Site icon Vistara News

Interesting: ಪಟ್‌ ಪಟ್‌ ಒಡೆಯಲು ಖುಷಿ ಆಗುವ bubble wrap ನಿಜಕ್ಕೂ ಹುಟ್ಟಿದ್ದೇಕೆ ಗೊತ್ತಾ?

ಗಾಜು, ಕನ್ನಡಿ, ಪಿಂಗಾಣಿ ಅಥವಾ ಅಂಥ ಸೂಕ್ಷ್ಮ ವಸ್ತುಗಳನ್ನು ಸಾಗಿಸುವಾಗ ಪುಟ್ಟ-ಪುಟ್ಟ ಗಾಳಿ ಗುಳ್ಳೆಗಳಿರುವ ಪ್ಲಾಸ್ಟಿಕ್ ಹೊದಿಕೆಯನ್ನು ಆ ವಸ್ತುಗಳ ಮೇಲೆ ಸುತ್ತುವುದನ್ನು ನಾವೆಲ್ಲ ಕಂಡೇ ಇರುತ್ತೇವೆ. ಇದರಿಂದ ಆ ವಸ್ತುವನ್ನು ಸುರಕ್ಷಿತವಾಗಿ ಸಾಗಿಸಲು ಅನುಕೂಲ ಎಂಬುದು ಹೌದಾದರೂ, ಹೆಚ್ಚಿನವರಿಗೆ ಈ ಬಬಲ್ ರ‍್ಯಾಪ್ (Bubble wrap) ಅಥವಾ ಗುಳ್ಳೆ ಹೊದಿಕೆಗಳು ಪ್ರಿಯವಾಗುವುದು ಆ ಗುಳ್ಳೆಗಳನ್ನು ಒಡೆಯಲೋಸುಗ!

ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎರಡು ಬೆರಳಿನಲ್ಲಿ ಆ ಗಾಳಿಗುಳ್ಳೆಯನ್ನು ʻಪಟ್ʼ ಎಂದು ಒಡೆದು ಸಂಭ್ರಮಿಸುವುದನ್ನು ನೋಡಲು ಮೋಜೆನಿಸುತ್ತದೆ. ಪ್ಯಾಕಿಂಗ್ಗಾಗಿ ಈ ಗಾಳಿಗುಳ್ಳೆಗಳ ಹೊದಿಕೆಯನ್ನು ಬಳಸಬೇಕೆಂಬ ಉಪಾಯ ಮೊದಲಿಗೆ ಬಂದಿದ್ದು ಯಾರಿಗೆ?
ವಿಷಯವೇನೆಂದರೆ, ಇದು ತಯಾರಾಗಿದ್ದು ವಸ್ತುಗಳ ಸಾಗಾಣಿಕೆಗಾಗಿ ಅಲ್ಲವೇ ಅಲ್ಲ. ಅದನ್ನು ಅಲ್ಫ್ರೆಡ್ ಫೀಲ್ಡಿಂಗ್ ಮತ್ತು ಮಾರ್ಕ್ ಶಾವೆನ್ನಸ್ ಎಂಬಿಬ್ಬರು ಗೋಡೆಯ ಅಲಂಕರಣಕ್ಕೆ ಹಚ್ಚುವ ವಾಲ್‌ ಪೇಪರ್‌ ಎಂದು 1957ರಲ್ಲಿ ಸೃಷ್ಟಿಸಿದ್ದರು. ಆದರೆ ಗೋಡೆ ತುಂಬಾ ಗುಳ್ಳೆ ಬಂದಂತೆ ಕಾಣುವ ಅದರ ಅಂದಗೆಡುಕ ಸ್ವರೂಪವನ್ನು ಜನ ಇಷ್ಟಪಡಲಿಲ್ಲ. ಹಾಗಾಗಿ ತಯಾರಿಸಿದ ವಾಲ್‌ ಪೇಪರ್‌ಗಳನ್ನು ಅವರು ಐಬಿಎಂ ಕಂಪ್ಯೂಟರ್ಸ್‌ ಗೆ ಮಾರಾಟ ಮಾಡಿದರು.

ಅದನ್ನೇನು ಮಾಡುವುದು ಎಂದು ಐಬಿಎಂಗೂ ಮೊದಲು ಬಗೆಹರಿಯಲಿಲ್ಲ. ಆದರೆ ತನ್ನ ಕಂಪ್ಯೂಟರ್ಗಳನ್ನು ಸಾಗಾಣಿಕೆ ಮಾಡುವಾಗ ಆಗುತ್ತಿದ್ದ ಹಾನಿ ತಪ್ಪಿಸಲು ಅವುಗಳನ್ನು ಬಳಸಬಹುದು ಎಂದು ಕಂಪೆನಿಗೆ ಅನಿಸಿತು. ಅಂದಿನಿಂದ ಇಂದಿನವರೆಗೆ ಈ ಬಬಲ್ ‌ರ‍್ಯಾಪರ್‌ಗಳನ್ನು ಹಾನಿಯಾಗದಂತೆ ವಸ್ತುಗಳನ್ನು ಸಾಗಿಸಲು ಮತ್ತು ಕೈತುರಿಕೆ ಆದಾಗ ʻಪಟ್ʼ ಎಂದು ಗುಳ್ಳೆ ಒಡೆಯಲು ಪ್ರಪಂಚದಾದ್ಯಂತ ಬಳಸಲಾಗುತ್ತದೆ.

ಇದನ್ನೂ ಓದಿದೆ| ದಾಖಲೆ ಬರೆದ ಬಾಳೆ ಹಣ್ಣು ಮೇಳ, ಜೋಡಿಸಲಿಕ್ಕೇ 3 ದಿನ ಬೇಕಾಯ್ತಂತೆ!

Exit mobile version