ತಾನವು ಆಗಸ್ಟ್ 14ರಂದು ತನ್ನ ಸ್ವಾತಂತ್ರ್ಯವನ್ನು ಗಳಿಸಿತು ಎಂಬುದಲ್ಲ.

ದಿನಾಂಕ ಏಕೆ ಬದಲಾಯಿತು?

ಭಾರತದಂತೆಯೇ ಪಾಕಿಸ್ತಾನವೂ ತನ್ನ ಸ್ವಾತಂತ್ರ್ಯವನ್ನು ಪ್ರತಿ ವರ್ಷ ಆಗಸ್ಟ್ 15ರಂದು ಆಚರಿಸಬೇಕಿತ್ತು. ಆದರೆ 1948ರಲ್ಲಿ ಪಾಕಿಸ್ತಾನವು ತನ್ನ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 14ಕ್ಕೆ ಮುಂದೂಡಿತು. ಮಾಧ್ಯಮಗಳ ವರದಿ ಪ್ರಕಾರ ಕೆಲವು ಪಾಕಿಸ್ತಾನ ನಾಯಕರು ಭಾರತಕ್ಕಿಂತ ಮೊದಲು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಬಯಸಿದ್ದರು. 1948ರ ಜೂನ್ ಅಂತ್ಯದ ವೇಳೆಗೆ ಆಗಿನ ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್ ನೇತೃತ್ವದಲ್ಲಿ ಮಂತ್ರಿಗಳ ಗುಂಪು ಇದಕ್ಕಾಗಿ ಸಭೆಯನ್ನು ಕರೆದಿತ್ತು. ಈ ಸಭೆಯಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಒಂದು ದಿನದ ಟ್ಟಿಗೆ ಹಿಂದೂಡಲು ನಿರ್ಧರಿಸಲಾಯಿತು. ಹೀಗಾಗಿ ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 14ಕ್ಕೆ ನಡೆಸುವ ಪ್ರಸ್ತಾಪವನ್ನು ಜಿನ್ನಾ ಅನುಮೋದಿಸಿದರು ಎನ್ನಲಾಗುತ್ತದೆ.


ಎಲ್ಲರ ಒಪ್ಪಿಗೆ ಸಿಕ್ಕಿಲ್ಲ

ʼಜಿನ್ನಾ: ಮಿಥ್ ಅಂಡ್ ರಿಯಾಲಿಟಿʼಯ ಲೇಖಕ ಯಾಸರ್ ಲತೀಫ್ ಹಮ್ದಾನಿ ಅವರು 2013ರಲ್ಲಿ ಮಾಧ್ಯಮವೊಂದಕ್ಕೆ ಮಾತನಾಡಿ, ದಿನಾಂಕ ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದರು. ಪಾಕಿಸ್ತಾನವು ತನ್ನ ಗುರುತನ್ನು ತಾನೇ ಕೆತ್ತ ಬಹುದಾದ ಹೊಸ ರಾಷ್ಟ್ರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

ಪಾಕಿಸ್ತಾನದ ನಾಯಕರು ಸ್ವಾತಂತ್ರ್ಯ ದಿನಾಚರಣೆಯನ್ನು ಆ. 14ರಂದು ಆಚರಿಸಲು ಏಕೆ ನಿರ್ಧರಿಸಿದ್ದಾರೆ ಎಂಬುದು ಸಂಪೂರ್ಣವಾಗಿ ವಿಶಿಷ್ಟ ಕತೆಯಾಗಿದೆ. ಅವರು ಬಹುಶಃ ಭಾರತಕ್ಕಿಂತ ವಿಭಿನ್ನ ದಿನದಲ್ಲಿ ಇದನ್ನು ಆಚರಿಸಬೇಕೆಂದು ಬಯಸಿದ್ದರು ಎಂದು ಪತ್ರಕರ್ತ ಖಾಜಿ ಹೇಳಿದ್ದರು. ಹೀಗಾಗಿ 1948ರಿಂದ ಪಾಕಿಸ್ತಾನವು ಆಗಸ್ಟ್ 14ರಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ.

Exit mobile version