Site icon Vistara News

Iran-Israel: ಇರಾನ್ ವಶಪಡಿಸಿಕೊಂಡ ಇಸ್ರೇಲ್‌ ಹಡಗಿನಲ್ಲಿದ್ದ 17 ಭಾರತೀಯರು ಸೇರಿ ಎಲ್ಲ ಸಿಬ್ಬಂದಿಯ ಬಿಡುಗಡೆ

Iran-Israel

Iran-Israel

ನವದೆಹಲಿ: ಕೆಲವು ದಿನಗಳ ಹಿಂದೆ ಯುಎಇ ಕರಾವಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (Iran’s Revolutionary Guards) ವಶಪಡಿಸಿಕೊಂಡ (Ship Seized) ಇಸ್ರೇಲ್‌ ಮೂಲದ ಕಂಟೈನರ್ ಹಡಗಿನಲ್ಲಿದ್ದ ಎಲ್ಲ 25 ಸಿಬ್ಬಂದಿಯನ್ನು ಇರಾನ್‌ ಬಿಡುಗಡೆ ಮಾಡಿದೆ. ಈ ಪೈಕಿ 16 ಮಂದಿ ಭಾರತೀಯರಿದ್ದಾರೆ. ಏಪ್ರಿಲ್‌ 13ರಂದು ಕಂಟೈನರ್ ಹಡಗು ಎಂಸಿಎಸ್ ಏರೀಸ್ (MCS Aries) ಅನ್ನು ಹಾರ್ಮುಜ್ ಜಲಸಂಧಿ (Strait of Hormuz)ಯ ಬಳಿ ಹೆಲಿಬೋರ್ನ್ ಕಾರ್ಯಾಚರಣೆ ನಡೆಸುವ ಮೂಲಕ ವಶಪಡಿಸಿಕೊಳ್ಳಲಾಗಿತ್ತು (Iran-Israel).

ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮಿರ್‌- ಬ್ಡೊಲ್ಲಾಹಿಯಾನ್ ಮತ್ತು ಎಸ್ಟೋನಿಯನ್‌ನ ಸಚಿವ ಮಾರ್ಗಸ್ ತ್ಸಾಹ್ಕ್ನಾ ನಡುವೆ ಶುಕ್ರವಾರ ನಡೆದ ದೂರವಾಣಿ ಸಂಭಾಷಣೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ದೂರವಾಣಿ ಸಂಭಾಷಣೆಯ ಸಮಯದಲ್ಲಿ, ಉಭಯ ಕಡೆಯವರು ದ್ವಿಪಕ್ಷೀಯ ಸಂಬಂಧಗಳು ಮತ್ತು ಇತ್ತೀಚಿನ ಸ್ಥಿತಿ, ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿದೆ.

ಇದಕ್ಕೂ ಮೊದಲು ಇಸ್ರೇಲ್‌ನ ಸರಕು ಹಡಗಿನಲ್ಲಿದ್ದ 17 ಭಾರತೀಯ ಸಿಬ್ಬಂದಿ ಪೈಕಿ ಒಬ್ಬರಾದ ಕೇರಳದ ತ್ರಿಶೂರ್‌ನ ಆನ್ ಟೆಸ್ಸಾ ಜೋಸೆಫ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅವರು ಏಪ್ರಿಲ್ 18ರಂದು ಸುರಕ್ಷಿತವಾಗಿ ಮನೆಗೆ ಮರಳಿದ್ದರು. 17 ಭಾರತೀಯ ಸಿಬ್ಬಂದಿ ಪೈಕಿ ಒಬ್ಬರು ಭಾರತಕ್ಕೆ ಮರಳಿದ್ದಾರೆ ಮತ್ತು ಇತರರು ಸುರಕ್ಷಿತರಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಏಪ್ರಿಲ್ 25ರಂದು ಹೇಳಿತ್ತು. ಕೆಲವು ಒಪ್ಪಂದಗಳನ್ನು ಪೂರೈಸಿದ ನಂತರ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿತ್ತು. ಅದರಂತೆ ಇದೀಗ ಎಲ್ಲರನ್ನೂ ಬಿಡುಗಡೆ ಮಾಡಲಾಗಿದ್ದು, ಮನೆಯವರೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕಂಟೈನರ್ ಹಡಗನ್ನು ವಶಪಡಿಸಿಕೊಂಡ ಕೂಡಲೇ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್‌ನ ಸಚಿವ ಹುಸೇನ್ ಅಮಿರ್‌- ಬ್ಡೊಲ್ಲಾಹಿಯಾನ್ ಅವರೊಂದಿಗೆ ಮಾತನಾಡಿ, 17 ಭಾರತೀಯ ಸಿಬ್ಬಂದಿಯನ್ನು ಬಿಡುಗಡೆ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಇತ್ತ ಎಸ್ಟೋನಿಯನ್ ಕೂಡ ಸಿಬ್ಬಂದಿಯನ್ನು ರಿಲೀಸ್‌ ಮಾಡುವಂತೆ ಮನವಿ ಸಲ್ಲಿಸಿತ್ತು. “ನಮ್ಮ ಪ್ರಾದೇಶಿಕ ಜಲಪ್ರದೇಶದಲ್ಲಿ ತನ್ನ ರಾಡಾರ್ ಅನ್ನು ಆಫ್ ಮಾಡಿದ ಮತ್ತು ನೌಕಾಯಾನದ ಭದ್ರತೆಗೆ ಅಪಾಯವನ್ನುಂಟು ಮಾಡಿದ ಕಾರಣಕ್ಕೆ ಹಡಗನ್ನು ನ್ಯಾಯಾಂಗ ನಿಯಮಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ” ಎಂದು ಇರಾನ್‌ ಹೇಳಿತ್ತು.

ಎಸ್ಟೋನಿಯನ್ ಅಧಿಕಾರಿಗಳ ನಡುವಿನ ದೂರವಾಣಿ ಚರ್ಚೆಯ ಸಮಯದಲ್ಲಿ ಇರಾನ್, “ಮಾನವೀಯ ಆಧಾರದ ಮೇಲೆ ಈಗಾಗಲೇ ಹಡಗಿನ ಎಲ್ಲ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ ದೇಶಗಳ ಸಿಬ್ಬಂದಿ ತಮ್ಮ ತಾಯ್ನಾಡಿಗೆ ತೆರಳಬಹುದು” ಎಂದು ಹೇಳಿತ್ತು. ದಿನಗಳ ಹಿಂದೆ ಸಿರಿಯಾದಲ್ಲಿರುವ ಇರಾನ್‌ನ ದೂತಾವಾಸ ಕಚೇರಿ ಮೇಲೆ ದಾಳಿ ನಡೆಸಿದ ಇಸ್ರೇಲ್ ಕ್ರಮವನ್ನು ಖಂಡಿಸಿ ಇರಾನ್ ಯುದ್ಧ ಪ್ರಾರಂಭಿಸಲು ಮುಂದಾಗಿತ್ತು. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆಯೇ ಹಡಗನ್ನು ವಶಪಡಿಸಿಕೊಂಡಿದ್ದು ಆತಂಕ ಸೃಷ್ಟಿಸಿತ್ತು. ಇದೀಗ ಆತಂಕ ನಿವಾರಣೆಯಾಗಿದೆ.

ಇದನ್ನೂ ಓದಿ: Iran-Israel: 17 ಭಾರತೀಯ ಸಿಬ್ಬಂದಿಯಿದ್ದ ಇಸ್ರೇಲ್‌ ಹಡಗು ವಶಪಡಿಸಿದ ಇರಾನ್; ಯುದ್ಧಾಂತಕದ ಕಾರ್ಮೋಡ

Exit mobile version