Site icon Vistara News

Iran-Israel: 17 ಭಾರತೀಯ ಸಿಬ್ಬಂದಿಯಿದ್ದ ಇಸ್ರೇಲ್‌ ಹಡಗು ವಶಪಡಿಸಿದ ಇರಾನ್; ಯುದ್ಧಾಂತಕದ ಕಾರ್ಮೋಡ

Iran-Israel War

Iran-Israel War

ನವದೆಹಲಿ: ಇಸ್ರೇಲ್ ಹಾಗೂ ಇರಾನ್ ನಡುವೆ ಯಾವುದೇ ಕ್ಷಣದಲ್ಲೂ ಯುದ್ಧ (Iran-Israel) ಆರಂಭಗೊಳ್ಳುವ ಸಾಧ್ಯತೆ ಇದೆ. ಈ ಮಧ್ಯೆ ಯುಎಇ ಕರಾವಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (Iran’s Revolutionary Guards) ವಶಪಡಿಸಿಕೊಂಡ (Ship Seized) ಇಸ್ರೇಲ್‌ ಮೂಲದ ಕಂಟೈನರ್ ಹಡಗಿನಲ್ಲಿರುವ 25 ಸಿಬ್ಬಂದಿ ಪೈಕಿ 17 ಮಂದಿ ಭಾರತೀಯರು ಎಂದು ಮೂಲಗಳು ತಿಳಿಸಿವೆ.

ಕಂಟೈನರ್ ಹಡಗು ಎಂಸಿಎಸ್ ಏರೀಸ್ (MCS Aries) ಅನ್ನು ಹಾರ್ಮುಜ್ ಜಲಸಂಧಿ (Strait of Hormuz)ಯ ಬಳಿ ಹೆಲಿಬೋರ್ನ್ ಕಾರ್ಯಾಚರಣೆ ನಡೆಸುವ ಮೂಲಕ ವಶಪಡಿಸಿಕೊಳ್ಳಲಾಗಿದೆ ಮತ್ತು ಅದು ಈಗ ಇರಾನ್‌ನ ಜಲಪ್ರದೇಶದತ್ತ ಸಾಗುತ್ತಿದೆ ಎಂದು ದೇಶದ ಸರ್ಕಾರಿ ಸ್ವಾಮ್ಯದ ಐಆರ್‌ಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ. “ಸರಕು ಹಡಗು ‘ಎಂಸಿಎಸ್ ಏರೀಸ್’ ಅನ್ನು ಇರಾನ್ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಹಡಗಿನಲ್ಲಿ 17 ಭಾರತೀಯರು ಇದ್ದಾರೆ. ಈ ಭಾರತೀಯ ಪ್ರಜೆಗಳ ಭದ್ರತೆ ಮತ್ತು ಶೀಘ್ರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ನಾವು ಟೆಹ್ರಾನ್ ಮತ್ತು ದೆಹಲಿಯಲ್ಲಿ ರಾಜತಾಂತ್ರಿಕ ಮಾರ್ಗಗಳ ಮೂಲಕ ಇರಾನಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಮೂಲಗಳು ತಿಳಿಸಿವೆ.

ಹಡಗಿನ ಆಪರೇಟರ್, ಇಟಾಲಿಯನ್-ಸ್ವಿಸ್ ಗುಂಪು ಎಂಎಸ್‌ಸಿ, ಇರಾನಿನ ಅಧಿಕಾರಿಗಳು ಹಡಗು ಹತ್ತಿರುವುದನ್ನು ದೃಢಪಡಿಸಿದೆ. ʼʼಹಡಗಿನಲ್ಲಿ 25 ಸಿಬ್ಬಂದಿ ಇದ್ದಾರೆ ಮತ್ತು ಅವರ ಯೋಗಕ್ಷೇಮ ಮತ್ತು ಹಡಗನ್ನು ಸುರಕ್ಷಿತವಾಗಿ ಹಿಂದುರಿಗಿಸಲು ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆʼʼ ಎಂದು ಅದು ಹೇಳಿದೆ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆಯೇ ಹಡಗನ್ನು ವಶಪಡಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. 11 ದಿನಗಳ ಹಿಂದೆ ಸಿರಿಯಾದಲ್ಲಿರುವ ಇರಾನ್‌ನ ದೂತಾವಾಸ ಕಚೇರಿ ಮೇಲೆ ದಾಳಿ ನಡೆಸಿದ ಇಸ್ರೇಲ್ ಕ್ರಮವನ್ನು ಖಂಡಿಸಿ ಇರಾನ್ ಯುದ್ಧ ಪ್ರಾರಂಭಿಸಲು ಮುಂದಾಗಿದೆ. ಈಗಾಗಲೇ ಇರಾನ್‌ ಪ್ರೇರಿತ ಹೆಜ್ಬೊಲ್ಲಾ ಉಗ್ರರು ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ಶುರು ಮಾಡಿದ್ದಾರೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ 13 ಮಂದಿ ಮೃತಪಟ್ಟಿದ್ದರು.
ಇಸ್ರೇಲ್‌ನ ಕ್ರಮಕ್ಕೆ ಪ್ರತೀಕಾರವಾಗಿ ಶೀಘ್ರದಲ್ಲೇ ಇರಾನ್ ಇಸ್ರೇಲ್‌ನ ಟೆಹ್ರಾನ್ ಮೇಲೆ ದಾಳಿ ಇರಾನ್‌ ಅಧಿಕೃತವಾಗಿ ನಡೆಸಲಿದೆ ಎನ್ನಲಾಗಿದೆ. ಇದೀಗ ವಶಪಡಿಸಿಕೊಂಡ ಹಡಗು ಇಸ್ರೇಲ್‌ಗೆ ಸೇರಿದ್ದು ಎಂದು ಇರಾನ್ ಹೇಳಿದೆ.

“ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಲು ಕಾರಣವಾದ ಇರಾನ್ ಇದಕ್ಕೆ ತಕ್ಕ ಪರಿಣಾಮಗಳನ್ನು ಎದುರಿಸಲಿದೆʼʼ ಎಂದು ಇಸ್ರೇಲ್‌ ಎಚ್ಚರಿಸಿದೆ. ಇರಾನ್ ವಿಶ್ವದ ಅತಿದೊಡ್ಡ ಭಯೋತ್ಪಾದನೆ ಪ್ರಾಯೋಜಕ ರಾಷ್ಟ್ರವಾಗಿದೆ. ಅದರ ಭಯೋತ್ಪಾದನಾ ಜಾಲವು ಇಸ್ರೇಲ್, ಗಾಜಾ, ಲೆಬನಾನ್ ಮತ್ತು ಸಿರಿಯಾ ಜನರಿಗೆ ಮಾತ್ರ ಬೆದರಿಕೆಯೊಡ್ಡುವುದಿಲ್ಲ; ಉಕ್ರೇನ್ ಮತ್ತು ಅದರಾಚೆಗಿನ ಯುದ್ಧವನ್ನೂ ಉತ್ತೇಜಿಸುತ್ತದೆ. ಇರಾನ್ ಆಕ್ರಮಣದಿಂದ ಇಸ್ರೇಲ್ ಅನ್ನು ರಕ್ಷಿಸಲು ನಾವು ಸನ್ನದ್ಧರಾಗಿದ್ದೇವೆ. ನಾವು ಪ್ರತಿಕ್ರಿಯೆ ನೀಡಲು ಸಹ ಸಿದ್ಧರಿದ್ದೇವೆ” ಎಂದು ಹೇಳಿದೆ.

ಭಾರತದ ನಿಲುವೇನು?

ಭಾರತದ ಬೆಂಬಲ ಯಾವಾಗಲೂ ಇಸ್ರೇಲ್‌ ಕಡೆಗೇ ಇರುತ್ತದೆ. ಹಾಗಂತ ಇರಾನ್‌ ಕೂಡ ಭಾರತದ ವೈರಿ ದೇಶ ಏನಲ್ಲ. ಹಾಗಾಗಿ ಭಾರತ ಎಚ್ಚರಿಕೆಯ ಹೆಜ್ಜೆ ಇಡಲಿದೆ. ಇಸ್ರೇಲ್‌-ಇರಾನ್‌ ಯುದ್ಧ ತಡೆಯಲು ಭಾರತ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಿದೆ. ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಈಗಾಗಲೇ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಇದನ್ನೂ ಓದಿ: Iran-Israel War Explainer: ಇಸ್ರೇಲ್ ಮೇಲೆ ಇರಾನ್ ದಾಳಿಗೆ ಕ್ಷಣಗಣನೆ; ಮುಂದೇನಾಗಬಹುದು?

Exit mobile version