ನ್ಯೂಯಾರ್ಕ್: ಉಕ್ರೇನ್‌ನಲ್ಲಿನ ಪರಿಸ್ಥಿತಿ ಬಗ್ಗೆ ಭಾರತವು ವಿಶ್ವಸಂಸ್ಥೆಯಲ್ಲಿ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದೆ. ಕದನ ವಿರಾಮಕ್ಕಾಗಿ ರಷ್ಯಾ-ಉಕ್ರೇನ್ ಮತ್ತು ಇತರ ಎಲ್ಲ ಬಣಗಳು ಸೌಹಾರ್ದಯುತ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದೆ.
ಉಕ್ರೇನ್ ಬಿಕ್ಕಟ್ಟು ಉಪಶಮನಕ್ಕೆ ನಡೆಯುವ ಎಲ್ಲ ಮಾತುಕತೆಗಳನ್ನು ಭಾರತ ಬೆಂಬಲಿಸಲಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರತೀಕ್ ಮಾಥೂರ್ ಅವರು ಹೇಳಿದ್ದಾರೆ.
ಉಕ್ರೇನ್ ಬಿಕ್ಕಟ್ಟಿನ ಪರಿಹಾರ ಕುರಿತ ವಿಶ್ವಸಂಸ್ಥೆಯ ಸಭೆಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ರಷ್ಯಾ-ಉಕ್ರೇನ್ ನಡುವೆ ಮಾತುಕತೆ ಅಗತ್ಯ ಎಂದರು. ಸಂಘರ್ಷದ ಪರಿಣಾಮ ಜೀವ ಹಾನಿ ಸಂಭವಿಸಿದೆ. ಅಸಂಖ್ಯಾತ ಜನರಿಗೆ ತೀವ್ರ ಸಂಕಷ್ಟವಾಗಿದೆ. ಮಹಿಳೆಯರು, ಮಕ್ಕಳು, ವಯೋವೃದ್ಧರು ಲಕ್ಷಾಂತರ ಸಂಖ್ಯೆಯಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ನಿರಾಶ್ರಿತರಾಗಿದ್ದಾರೆ. ಮನೆಗಳನ್ನು ಕಳೆದುಕೊಂಡಿದ್ದಾರೆ. ಬಲವಂತವಾಗಿ ನೆರೆಯ ದೇಶಗಳಿಗೆ ವಲಸೆ ಹೋಗುವಂತಾಗಿದೆ ಎಂದು ಅವರು ಹೇಳಿದರು.
ಸಂಘರ್ಷ ಆರಂಭವಾದಾಗಿನಿಂದಲೂ ಭಾರತವು ಕದನ ವಿರಾಮ ಮತ್ತು ಶಾಂತಿಯುತ ಮಾತುಕತೆಯ ಮೂಲಕ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದೆ. ಕಳೆದ ವಾರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಕೂಡ ಮಾತುಕತೆಯ ಮೂಲಕ ಸಂಘರ್ಷವನ್ನು ಬಗೆಹರಿಸಬೇಕು. ಬಿಕ್ಕಟ್ಟನ್ನು ಹೆಚ್ಚಿಸುವುದರಿಂದ ಹಾನಿಯ ಹೊರತಾಗಿ ಬೇರೇನೂ ಪ್ರಯೋಜನವಾಗದು ಎಂದು ಹೇಳಿದ್ದರು.