Site icon Vistara News

Indian Dead: ಅಮೆರಿಕದ ಬಳಿಕ ನ್ಯೂಜಿಲ್ಯಾಂಡ್‌ನಲ್ಲಿಯೂ ಭಾರತೀಯ ಮೂಲದ ಯುವಕನ ನಿಗೂಢ ಸಾವು

One student killed, 6 injured as truck collides with auto

crime news

ನ್ಯೂಜಿಲ್ಯಾಂಡ್‌: ಇತ್ತೀಚಿನ ದಿನಗಳಲ್ಲಿ ವಿದೇಶಗಳಲ್ಲಿ ಅಸಹಜವಾಗಿ ಮರಣ ಹೊಂದುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗುತ್ತಿದೆ (Indian Dead). ಒಂದು ತಿಂಗಳ ಅಂತರದಲ್ಲಿ ಅಮೆರಿಕದಲ್ಲಿ ನಾಲ್ಕಕ್ಕಿಂತ ಅಧಿಕ ಭಾರತೀಯ ಮೂಲದವರು ಕೊಲೆಯಾಗಿದ್ದಾರೆ. ಈ ಮಧ್ಯೆ ನ್ಯೂಜಿಲ್ಯಾಂಡ್‌ (New Zealand)ನಲ್ಲಿಯೂ 28 ವರ್ಷದ ಭಾರತೀಯ ಮೂಲದ ಯುವಕ ನಿಗೂಢವಾಗಿ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ವಿವರ

ನ್ಯೂಜಿಲ್ಯಾಂಡ್‌ನ ಡ್ಯುನೆಡಿನ್‌ (Dunedin)ನಲ್ಲಿ ಭಾನುವಾರ (ಜನವರಿ 28) 28 ವರ್ಷದ ಗುರ್ಜಿತ್‌ ಸಿಂಗ್‌ನ ಶವ ನಿಗೂಢವಾಗಿ ಪತ್ತೆಯಾಗಿದೆ. ಅವರು 2015ರಿಂದ ನ್ಯೂಜಿಲ್ಯಾಂಡ್‌ನಲ್ಲಿ ವಾಸವಾಗಿದ್ದಾರೆ. ಮನೆಯ ಹೊರ ಭಾಗದಲ್ಲಿ ಅವರ ರಕ್ತಸಿಕ್ತ ಮೃತದೇಹ ಕಂಡು ಬಂದಿತ್ತು. ಸೋಮವಾರ ಬೆಳಗ್ಗೆ ಗುರ್ಜಿತ್‌ ಸಿಂಗ್‌ ಅವರ ಸ್ನೇಹಿತರೊಬ್ಬರು ಮೃತದೇಹವನ್ನು ಗುರುತಿಸಿದ್ದರು. ಬಳಿಕ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪೋಸ್ಟ್‌ ಮಾರ್ಟಮ್‌ ರಿಪೋರ್ಟ್‌ನಲ್ಲಿ ಏನಿದೆ?

ಗುರ್ಜಿತ್‌ ಸಿಂಗ್‌ ಅವರ ಪೋಸ್ಟ್‌ ಮಾರ್ಟಮ್‌ ರಿಪೋರ್ಟ್‌ನಲ್ಲಿ ಬೆಚ್ಚಿ ಬೀಳಿಸುವ ಅಂಶಗಳು ಪತ್ತೆಯಾಗಿವೆ. ಶವದಲ್ಲಿ ಹರಿತವಾದ ಆಯುಧಗಳಿಂದ ಅನೇಕ ಬಾರಿ ಇರಿತದ ಗಾಯಗಳು ಕಂಡುಬಂದಿವೆ. ಹೀಗಾಗಿ ಕ್ರೂರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು

ಗುರ್ಜಿತ್ ಸಿಂಗ್ ಕೋರಸ್ ತಂತ್ರಜ್ಞರಾಗಿದ್ದು, ಲಿಬರ್ಟ್‌ನ ಹಿಲರಿ ಸ್ಟ್ರೀಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರು ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಫೆಬ್ರವರಿ 6ರಂದು ಅವರ ಪತ್ನಿ ನ್ಯೂಜಿಲ್ಯಾಂಡ್‌ಗೆ ತೆರಳುವ ಸಿದ್ಧತೆಯಲ್ಲಿರುವ ಮಧ್ಯೆಯೇ ಈ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ ಗುರ್ಜಿತ್ ಸಿಂಗ್ ಅವರ ಪತ್ನಿ ಸ್ನೇಹಿತರೊಬ್ಬರಿಗೆ ಕರೆ ಮಾಡಿ, ʼʼಗುರ್ಜಿತ್ ಸಿಂಗ್ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿʼʼ ಎಂದು ಕಳವಳ ವ್ಯಕ್ತಪಡಿಸಿದ್ದರು. ನಂತರ ಶವ ಪತ್ತೆಯಾಗಿತ್ತು.

ತನಿಖೆ ಚುರುಕು

ʼʼಗುರ್ಜಿತ್ ಸಿಂಗ್ ಅವರ ಶವ ಪತ್ತೆಯಾಗುವ ಸ್ವಲ್ಪ ಮೊದಲಷ್ಟೇ ಅವರನ್ನು ಕೊಲೆ ಮಾಡಲಾಗಿತ್ತು ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸಲು ದೊಡ್ಡ ತಂಡವನ್ನೇ ನಿಯೋಜಿಸಲಾಗಿದೆ. 25 ತನಿಖಾಧಿಕಾರಿಗಳ ತಂಡವು ಸಂತ್ರಸ್ಥರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಶೀಘ್ರ ಸಾವಿನ ರಹಸ್ಯವನ್ನು ಬಯಲಿಗೆಳೆಯುತ್ತೇವೆ ಮತ್ತ ಅಪರಾಧಿಯನ್ನು ಕಾನೂನಿನ ಮುಂದೆ ಹಾಜರು ಪಡಿಸುತ್ತೇವೆʼʼ ಎಂದು ಅದಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Indian Student Dead: ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು, 2 ವಾರದಲ್ಲಿ ಇದು 3ನೇ ಕೊಲೆ!

ಮೃತದೇಹದ ಪಕ್ಕ ಗಾಜು ಕೂಡ ಪತ್ತೆಯಾಗಿತ್ತು. ಹೀಗಾಗಿ ಹರಿತವಾದ ಆಯುಧದ ಜತೆಗೆ ಗಾಜಿನಿಂದ ಇರಿಯಲಾಗಿದೆಯೇ ಎನ್ನುವುದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಮಗನ ಸಾವಿನ ಸುದ್ದಿ ಕೇಳಿ ಗುರ್ಜಿತ್ ಸಿಂಗ್ ಅವರ ತಂದೆ ಆಘಾತ ವ್ಯಕ್ತಪಡಿಸಿದ್ದಾರೆ. ಒಟಾಗೋ ಪಂಜಾಬಿ ಫೌಂಡೇಷನ್‌ ಟ್ರಸ್ಟ್‌ನ ಸದಸ್ಯ ನರಿಂದರ್ವೀರ್ ಸಿಂಗ್ ಈ ಬಗ್ಗೆ ಮಾತನಾಡಿ, ʼʼಗುರ್ಜಿತ್ ಸಿಂಗ್ ಅವರ ತಂದೆ ಇನ್ನೂ ಶಾಕ್‌ನಲ್ಲಿದ್ದಾರೆ. ಮಗನ ಅನಿರೀಕ್ಷಿತ ಸಾವು ಅವರನ್ನು ಖಿನ್ನತೆಗೆ ಜಾರಿದ್ದಾರೆʼʼ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version