Site icon Vistara News

ವಿಸ್ತಾರ ಸಂಪಾದಕೀಯ: ಉಕ್ರೇನ್- ರಷ್ಯಾ ನಡುವೆ ಶಾಂತಿ ಸ್ಥಾಪನೆಗಾಗಿ ಭಾರತದ ಮಧ್ಯಸ್ತಿಕೆ ಸೂಕ್ತ

India's intervention is appropriate for peace between Ukraine and Russia

#image_title

ತನ್ನ ಪಕ್ಕದ ಪುಟ್ಟ ದೇಶ ಉಕ್ರೇನ್‌ನ ಮೇಲೆ ರಷ್ಯಾ ಯುದ್ಧ ಸಾರಿ (Russia- ukraine war) ಒಂದು ವರ್ಷ ಕಳೆದಿದೆ. ಉಕ್ರೇನ್‌ ಬಳಲಿದೆ, ಆದರೆ ಸೋಲೊಪ್ಪಿಕೊಂಡಿಲ್ಲ. ರಷ್ಯವೇನೂ ಗೆದ್ದಿಲ್ಲ, ಆದರೆ ದಾಳಿ ಮುಂದುವರಿದಿದೆ. ಸಾವಿರಾರು ಮಂದಿ ಸತ್ತಿದ್ದಾರೆ, ಗಾಯಗೊಂಡಿದ್ದಾರೆ, ನಿರಾಶ್ರಿತರಾಗಿದ್ದಾರೆ. ಅಲ್ಪಕಾಲದ ಯುದ್ಧವೆಂಬುದಿಲ್ಲ; ಯುದ್ಧವೆಂಬುದು ಆರಂಭವಾದರೆ ಅದಕ್ಕೆ ಅಂತ್ಯವಿಲ್ಲ ಎಂದು ಜ್ಞಾನಿಗಳು ಹೇಳುವ ಮಾತು ನಿಜವಾಗುವಂತಿದೆ. ಭಾರತ ಸೇರಿದಂತೆ ಇಡೀ ವಿಶ್ವದ ಮೇಲೆ ಈ ಯುದ್ಧ ಋಣಾತ್ಮಕ ಪರಿಣಾಮ ಬೀರಿದೆ. ಭಾರತ, ಯುರೋಪ್‌ನ ಆಮದು ಹಾಗೂ ರಫ್ತುಗಳ ಮೇಲೆ ಇದು ಗಂಭೀರ ಪರಿಣಾಮ ತೋರಿಸಿದೆ. ಹಾಗಿದ್ದರೆ ಇದಕ್ಕೆ ಅಂತ್ಯವಿಲ್ಲವೇ? ರಾಜತಾಂತ್ರಿಕತೆಯಿಂದ ಈ ಸಮರಕ್ಕೆ ಒಂದು ಕೊನೆ ಹಾಡಲು ಸಾಧ್ಯ. ಆದರೆ ಇದಕ್ಕೆ ಯಾರು ಮುಂದಾಗಬೇಕು?

ಈ ಹಿನ್ನೆಲೆಯಲ್ಲಿ, ಶಾಂತಿ ಮಧ್ಯಸ್ಥಿಕೆಗೆ ಭಾರತದತ್ತ ಇಡೀ ವಿಶ್ವ ಎದುರು ನೋಡುತ್ತಿರುವಂತಿದೆ. ಇದೇನೂ ಉತ್ಪ್ರೇಕ್ಷೆಯಲ್ಲ. ಈಗಾಗಲೇ ಪ್ರಧಾನಿ ರಷ್ಯಾ ಅಧ್ಯಕ್ಷರ ಜತೆ ಶಾಂತಿ ಸ್ಥಾಪನೆ ಕುರಿತು ಮಾತನಾಡಿದ್ದಾರೆ. ಹಿಂದೊಮ್ಮೆ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರೇ ಈ ವಿಷಯದಲ್ಲಿ ಭಾರತ ಮಧ್ಯಪ್ರವೇಶಿಸಬೇಕು ಎಂದಿದ್ದರು. ಕಳೆದ ನವೆಂಬರ್‌ನಲ್ಲಿ ಮಾಸ್ಕೋಗೆ ಭೇಟಿ ನೀಡಿದ್ದ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಅವರು, ದ್ವಿಪಕ್ಷೀಯ ವ್ಯಾಪಾರ, ವಹಿವಾಟು ವೃದ್ಧಿ ಜತೆಗೆ ಸಮರ ವಿಚಾರದಲ್ಲೂ ಮಧ್ಯಸ್ಥಿಕೆ ಸಾಧ್ಯವೇ ಎಂಬುದನ್ನು ಪರಿಶೀಲಿಸಿದ್ದರು. ಆದರೆ ಆಗ ಸಕಾರಾತ್ಮಕ ಸೂಚನೆ ಬಂದಿರಲಿಲ್ಲ. ಉಭಯ ದೇಶಗಳ ನಡುವಿನ ಯುದ್ಧ ಕೊನೆಗೊಳ್ಳಬೇಕು ಎಂದು ಭಾರತ ಆರಂಭದಿಂದಲೂ ಹೇಳುತ್ತಲೇ ಬಂದಿದೆ. ಕಳೆದ ವರ್ಷ ನಡೆದ ಶಾಂಘಾಯ್‌ ಸಹಕಾರ ಶೃಂಗದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ ವ್ಲಾದಿಮಿರ್‌ ಪುಟಿನ್‌ಗೆ ʼಇದು ಯುದ್ಧದ ಸಮಯವಲ್ಲʼ ಎಂದು ಸಾರ್ವಜನಿಕವಾಗಿ, ಸ್ಪಷ್ಟವಾಗಿ ಹೇಳಿದ್ದರು. ಭಾರತದಲ್ಲಿನ ಉಕ್ರೇನ್‌ ರಾಯಭಾರಿ, ಮೆಕ್ಸಿಕೋ ಅಧ್ಯಕ್ಷರು ಕೂಡಾ ಮೋದಿಯವರು ಮಧ್ಯಪ್ರವೇಶ ಮಾಡಿದರೆ ಯುದ್ಧ ನಿಲ್ಲಬಲ್ಲದು ಎಂದಿದ್ದರು. ಯುದ್ಧದ ಸೌಹಾರ್ದ ಅಂತ್ಯ ಭಾರತದಿಂದ ಮಾತ್ರ ಸಾಧ್ಯ ಎಂದು ಅಮೆರಿಕ ಕೂಡ ಮತ್ತೆ ಮತ್ತೆ ಹೇಳುತ್ತಿದೆ. ಜರ್ಮನಿ, ಬ್ರಿಟನ್ ಮುಂತಾದ ದೇಶಗಳ ಮುಖ್ಯಸ್ಥರೂ ಇದೇ ಮಾತು ಹೇಳುತ್ತಿದ್ದಾರೆ. ಪ್ರಧಾನಿ ಅವರ ಬಲಿಷ್ಠ ನಾಯಕತ್ವ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಜತೆಗಿನ ಅವರ ಆತ್ಮೀಯತೆ ಉಕ್ರೇನ್ ಬಿಕ್ಕಟ್ಟು ಅಂತ್ಯಗೊಳಿಸಲು ನೆರವಾಗಬಹುದು ಎಂಬ ವಿಶ್ವಾಸ ಜಾಗತಿಕ ನಾಯಕರಲ್ಲಿದೆ. ಇತ್ತೀಚೆಗೆ ನಡೆದ ವಿಶ್ವಸಂಸ್ಥೆ ಸಭೆಯಲ್ಲೂ ಉಕ್ರೇನ್ ಬಿಕ್ಕಟ್ಟು ಬಗೆಹರಿಸುವಲ್ಲಿನ ಅದರ ವೈಫಲ್ಯವನ್ನು ಭಾರತ ಗಟ್ಟಿ ದನಿಯಲ್ಲಿ ಹೇಳಿದೆ.

ಇದುವರೆಗೆ ರಷ್ಯಾ- ಉಕ್ರೇನ್‌ ಯುದ್ಧದ ವಿಚಾರದಲ್ಲಿ ಭಾರತ ನಡೆದುಕೊಂಡಿರುವ ರೀತಿಯೂ ಸಮತೂಕದ್ದು. ಈ ವಿಷಯದಲ್ಲಿ ರಾಜತಾಂತ್ರಿಕ ಸಮತೋಲನ ಕಾಯ್ದುಕೊಂಡಿರುವ ಭಾರತ, ನ್ಯಾಟೋ ದೇಶಗಳು ಹಾಗೂ ರಷ್ಯಾ ನಡುವಿನ ಸಂಘರ್ಷದಲ್ಲಿ ಉಭಯ ಕಡೆಗಳಿಂದ ಸಮಾನ ದೂರದಲ್ಲಿ ನಿಂತು ತಟಸ್ಥ ಧೋರಣೆಯನ್ನು ಮುಂದುವರಿಸಿದೆ. 15 ಸದಸ್ಯರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈ ಸಂಘರ್ಷದ ಬಗ್ಗೆ 47 ಬಾರಿ ಚರ್ಚಿಸಿದ್ದು, ಭಾರತ ಅವುಗಳಲ್ಲಿ ಭಾಗವಹಿಸಿಲ್ಲ. 193 ಸದಸ್ಯರಿರುವ ವಿಶ್ವಸಂಸ್ಥೆ ಮಹಾಸಭೆಯಲ್ಲಿ ರಷ್ಯಾವನ್ನು ಖಂಡಿಸುವ ಬಗ್ಗೆ ತೆಗೆದುಕೊಳ್ಳಲಾದ ನಿರ್ಣಯಗಳಿಂದ ಭಾರತ ದೂರ ನಿಂತಿದೆ. ಯುದ್ಧ ಪೀಡಿತ ಸ್ಥಳದಿಂದ ಸುಮಾರು 22,000 ಭಾರತೀಯ ಪ್ರಜೆಗಳನ್ನು ಮರಳಿ ಕರೆಸಿಕೊಂಡಿದೆ. ರಷ್ಯಾದ ಅಧ್ಯಕ್ಷ ಪುಟಿನ್ ಮತ್ತಿತರ ನಾಯಕರು ಪರಮಾಣು ಅಸ್ತ್ರ ಪ್ರಯೋಗದ ಬೆದರಿಕೆ ಹಾಕಿದಾಗ, ಇದನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಿ, ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ; ವೇಗದ ಜತೆಗೆ ಸುರಕ್ಷತೆಯೂ ಇರಲಿ

ಹೀಗಾಗಿ, ಭಾರತದ ನಿಲುವು ಯಾವುದೇ ಒಂದು ಕಡೆಗೆ ಇರದೆ, ಎರಡೂ ಕಡೆಗಳಿಂದ ಸಮಾನ ಅಂತರ ಕಾಪಾಡಿಕೊಂಡಿರುವುದರಿಂದ, ಮಧ್ಯಸ್ಥಿಕೆ ವಹಿಸುವುದಕ್ಕೂ ಸೂಕ್ತವಾದುದಾಗಿದೆ. ಜಿ-20 ದೇಶಗಳ ಅಧ್ಯಕ್ಷ ಸ್ಥಾನವೂ ಈಗ ಭಾರತದಲ್ಲಿದ್ದು, ಈ ವಲಯದ ವ್ಯಾಪಾರ ವಹಿವಾಟು ಮತ್ತಿತರ ವಿಚಾರಗಳಿಗೆ ದೊಡ್ಡ ಅಡಚಣೆಯಾಗಿರುವ ರಷ್ಯಾ- ಉಕ್ರೇನ್‌ ಯುದ್ಧವನ್ನು ಯಾವುದೇ ರೀತಿಯಲ್ಲಾದರೂ ತಹಬಂದಿಗೆ ತಂದು ಇಲ್ಲಿ ಶಾಂತಿ ನೆಲೆಸುವಂತೆ ಮಾಡುವ ಉತ್ತರದಾಯಿತ್ವವನ್ನು ಹೊಂದಿದೆ. ಒಂದು ಕಡೆ ರಷ್ಯಾ, ಇನ್ನೊಂದು ಕಡೆ ನ್ಯಾಟೊ ದೇಶಗಳು- ಇವುಗಳ ನಡುವೆ ತಕ್ಕಡಿ ತೂಗುವುದು ಸುಲಭವಲ್ಲ. ಆದರೆ ಇದೊಂದು ಐತಿಹಾಸಿಕ ಹೊಣೆ. ಈ ಕಾರ್ಯದಲ್ಲಿ ಭಾರತ ಸಫಲವಾದರೆ, ಅದೊಂದು ಚಾರಿತ್ರಿಕ ಹೆಜ್ಜೆಯಾಗಲಿದೆ. ಪ್ರಧಾನಿ ಮೋದಿಯವರ ದೌತ್ಯ ಯಶಸ್ವಿ ಆದಲ್ಲಿ, ಜಾಗತಿಕ ಶಾಂತಿ ಸ್ಥಾಪನೆ ಮಾತ್ರವಲ್ಲ, ಭಾರತದ ಪ್ರತಿಷ್ಠೆಯೂ ಹೆಚ್ಚಲಿದೆ. ಹೀಗಾಗಿ ಜಾಗತಿಕ ನಾಯಕರ ಒತ್ತಾಸೆ ಮೇರೆಗೆ ಭಾರತ ಶಾಂತಿ ಸ್ಥಾಪನೆಯತ್ತ ಮತ್ತೊಂದು ಹೆಜ್ಜೆ ಮುಂದಿಡುವ ಕಾಲ ಈಗ ಸನ್ನಿಹಿತವಾಗಿದೆ.

Exit mobile version