Site icon Vistara News

Israel Palestine War: ಸಾವಿನ ಮನೆಯಂತಾದ ಇಸ್ರೇಲ್-ಪ್ಯಾಲೆಸ್ತೀನ್; ದಾಳಿಗೆ‌ 1,100 ಮಂದಿ ಬಲಿ

Israel Palestine War

ಜೆರುಸಲೇಂ: ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ದಾಳಿ ಆರಂಭಿಸಿದ ಬಳಿಕ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಮಧ್ಯೆ ನಡೆದ ಸಂಘರ್ಷದಲ್ಲಿ (Israel Palestine War) ಮೃತಪಟ್ಟವರ ಸಂಖ್ಯೆ 1,100 ದಾಟಿದೆ. ರಾಕೆಟ್‌, ಡ್ರೋನ್‌ ಹಾಗೂ ಗುಂಡಿನ ದಾಳಿಗೆ ಎರಡೂ ರಾಷ್ಟ್ರಗಳು ಸಾವಿನ ಮನೆಯಂತಾಗಿದ್ದು, ದಿನೇದಿನೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮೃತಪಟ್ಟವರಲ್ಲಿ ಅಮೆರಿಕ, ಜರ್ಮನಿ, ಜಪಾನ್‌ ನಾಗರಿಕರು ಕೂಡ ಇದ್ದಾರೆ ಎಂದು ತಿಳಿದುಬಂದಿದೆ.

ಹಮಾಸ್‌ ಉಗ್ರರ ದಾಳಿಯಿಂದ ಇಸ್ರೇಲ್‌ನಲ್ಲಿ 44 ಯೋಧರು ಸೇರಿ 700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಇಸ್ರೇಲ್‌ ನಡೆಸಿದ ವಾಯುದಾಳಿಯಿಂದ ಗಾಜಾಪಟ್ಟಿಯಲ್ಲಿ 413 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ, “ಇದು ಸುದೀರ್ಘ ಹಾಗೂ ಸವಾಲಿನ ಯುದ್ಧ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿರುವುದು ಶೀಘ್ರದಲ್ಲೇ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಕಾಳಗ ನಿಲ್ಲುವ ಲಕ್ಷಣಗಳು ಇಲ್ಲ ಎನ್ನಲಾಗಿದೆ.

ಹಮಾಸ್‌ ಉಗ್ರರ ದಾಳಿಯಿಂದ ಇಸ್ರೇಲ್‌ ನಲುಗಿಹೋಗಿದೆ. ಯೋಧರು, ಮಹಿಳೆಯರು, ಮಕ್ಕಳನ್ನು ಅಪಹರಿಸುವ ಉಗ್ರರು ಅವರನ್ನು ಕ್ರೂರವಾಗಿ ಹತ್ಯೆ ಮಾಡುತ್ತಿದ್ದಾರೆ. ಸಂಗೀತ ಉತ್ಸವದ ಮೇಲೆ ಹಮಾಸ್‌ ಉಗ್ರರು ನಡೆಸಿದ ದಾಳಿಯಲ್ಲಿಯೇ 260ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಮಹಿಳಾ ಯೋಧರನ್ನು ಬೆತ್ತಲೆಗೊಳಿಸಿ ಹತ್ಯೆ ಮಾಡುವುದು, ತಂದೆ-ತಾಯಿ ಎದುರೇ ಮಕ್ಕಳನ್ನು ಕ್ರೂರವಾಗಿ ಕೊಲೆ ಮಾಡುವುದು ಸೇರಿ ಹಲವು ಹಿಂಸಾತ್ಮಕ ಕೃತ್ಯಗಳಲ್ಲಿ ಹಮಾಸ್‌ ಉಗ್ರರು ತೊಡಗಿದ್ದಾರೆ. ಇದರಿಂದಾಗಿ ಇಸ್ರೇಲ್‌ ನಗರಗಳಲ್ಲಿ ಆತಂಕದ ಛಾಯೆ ಮನೆ ಮಾಡಿದೆ.

ಇದನ್ನೂ ಓದಿ: Israel Palestine War: ತಂದೆ-ತಾಯಿ ಮುಂದೆಯೇ ಮಗಳನ್ನು ಹತ್ಯೆಗೈದ ಹಮಾಸ್ ಉಗ್ರರು!

ಇಸ್ರೇಲ್‌ ಪರ ನಿಂತ ಅಮೆರಿಕ, ಯುದ್ಧನೌಕೆ ರವಾನೆ

ಹಮಾಸ್‌ ಉಗ್ರರ ದಾಳಿಯಲ್ಲಿ ಅಮೆರಿಕ ನಾಗರಿಕರು ಮೃತಪಟ್ಟ ಕಾರಣ ಅಧ್ಯಕ್ಷ ಜೋ ಬೈಡೆನ್‌ ಅವರು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮತ್ತೊಂದೆಡೆ, ಜೋ ಬೈಡೆನ್‌ ಅವರು ಹಮಾಸ್‌ ಉಗ್ರರನ್ನು ನಿಗ್ರಹಿಸುವ ದಿಸೆಯಲ್ಲಿ ಇಸ್ರೇಲ್‌ಗೆ ಬೆಂಬಲ ಘೋಷಿಸಿದ್ದು, ಹಲವು ಯುದ್ಧನೌಕೆಗಳನ್ನು ಕಳುಹಿಸಲು ಆದೇಶ ಹೊರಡಿಸಿದ್ದಾರೆ. ಅಮೆರಿಕ ಮಾತ್ರವಲ್ಲ ಹಲವು ರಾಷ್ಟ್ರಗಳು ಇಸ್ರೇಲ್‌ ಮೇಲಿನ ದಾಳಿಯನ್ನು ಖಂಡಿಸುವ ಜತೆಗೆ ಬೆಂಬಲ ಘೋಷಿಸಿವೆ.

Exit mobile version