Site icon Vistara News

Fazil Khan: ಅಮೆರಿಕದಲ್ಲಿ ಮೃತಪಟ್ಟ ಇನ್ನೊಬ್ಬ ಭಾರತೀಯ; ಪತ್ರಕರ್ತನ ಸಾವಿಗೆ ಕಾರಣವೇನು?

Fazil Khan

Fazil Khan

ವಾಷಿಂಗ್ಟನ್‌: ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಬೆಂಕಿ ಆಕಸ್ಮಿಕದಲ್ಲಿ ಭಾರತೀಯ ಮೂಲದ ಪತ್ರಕರ್ತರೊಬ್ಬರು ಮೃತಪಟ್ಟಿದ್ದಾರೆ. 27 ವರ್ಷದ ಫಾಜಿಲ್ ಖಾನ್ (Fazil Khan) ಮೃತಪಟ್ಟವರು. ನ್ಯೂಯಾರ್ಕ್‌ನ ಹಾರ್ಲೆಮ್‌ (New York’s Harlem)ನಲ್ಲಿರುವ ಸೇಂಟ್ ನಿಕೋಲಸ್ ಪ್ಲೇಸ್ ಅಪಾರ್ಟ್‌ಮೆಂಟ್‌ (St. Nicholas Place apartment)ನಲ್ಲಿ ಈ ದುರಂತ ಸಂಭವಿಸಿದ್ದು, ಬೆಂಕಿಯಿಂದ ಪಾರಾಗಲು ಕಿಟಿಕಿಯಿಂದ ಜಿಗಿದ ಇತರ 17 ಮಂದಿ ಗಾಯಗೊಂಡಿದ್ದಾರೆ.

ʼʼಮೃತನನ್ನು ಫಾಜಿಲ್ ಖಾನ್ ಎಂದು ಗುರುತಿಸಲಾಗಿದೆ. ಅವರ ಸ್ನೇಹಿತರು ಮತ್ತು ಕುಟುಂಬವರು ಸಂಪರ್ಕದಲ್ಲಿದ್ದಾರೆʼʼ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಗಳು ತಿಳಿಸಿವೆ. “ಫಾಜಿಲ್ ಖಾನ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತಲುಪಿಸಲು ನಾವು ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತೇವೆ” ಎಂದು ಭರವಸೆ ನೀಡಿದೆ.

ಘಟನೆಯ ವಿವರ

ಲಿಥಿಯಂ-ಐಯಾನ್ ಬ್ಯಾಟರಿಯಿಂದಾಗಿ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಹತ್ತಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ. ಕೊಲಂಬಿಯಾ ಜರ್ನಲಿಸಂ ಸ್ಕೂಲ್‌ (Columbia Journalism School)ನ ಹಳೆಯ ವಿದ್ಯಾರ್ಥಿಯಾಗಿರುವ ಫಾಜಿಲ್ ಖಾನ್ ಅವರು ಶಿಕ್ಷಣದಲ್ಲಿನ ಅಸಮಾನತೆ ಮತ್ತು ನಾವೀನ್ಯತೆಗಳ ಬಗ್ಗೆ ವರದಿ ಮಾಡುವ ಲಾಭರಹಿತ ಸುದ್ದಿಮನೆ ʼದಿ ಹೆಚಿಂಗರ್ ರಿಪೋರ್ಟ್‌ʼ (The Hechinger Report)ನಲ್ಲಿ ಡೇಟಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. ಇದು ಕೊಲಂಬಿಯಾ ವಿಶ್ವವಿದ್ಯಾಲಯದ ಟೀಚರ್ಸ್ ಕಾಲೇಜಿನಲ್ಲಿದೆ.

ಭಾರತದಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಫಾಜಿಲ್ ಖಾನ್

ಫಾಜಿಲ್ ಖಾನ್ ತಮ್ಮ ವೃತ್ತಿ ಜೀವನವನ್ನು ಭಾರತದಲ್ಲಿ ಆರಂಭಿಸಿದ್ದರು. ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಖಾನ್ 2018ರಲ್ಲಿ ಬಿಸಿನೆಸ್ ಸ್ಟ್ಯಾಂಡರ್ಡ್‌ (Business Standard) ಪತ್ರಿಕೆಯಲ್ಲಿ ಕಾಪಿ ಎಡಿಟರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಬಳಿಕ ದೆಹಲಿಯ ಸಿಎನ್ಎನ್-ನ್ಯೂಸ್ 18 (CNN-News18)ನಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದರು. 2020ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆಯಲು ನ್ಯೂಯಾರ್ಕ್‌ಗೆ ತೆರಳಿದ್ದರು.

ಸಂತಾಪ ಸೂಚಿಸಿದ ʼದಿ ಹೆಚಿಂಗರ್ ರಿಪೋರ್ಟ್‌ʼ

ಸಹೋದ್ಯೋಗಿಯನ್ನು ಕಳೆದುಕೊಂಡಿರುವ ಬಗ್ಗೆ ʼದಿ ಹೆಚಿಂಗರ್ ರಿಪೋರ್ಟ್‌ʼ ಆಘಾತ ವ್ಯಕ್ತಪಡಿಸಿದೆ. “ಫಾಜಿಲ್ ಖಾನ್ ಬೆಂಕಿ ದುರಂತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ದುಃಖವಾಗಿದೆ. ಅಂತಹ ಉತ್ತಮ ಸಹೋದ್ಯೋಗಿ ಮತ್ತು ಅದ್ಭುತ ವ್ಯಕ್ತಿಯನ್ನು ಕಳೆದುಕೊಂಡಿರುವುದಕ್ಕೆ ಅತೀವ ನೋವು ಕಾಡುತ್ತಿದೆʼʼ ಎಂದು ಅದು ಬರೆದುಕೊಂಡಿದೆ.

ಕಟ್ಟಡದಿಂದ ಜಿಗಿದಿದ್ದ ಹಲವರು

ʼʼಕಟ್ಟಡದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ಪ್ರಾಣ ಉಳಿಸಿಕೊಳ್ಳಲು ಅನೇಕರು ಕಿಟಕಿಯಿಂದ ಕೆಳಗೆ ಜಿಗಿದಿದ್ದರುʼʼ ಎಂದು ಘಟನೆಯ ತೀವ್ರತೆಯನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಅಪಾರ್ಟ್‌ಮೆಂಟ್‌ನಿಂದ ಹದಿನೆಂಟು ಜನರನ್ನು ರಕ್ಷಿಸಲಾಗಿದೆ. ಆ ಪೈಕಿ 12 ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಇದನ್ನೂ ಓದಿ: Akul Dhawan: ಅಮೆರಿಕದಲ್ಲಿ ಮೃತಪಟ್ಟ ಭಾರತೀಯ ಮೂಲದ ವಿದ್ಯಾರ್ಥಿ; ಸಾವಿಗೆ ಕಾರಣವಾಗಿದ್ದು ಇದು

ಸಂತ್ರಸ್ತರ ನೆರವಿಗೆ ರೆಡ್ ಕ್ರಾಸ್ ಸಂಸ್ಥೆ ಧಾವಿಸಿದ್ದು, ಅವರಿಗೆ ಹತ್ತಿರದ ಶಾಲೆಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ. ಘಟನೆಯ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯೂಯಾರ್ಕ್‌ ಅಗ್ನಿ ಶಾಮಕ ದಳ (New York City Fire Department- FDNY)ದ ವರದಿಯ ಪ್ರಕಾರ, 2023ರಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಯಿಂದಾಗಿ ಸುಮಾರು 267 ಅಗ್ನಿ ದುರಂತಗಳು ಸಂಭವಿಸಿತ್ತು. ಇವುಗಳಲ್ಲಿ ಸುಮಾರು 18 ಮಂದಿ ಮೃತಪಟ್ಟು, 150 ಮಂದಿ ಗಾಯಗೊಂಡಿದ್ದರು. ಈ ವರ್ಷ ಲಿಥಿಯಂ-ಐಯಾನ್ ಬ್ಯಾಟರಿಯಿಂದಾಗಿ ಇದುವರೆಗೆ ಸುಮಾರು 24 ಬೆಂಕಿ ದುರಂತ ಸಂಭವಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version