ವಾಷಿಂಗ್ಟನ್: ‘ಪಾಕಿಸ್ತಾನಕ್ಕೆ ಹೋಗಿ…..’ ಎಂದು ಕೆಲವರು ಭಾರತದಲ್ಲಿ ಆಗಾಗ ಹೇಳುವುದನ್ನು ನೀವು ಕೇಳಿಯೇ ಇರುತ್ತೀರಿ! ಈ ಇಂಥದ್ದೇ ದ್ವೇಷದ ಮಾತುಗಳ ಟ್ರೆಂಡ್ ಅಮೆರಿಕದಲ್ಲಿ ಶುರುವಾಗಿದೆ. ಇಂಡಿಯನ್ ಅಮೆರಿಕನ್ ಮಹಿಳಾ ಸಂಸದೆ ಪ್ರಮೀಳಾ ಜಯಪಾಲ್(Pramila Jayapal) ಅವರಿಗೆ ಅಲ್ಲಿನ ಕೆಲವರು ಫೋನ್ ಮಾಡಿ, ಭಾರತಕ್ಕೆ ಹೊರಟು ಹೋಗಿ ಎಂದು ಬೆದರಿಕೆ ಹಾಕಿದ್ದಾರೆ! ಇತ್ತೀಚಿನ ದಿನಗಳಲ್ಲಿ ಭಾರತೀಯ ಮೂಲದವರ ವಿರುದ್ಧ ಈ ರೀತಿಯ ದ್ವೇಷದ ಪ್ರಕರಣಗಳು ಹೆಚ್ಚಾಗುತ್ತಿವೆ!
ಇಂಡಿಯನ್-ಅಮೆರಿಕನ್ ಕಾಂಗ್ರೆಸ್‌ವುಮನ್ ಪ್ರಮೀಳಾ ಜಯಪಾಲ್ ಅವರಿಗೆ ಭಾರತಕ್ಕೆ ಹೋಗಿ ಎಂದು ಧಮ್ಕಿ ಹಾಕಲಾಗಿದೆ. ಚೆನ್ನೈ ಮೂಲದ ಪ್ರಮೀಳಾ ಅವರು ಅಮೆರಿಕದ ಕಾಂಗ್ರೆಸ್‌ನ ಸದಸ್ಯರಾಗಿದ್ದಾರೆ. ಫೋನ್ ಕರೆ ಮಾಡಿದ ವ್ಯಕ್ತಿಯೊಬ್ಬ, ನಿಮ್ಮ ದೇಶಕ್ಕೆ ವಾಪಸ್ ಹೋಗಿ ಎಂದು ಆವಾಜ್ ಹಾಕಿದ್ದಾನೆ. ಒಟ್ಟು ಈ ರೀತಿಯ ಐದು ಆಡಿಯೋ ಟೇಪ್‌ಗಳಿವೆ.
ಎಲ್ಲ ಮೆಸೇಜ್‌ಗಳಲ್ಲಿ ಅಶ್ಲೀಲ ಮತ್ತು ನಿಂದನೆಯ ಪದಗಳನ್ನು ಬಳಸಲಾಗಿದೆ. ಒಂದು ಆಡಿಯೋ ಮೆಸೇಜ್‌ನಲ್ಲಿ ಭಾರತಕ್ಕೆ ಹೊರಟು ಹೋಗುವಂತೆ ಹೇಳಿದ್ದಾನೆ. 55 ವರ್ಷದ ಜಯಪಾಲ್ ಅವರು, ಅಮೆರಿಕದ ಜನಪ್ರತಿನಿಧಿಗಳ ಸಭೆಯಲ್ಲಿ ಸಿಯಟಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ಇದೇ ರೀತಿಯ ಘಟನೆ ಈ ಹಿಂದೆಯೂ ಜಯಪಾಲ್ ಅವರು ಎದುರಿಸಿದ್ದಾರೆ. ಪಿಸ್ತೂಲ್ ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬ ಜಯಪಾಲ್ ಮನೆ ಎದುರು ಬಂದು ಕೂಗಾಡಿದ್ದ, ಆಗ ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿ ಆತನನ್ನು ಬ್ರೆಟ್ ಫಾರ್ಸೆಲ್ ಎಂದು ಗುರುತಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಭಾರತೀಯ ಮೂಲದ ಜನರ ವಿರುದ್ಧ ಅಪರಾಧ ಪ್ರಕರಣಗಳು ಅಮೆರಿಕದಲ್ಲಿ ಹೆಚ್ಚುತ್ತಿವೆ. ಸೆಪ್ಟೆಂಬರ್ 1ರಂದು ಇಂಡಿಯನ್-ಅಮೆರಿಕನ್ ವ್ಯಕ್ತಿಯೊಬ್ಬನಿಗೆ ಕ್ಯಾಲಿಫೋರ್ನಿಯಾದಲ್ಲಿ ವ್ಯಕ್ತಿಯೊಬ್ಬ ಡರ್ಟಿ ಹಿಂದೂ ಮತ್ತು ಅಸಹ್ಯಕರ ನಾಯಿ ಎಂದು ಜರೆದಿದ್ದು ಸುದ್ದಿಯಾಗಿತ್ತು. ಆಗಸ್ಟ್ 26ರಂದು ಇಂಥದ್ದೇ ಘಟನೆ ನಡೆದ ಬಗ್ಗೆ ವರದಿಯಾಗಿತ್ತು.
ಇದನ್ನೂ ಓದಿ | Vedant Patel | ಭಾರತೀಯ ಮೂಲದ ವೇದಾಂತ್ ಪಟೇಲ್ ಸಾಧನೆಗೆ ಮತ್ತೊಂದು ಗರಿ!