ಅಣ್ವಸ್ತ್ರ ಸಿಡಿತಲೆಯನ್ನು ಬಹುದೂರ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಅಗ್ನಿ-5 ಖಂಡಾಂತರ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ. ಅಗ್ನಿ-5 ಕ್ಷಿಪಣಿ ಬ್ಯಾಲಿಸ್ಟಿಕ್ (ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ) ಕ್ಷಿಪಣಿಯಾಗಿದ್ದು, 5000 ಕಿಲೋಮೀಟರ್ ದೂರವ್ಯಾಪ್ತಿ ಹೊಂದಿದೆ. ಅಂದರೆ ಇದು ಚೀನಾದ ರಾಜಧಾನಿ ಬೀಜಿಂಗ್ ಅನ್ನು ಮುಟ್ಟಬಲ್ಲುದು. ಈ ಕ್ಷಿಪಣಿಯ ದೂರವ್ಯಾಪ್ತಿಯಲ್ಲಿ ಏಷ್ಯಾದ ಬಹುಭಾಗ, ಚೀನಾದ ಉತ್ತರ ಭಾಗ, ಯುರೋಪ್‌ನ ಕೆಲಭಾಗ ಕೂಡ ಬರುತ್ತದೆ. ಚೀನಾ ಹೊಂದಿರುವ ಭಾರಿ ಕ್ಷಿಪಣಿ ಬಲವನ್ನು ಸರಿಗಟ್ಟಲು ಭಾರತ ಮಾಡುತ್ತಿರುವ ಯತ್ನಗಳಲ್ಲಿ ಅಗ್ನಿಯೂ ಒಂದು. ಇದು ಭಾರತೀಯ ಮಿಲಿಟರಿಗೆ ಮಹತ್ವದ ಸೇರ್ಪಡೆ. ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತೀಯ ಸೈನಿಕರ ಜತೆ ಚೀನಾ ಸೈನಿಕರು ಕಾಲು ಕೆರೆದು ಜಗಳ ತೆಗೆದಿರುವ ಸಂದರ್ಭದಲ್ಲೇ ಬೀಜಿಂಗ್‌ಗೆ ತಲುಪಬಲ್ಲ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯನ್ನು ಭಾರತ ಪ್ರಯೋಗಾರ್ಥ ಉಡಾಯಿಸಿರುವುದು ಚೀನಾಗೆ ನೀಡಿರುವ ಸ್ಪಷ್ಟ ಸಂದೇಶವೆಂದೇ ತಿಳಿಯಬಹುದು.
ಈ ಕ್ಷಿಪಣಿ ಚೀನಾದ ಉತ್ತರ ತುದಿಯಿಂದ ಹಿಡಿದು ಯುರೋಪಿನ ಬಹುತೇಕ ಭಾಗಗಳಿಗೂ ಗುರಿ ಇಟ್ಟು ದಾಳಿ ಮಾಡುವ ಸಾಮರ್ಥ್ಯ ಹೊಂದಿರುವುದು ಭಾರತದ ರಕ್ಷಣಾ ದೃಷ್ಟಿಯಿಂದ ಮಹತ್ವದ್ದಾಗಿದೆ. ಚೀನಾದ ಬಳಿ ಇರುವ ಡಾಂಗ್‌ಫೆಂಗ್- 41 ಕ್ಷಿಪಣಿ 12,000-15,000 ಕಿಲೋಮೀಟರ್ ದೂರವ್ಯಾಪ್ತಿ ಹೊಂದಿದೆ. ಇದಕ್ಕೆ ತಕ್ಕದಾಗಿ ಭಾರತದ ಮಿಲಿಟರಿಯ ಬಲವನ್ನೂ ಹೆಚ್ಚಿಸಿಕೊಳ್ಳುವುದು ಇಂದಿನ ಅಗತ್ಯವಾಗಿರುವುದರಿಂದ ಅಗ್ನಿ ಕ್ಷಿಪಣಿ ಮುಖ್ಯ. ಅಗ್ನಿ-4 ಕ್ಷಿಪಣಿಗಳು 700- 3500 ಕಿಲೋಮೀಟರ್ ಸಾಮರ್ಥ್ಯ ಹೊಂದಿದ್ದು, ಅವುಗಳನ್ನು ಈಗಾಗಲೇ ಮಿಲಿಟರಿಯಲ್ಲಿ ಅಳವಡಿಸಲಾಗಿದೆ. ಜೂನ್‌ನಲ್ಲಿ ಅಗ್ನಿ-4 ಕ್ಷಿಪಣಿಯ ಯಶಸ್ವಿ ಉಡಾವಣೆ ನಡೆದಿತ್ತು. ಮೇ ತಿಂಗಳಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಯನ್ನು ಸುಖೋಯಿ ಫೈಟರ್ ಜೆಟ್‌ನಿಂದ ಉಡಾಯಿಸಲಾಗಿತ್ತು. ಇತ್ತೀಚೆಗಷ್ಟೇ ಐಎನ್‌ಎಸ್ ವಿಕ್ರಾಂತ್ ಎಂಬ ಏರ್‌ಕ್ರಾಫ್ಟ್ ಕ್ಯಾರಿಯರ್ ನೌಕೆಯನ್ನೂ ಭಾರತ ಮಿಲಿಟರಿಗೆ ಸೇರಿಸಿಕೊಳ್ಳಲಾಗಿದೆ. ಇದು ಬಂಗಾಲ ಕೊಲ್ಲಿಯೂ ಸೇರಿದಂತೆ ಚೀನಾದ ನೌಕೆಗಳು ಓಡಾಡುವ ಪ್ರದೇಶದ ಮೇಲೆ ತನ್ನ ನಿಗಾ ಇಡಬಲ್ಲುದು ಹಾಗೂ ಅಗತ್ಯ ಬಿದ್ದರೆ ವೈಮಾನಿಕ ದಾಳಿಗೆ ನೆಲವಾಗಿ ಕಾರ್ಯಾಚರಿಸಬಲ್ಲುದು. ಇವೆಲ್ಲವೂ ನಮ್ಮ ಮಿಲಿಟರಿಯ ಸನ್ನದ್ಧತೆಯನ್ನು ಪ್ರದರ್ಶಿಸುವ ಕ್ರಮಗಳಾಗಿವೆ.
ಅರುಣಾಚಲ ಪ್ರದೇಶ ಗಡಿಯಲ್ಲಿ ಚೀನಾ ಕ್ಯಾತೆ ತೆಗೆದಿರುವ ಘಟನೆ ಹಿನ್ನೆಲೆಯಲ್ಲೇ ಭಾರತ ಈ ಶಕ್ತಿಶಾಲಿ ಕ್ಷಿಪಣಿ ಪರೀಕ್ಷೆ ಮಾಡಿರುವುದು ದಿಟ್ಟತನದ ರಾಜತಾಂತ್ರಿಕ ನಡೆಯಾಗಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚೀನಾ, ಪಾಕಿಸ್ತಾನಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಒಂದು ಬಗೆಯ ರಾಜತಾಂತ್ರಿಕ ಕ್ರಮವಾದರೆ, ಮಿಲಿಟರಿ ಶಕ್ತಿಯನ್ನು ವೃದ್ಧಿಸಿಕೊಳ್ಳುವುದೂ ಇನ್ನೊಂದು ಬಗೆಯ ಆತ್ಮರಕ್ಷಣಾ ನಡೆಯಾಗಿದೆ. ನಾವು ದುರ್ಬಲರಲ್ಲ, ನಮ್ಮ ಸಾರ್ವಭೌಮತೆಯನ್ನು ಪ್ರಶ್ನಿಸಲು ಮುಂದಾದರೆ ತಕ್ಕ ಪಾಠ ಕಲಿಸಬಲ್ಲೆವು ಎಂಬುದನ್ನು ಹೀಗೆ ಆಗಾಗ ತೋರಿಸಿಕೊಡುವುದು ಒಳ್ಳೆಯದು. ಗಲ್ವಾನ್‌ನಲ್ಲಿಯೇ ಅದನ್ನು ನಾವು ಸಾಬೀತುಪಡಿಸಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಅತ್ಯಾಧುನಿಕ ರಕ್ಷಣಾ ಶಸ್ತ್ರಾಸ್ತ್ರಗಳನ್ನು ಹೊಂದುತ್ತಿದೆ. ರಫೇಲ್ ಯುದ್ಧವಿಮಾನಗಳ ಸೇರ್ಪಡೆ, ಉಪಗ್ರಹ ನಾಶಕ ತಂತ್ರಜ್ಞಾನದ ಅಭಿವೃದ್ಧಿ, ಘಾತಕ್ ಮಾನವರಹಿತ ದಾಳಿ ಡ್ರೋನ್‌ಗಳ ಅಳವಡಿಕೆ, ಹೆಲಿಕಾಪ್ಟರ್‌ನಿಂದ ನೌಕೆಯತ್ತ ಉಡಾಯಿಸಬಹುದಾದ NASM-SR ಕ್ಷಿಪಣಿಗಳ ನಿಯೋಜನೆ ಮುಂತಾದವು ಅಂಥ ಕ್ರಮಗಳು. 2024ರಲ್ಲಿ ಆರು ಹೊಸ ಸಬ್‌ಮೆರೀನ್‌ಗಳೂ ಸೇನೆ ಸೇರುವ ನಿರೀಕ್ಷೆ ಇದೆ. ಇದರೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳೂ ಆತ್ಮನಿರ್ಭರ ಮಿಲಿಟರಿಯನ್ನು ರೂಪುಗೊಳಿಸುವಲ್ಲಿ ನೆರವಾಗುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಡಿಆರ್‌ಡಿಒ, ಇಸ್ರೋ ಮುಂತಾದ ಸಂಸ್ಥೆಗಳು ಪರಿಣಾಮಕಾರಿ ಆವಿಷ್ಕಾರಗಳನ್ನು ಮಾಡುತ್ತಿವೆ.
ಜಾಣ ರಾಜತಾಂತ್ರಿಕ ನಡೆಗಳ ಜತೆಗೆ ಇಂಥ ಮಿಲಿಟರಿ ಸನ್ನದ್ಧತೆಗಳೂ ಸೇರಿದಾಗ ರಾಷ್ಟ್ರವೊಂದರ ಭದ್ರತಾ ವ್ಯವಸ್ಥೆ ಪರಿಪೂರ್ಣಗೊಳ್ಳುತ್ತದೆ. 1962ರಲ್ಲಿ ಯುದ್ಧಸನ್ನದ್ಧತೆಯಿಲ್ಲದ ಕಾರಣ ಹಿನ್ನಡೆ ಅನುಭವಿಸಿದ ಭಾರತ, ಇಂದು ಅದನ್ನು ಮೀರಿ ನಿಂತಿದೆ ಎಂಬುದನ್ನು ವೈರಿಗಳೂ ಅರ್ಥ ಮಾಡಿಕೊಳ್ಳುವಂತೆ ನಮ್ಮ ನಡೆಯಿರುವುದು ದೇಶವಾಸಿಗಳ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.
ಇದನ್ನೂ ಓದಿ | ಬೀಜಿಂಗ್ ತಲುಪಬಲ್ಲ ಸಾಮರ್ಥ್ಯದ ಅಗ್ನಿ-V ಕ್ಷಿಪಣಿ ಉಡಾಯಿಸಿದ ಭಾರತ | ಗಡಿ ತಗಾದೆ ತೆಗೆದಿದ್ದಕ್ಕೆ ಎಚ್ಚರಿಕೆ?