ಯುಎಸ್ ಶ್ವೇತಭವನ (ವೈಟ್ ಹೌಸ್)ದ (White House) ತಡೆಗೋಡೆಗೆ ಉದ್ದೇಶಪೂರ್ವಕವಾಗಿಯೇ ಟ್ರಕ್ ಡಿಕ್ಕಿ ಹೊಡೆಸಿದ ಭಾರತೀಯ ಮೂಲದ, 19 ವರ್ಷದ ಯುವಕ ಸಾಯಿ ವರ್ಷಿತ್ ಕಂದುಲಾನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ತಡೆಗೋಡೆಗೆ ಡಿಕ್ಕಿ ಯಾಕೆ ಹೊಡೆದು ಎಂದು ಪ್ರಶ್ನಿಸಿದ್ದಕ್ಕೆ ಆತ, ‘ಯುಎಸ್ ಅಧ್ಯಕ್ಷ ಜೋ ಬೈಡೆನ್ರನ್ನು ಹತ್ಯೆ ಮಾಡಿ, ಅಮೆರಿಕ ಅಧಿಕಾರವನ್ನು ವಶಪಡಿಸಿಕೊಳ್ಳುವ ಸಲುವಾಗಿ ಹೀಗೆ ಡಿಕ್ಕಿ ಹೊಡೆಸಿದೆ’ ಎಂದು ಹೇಳಿಕೊಂಡಿದ್ದಾನೆ. ಯು ಹಾಲ್ ಬಾಡಿಗೆ ಟ್ರಕ್ನಿಂದ ಆತ ವೈಟ್ ಹೌಸ್ನ ಭದ್ರತಾ ತಡೆಗೋಡೆಗೆ ಡಿಕ್ಕಿ ಮಾಡಿಸಿದ್ದಾನೆ. ತಕ್ಷಣವೇ ಅವನನ್ನು ಯುಎಸ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಬೆಳಗ್ಗೆ 10ಗಂಟೆ ಹೊತ್ತಿಗೆ ಯುವಕ ಹೀಗೊಂದು ಕೃತ್ಯ ಎಸಗಿದ್ದಾನೆ. ಒಬ್ಬನಿಗೆ ಗಾಯವಾಗಿದ್ದು ಬಿಟ್ಟರೆ, ಬೇರೆ ಯಾರಿಗೂ ಏನೂ ತೊಂದರೆಯಾಗಿಲ್ಲ. ವೈಟ್ ಹೌಸ್ನಿಂದ ಸ್ವಲ್ಪ ದೂರದಲ್ಲಿದ್ದ ಭದ್ರತಾ ತಡೆಗೋಡೆಗೆ ಆತ ಡಿಕ್ಕಿ ಹೊಡೆಸಿದ್ದರಿಂದ ಶ್ವೇತಭವನದ ಯಾವುದೇ ಸಿಬ್ಬಂದಿಗೂ ಅಪಾಯವಾಗಿಲ್ಲ. ಆದರೆ ತುಂಬ ಹೊತ್ತುಗಳ ಕಾಲ ಆ ರಸ್ತೆ ಮಾರ್ಗ ಮುಚ್ಚಿತ್ತು. ವಾಹನ ಸಂಚಾರ ಮತ್ತು ಪಾದಚಾರಿಗಳ ಚಲನವಲನವನ್ನು ತಡೆಯಲಾಗಿತ್ತು. ಸಮೀಪದಲ್ಲೇ ಇದ್ದ ಹೋಟೆಲ್ಗಳನ್ನು ಮುಚ್ಚಲಾಗಿತ್ತು.
ಇದನ್ನೂ ಓದಿ: ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮ ರಷ್ಯಾ ಪ್ರವೇಶಿಸುವಂತಿಲ್ಲ; ಇದು ಬೈಡೆನ್ ವಿರುದ್ಧದ ಪ್ರತೀಕಾರ
ಸಾಯಿ ವರ್ಷಿತ್ ಕಂದುಲಾ ಮೊದಲು ಮಿಸೌರಿಯಿಂದ ಡಲ್ಲೆಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣ ಮಾಡಿದ್ದ. ಅಲ್ಲೊಂದು ಟ್ರಕ್ನ್ನು ಬಾಡಿಗೆ ಪಡೆದು, ಅದರಲ್ಲಿ ಶ್ವೇತಭವನದತ್ತ ಬಂದಿದ್ದ ಎಂದು ಯುಎಸ್ ಕಾನೂನು ಜಾರಿ ಸಂಸ್ಥೆ ತಿಳಿಸಿದೆ. ವರ್ಷಿತ್ ಕಂದುಲಾ ವೈಟ್ ಹೌಸ್ ಬಳಿ ಕಾಲುದಾರಿಯ ಮೇಲೆ ಅಂದರೆ ಪಾದಚಾರಿಗಳು ನಡೆಯುವ ಮಾರ್ಗದ ಮೇಲೆ ಓಡಿಸಿದ್ದಾನೆ. ಅದಾದ ಬಳಿಕ ವೈಟ್ಹೌಸ್ನ ಉತ್ತರ ಭಾಗದಲ್ಲಿರುವ ಲೋಹದ ಗೋಡೆಗೆ ಬಲವಾಗಿ ಗುದ್ದಿದ್ದಾನೆ. ಒಮ್ಮೆ ಗುದ್ದಿದ ಬಳಿಕ ಟ್ರಕ್ನ್ನು ರಿವರ್ಸ್ ತೆಗೆದುಕೊಂಡು, ಮತ್ತೆ ರಭಸವಾಗಿ ಹೋಗಿ ಗುದ್ದಿದ್ದಾನೆ. ಹಾಗೇ. ತಾನು ಹೀಗೊಂದು ಅಟ್ಯಾಕ್ ಮಾಡಲು ಕಳೆದ ಆರು ತಿಂಗಳಿಂದ ಯೋಜನೆ ರೂಪಿಸುತ್ತಿದ್ದೆ ಎಂದೂ ಕಂದುಲಾ ಪೊಲೀಸರ ಎದುರು ಹೇಳಿಕೊಂಡಿದ್ದಾನೆ. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.