Site icon Vistara News

ಬ್ರಿಟನ್‌ ಪ್ರಧಾನಿ: ರಿಷಿ ಸುನಕ್‌ಗೆ ಇನ್ನೊಬ್ಬ ಭಾರತೀಯಳಿಂದಲೇ ಪೈಪೋಟಿ!

suella braverman

ಲಂಡನ್:‌ ಬೋರಿಸ್‌ ಜಾನ್ಸನ್‌ ತಮ್ಮ ಪದವಿ ತ್ಯಜಿಸಿದ ನಂತರ ಬ್ರಿಟನ್‌ನ ಪ್ರಧಾನ ಮಂತ್ರಿಯ ಸ್ಥಾನಕ್ಕೆ ಕೇಳಿಬರುತ್ತಿರುವ ಹೆಸರುಗಳಲ್ಲಿ ರಿಷಿ ಸುನಕ್‌ ಅವರು ಮುಂಚೂಣಿಯಲ್ಲಿದ್ದರೆ, ಅವರಿಗೆ ಇನ್ನೊಬ್ಬ ಭಾರತೀಯ ಮೂಲದ ವ್ಯಕ್ತಿ ಪೈಪೋಟಿ ನೀಡುವ ಸಾಧ್ಯತೆಗಳು ದಟ್ಟವಾಗಿ ಕಾಣಿಸಿವೆ.

ಅವರು ಭಾರತದ ಗೋವಾ ಮೂಲದ ಸ್ಯುಯೆಲ್ಲಾ ಬ್ರೇವರ್‌ಮ್ಯಾನ್‌ (Suella Braverman). ಪ್ರಸ್ತುತ ಬ್ರಿಟನ್‌ ಕ್ಯಾಬಿನೆಟ್‌ನಲ್ಲಿ ಅಟಾರ್ನಿ ಜನರಲ್‌ ಆಗಿದ್ದಾರೆ.ಇವರ ಜತೆಗೆ ಗೃಹ ಸಚಿವೆಯಾಗಿರುವ ಪ್ರೀತಿ ಪಟೇಲ್‌ ಕೂಡ ತಮ್ಮ ಸ್ಪರ್ಧೆಯನ್ನು ಕಾಣಿಸುವ ಸಾಧ್ಯತೆಗಳೂ ಕಾಣಿಸಿವೆ. ಇವರೂ ಭಾರತೀಯ ಮೂಲದವರೇ.

ಸ್ಯುಯೆಲ್ಲಾಗೆ ಈಗ 42 ವರ್ಷ, ಬ್ಯಾರಿಸ್ಟರ್‌ ಹಾಗೂ ಸರಕಾರದ ಅತಿ ಹಿರಿಯ ಕಾನೂನು ಸಲಹೆಗಾರ್ತಿ. ಬ್ರೆಕ್ಸಿಟ್‌ ಪರವಾಗಿದ್ದ ಪಕ್ಷದ ಬಣದಲ್ಲಿ ಈಕೆ ಸಾಕಷ್ಟು ಬೆಂಬಲ ಪಡೆದಿದ್ದಾರೆ. ತಾವು ಪ್ರಧಾನಿ ಪದವಿಯ ಆಕಾಂಕ್ಷಿ ಎಂಬುದನ್ನು ಸ್ಯುಯೆಲ್ಲಾ ಸ್ಪಷ್ಟಪಡಿಸಿದ್ದಾರೆ.

ʼʼ2019ರಲ್ಲಿ ನಮ್ಮ ಪಕ್ಷ ನೀಡಿದ ಪ್ರಣಾಳಿಕೆಯು ಸಾಕಷ್ಟು ದೂರದರ್ಶಿ ಒಳನೋಟಗಳನ್ನು ಹೊಂದಿದೆ. ಸರ್ಕಾರದ ಉದ್ದೇಶಕ್ಕೆ ಪೂರಕವಾಗಿದೆ. ಈ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಕಾರ್ಯಗತಗೊಳಿಸಲು ನಾನು ಬಯಸುತ್ತೇನೆ. ಬಾಕಿಯಿರುವ ಸಮಸ್ಯೆಗಳನ್ನು ಬಗೆಹರಿಸಲು, ತೆರಿಗೆ ಕಡಿತ ಮಾಡಲು ಬಯಸುತ್ತೇನೆʼʼ ಎಂದು ಸ್ಯುಯೆಲ್ಲಾ ಹೇಳಿದ್ದಾರೆ.

ರಿಷಿ ಸುನಕ್‌ ಅವರ ಜನಪ್ರಿಯತೆ ಇತ್ತೀಚಿನ ದಿನಗಳನ್ನು ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ, ಸ್ಯುಯೆಲ್ಲಾ ಅವರನ್ನು ಪಕ್ಷ ಪರಿಗಣಿಸಿದರೂ ಆಶ್ಚರ್ಯವಿಲ್ಲ. ಇವರ ತಂದೆ ಹಾಗೂ ತಾಯಿ ಗೋವಾದಿಂದ ಲಂಡನ್‌ಗೆ ವಲಸೆ ಹೋದವರು. ತಂದೆ ಕ್ರಿಸ್ತೀ ಹಾಗೂ ತಾಯಿ ಉಮಾ ಫರ್ನಾಂಡಿಸ್.‌

ಇದನ್ನೂ ಓದಿ: ವಿಸ್ತಾರ Explainer: ರಾಜೀನಾಮೆ ನೀಡಿದ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿ ಆಗುವರೇ?

Exit mobile version