Site icon Vistara News

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

Israel

Israel

ಗಾಜಾ: ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ಕದನ ಮುಂದುವರಿದಿದೆ (Israel Palestine War). ಈ ಮಧ್ಯೆ ಒತ್ತೆಯಾಳುಗಳ ಕುಟುಂಬಗಳನ್ನು ಭೇಟಿಯಾದ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಮಾತನಾಡಿ, ʼʼಇಸ್ರೇಲ್ ಪಡೆಗಳು ಹಮಾಸ್‌ ಬೆಟಾಲಿಯನ್ ಕಮಾಂಡರ್‌ಗಳ ಪೈಕಿ ಅರ್ಧದಷ್ಟು ಜನರನ್ನು ಕೊಂದು ಹಾಕಿವೆʼʼ ಎಂದು ಹೇಳಿದ್ದಾರೆ. ʼʼಹಮಾಸ್ ಭಯೋತ್ಪಾದಕರು ಇಸ್ರೇಲ್ ಅನ್ನು ಛಿದ್ರಗೊಳಿಸಲು ಬಯಸಿದ್ದರು. ಆದರೆ ನಾವು ಅದನ್ನೇ ಛಿದ್ರಗೊಳಿಸುತ್ತಿದ್ದೇವೆ” ಎಂದು ಹೇಳಿದರು. ಆದರೆ ಹತ್ಯೆಗೀಡಾದವರ ವಿವರಗಳು ಮತ್ತು ಹೆಸರುಗಳನ್ನು ಅವರು ಬಹಿರಂಗಪಡಿಸಲಿಲ್ಲ.

“ಸೈನಿಕರು, ನಾಗರಿಕರು, ಮಕ್ಕಳು ಸೇರಿದಂತೆ ಹಮಾಸ್‌ನ ಒತ್ತೆಯಾಳುಗಳಾಗಿರುವ ಎಲ್ಲರನ್ನೂ ಸುರಕ್ಷಿತವಾಗಿ ಹಿಂದಿರುಗಿಸಲು ವಿಶಾಲ ಗುಪ್ತಚರ ಇಲಾಖೆ ನಿರಂತರ ಕೆಲಸ ಮಾಡುತ್ತಿದೆʼʼ ಎಂದು ಅವರು ಭರವಸೆ ನೀಡಿದರು. “ನಾವು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೇವೆ. ನಾವು 110 ಒತ್ತೆಯಾಳುಗಳನ್ನು ಬಿಡಿಸಿ ಮನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮವರನ್ನು ಅಪಹರಿಸಿದ, ಕೊಲೆ ಮಾಡಿದ, ಅತ್ಯಾಚಾರ ಮಾಡಿದ ಮತ್ತು ಸುಟ್ಟು ಹಾಕಿದ ಹೀಗೆ ಎಲ್ಲ ಕೃತ್ಯಗಳಿಗೆ ಪ್ರತೀಕಾರ ತೀರಿಸುತ್ತೇವೆ. ನಾವು ಯಾರನ್ನೂ ಮರೆಯುವುದಿಲ್ಲ ಮತ್ತು ಕ್ಷಮಿಸುವುದಿಲ್ಲʼʼ ಎಂದು ತಿಳಿಸಿದರು.

ಗಾಜಾ ಇನ್ನೆಂದೂ ಇಸ್ರೇಲ್‌ಗೆ ಬೆದರಿಕೆಯೊಡ್ಡುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ʼʼಭಯೋತ್ಪಾದನೆಯನ್ನು ಬೆಂಬಲಿಸುವ, ಭಯೋತ್ಪಾದನೆಗೆ ಒತ್ತು ನೀಡುವ, ಭಯೋತ್ಪಾದನೆಗೆ ಹಣಕಾಸು ಒದಗಿಸುವ ಮತ್ತು ಭಯೋತ್ಪಾದಕರ ಕುಟುಂಬಗಳಿಗೆ ಹಣಕಾಸು ಒದಗಿಸುವ ಯಾವುದೇ ಶಕ್ತಿಗಳನ್ನು ಬೆಳೆಯಲು ಬಿಡುವುದಿಲ್ಲʼʼ ಎಂದು ಅವರು ಒತ್ತಿ ಹೇಳಿದರು.

ಐವರು ಹಮಾಸ್ ಮಿಲಿಟರಿ ನಾಯಕರ ಹತ್ಯೆ

11 ಹಿರಿಯ ಹಮಾಸ್ ಮಿಲಿಟರಿ ನಾಯಕರು ಗಾಜಾ ಕೆಳಗಿರುವ ಸುರಂಗದಲ್ಲಿ ಜಮಾಯಿಸಿರುವ ಫೋಟೊವನ್ನು ಬಿಡುಗಡೆ ಮಾಡಿರುವ ಇಸ್ರೇಲ್ ಮಿಲಿಟರಿ, ಈ ಪೈಕಿ ಐವರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ. ಹಮಾಸ್‌ ವೈಮಾನಿಕ ವಿಭಾಗದ ಮುಖ್ಯಸ್ಥ, ಬ್ರಿಗೇಡ್ ಕಮಾಂಡರ್, ಉಪ ಬ್ರಿಗೇಡ್ ಕಮಾಂಡರ್ ಮತ್ತು ಇಬ್ಬರು ಬೆಟಾಲಿಯನ್ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದೆ. ಉತ್ತರ ಗಾಜಾದ ಬೀಟ್ ಲಾಹಿಯಾದ ಇಂಡೋನೇಷ್ಯಾ ಆಸ್ಪತ್ರೆಯ ಬಳಿಯ ಸುರಂಗದಲ್ಲಿ ಉಗ್ರಗಾಮಿ ಗುಂಪು ಅಡಗಿದ್ದಾಗ ಈ ಫೋಟೊವನ್ನು ತೆಗೆಯಲಾಗಿತ್ತು ಎಂದು ಮಿಲಿಟರಿ ಸ್ಪಷ್ಟಪಡಿಸಿದೆ. ಆದರೆ ಫೋಟೊವನ್ನು ಯಾರು ಕ್ಲಿಕ್‌ ಮಾಡಿದ್ದು ಎನ್ನುವ ವಿವರ ಲಭ್ಯವಾಗಿಲ್ಲ.

ಫೋಟೊದಲ್ಲೇನಿದೆ?

ಫೋಟೊದಲ್ಲಿ ಹಮಾಸ್‌ ನಾಯಕರು ಹಣ್ಣು, ಪಾನೀಯಗಳು ಮತ್ತು ವಿವಿಧ ಆಹಾರ ಪದಾರ್ಥಗಳಿಂದ ತುಂಬಿದ ಮೇಜಿನ ಬಳಿ ಕುಳಿತಿರುವುದು ಕಂಡುಬಂದಿದೆ. ಹಮಾಸ್ ನಿರ್ಮಿಸಿದ ಸುರಂಗಗಳ ವ್ಯಾಪಕ ಜಾಲವು ಇದರಲ್ಲಿ ಗೋಚರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಬು ಅನಾಸ್ ಎಂದೂ ಕರೆಯಲ್ಪಡುವ ಉತ್ತರ ಗಾಜಾ ಮಿಲಿಟರಿ ನಾಯಕ ಅಹ್ಮದ್ ಅಲ್-ಘಂಡೂರ್, ಡೆಪ್ಯೂಟಿ ವೇಲ್ ರಜಬ್ ಮತ್ತು ಹಮಾಸ್ ಬೆಟಾಲಿಯನ್ ಕಮಾಂಡರ್ ರಫೆಟ್ ಸಲ್ಮಾನ್ ಸೇರಿದಂತೆ ಚಿತ್ರದಲ್ಲಿರುವ ಮೂವರನ್ನು ಇಷ್ಟರಲ್ಲಾಗಲೇ ಹತ್ಯೆ ಮಾಡಲಾಗಿದೆ ಎಂದೂ ವರದಿ ಹೇಳಿದೆ.

ಇದನ್ನೂ ಓದಿ: Israel Palestine War: ಇಸ್ರೇಲ್‌ ಡೆಡ್‌ಲೈನ್‌ಗೆ ಮಣಿದ ಹಮಾಸ್‌; 17 ಒತ್ತೆಯಾಳುಗಳ ಬಿಡುಗಡೆ

ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಇದರಿಂದ ಸುಮಾರು 1,200 ಇಸ್ರೇಲಿಗರು ಮೃತಪಟ್ಟಿದ್ದರು. ಇದರಿಂದ ಕೆರಳಿದ ಇಸ್ರೇಲ್‌ ಗಾಜಾವಾನನ್ನು ಹಮಾಸ್‌ನಿಂದ ಮುಕ್ತಗೊಳಿಸುವುದಾಗಿ ಪ್ರತಿಜ್ಞೆ ಕೈಗೊಂಡು ಪ್ರತಿದಾಳಿ ಆರಂಭಿಸಿತು. ಯುದ್ಧ ಪ್ರಾರಂಭವಾದಾಗಿನಿಂದ ಸಾವಿರಾರು ಹಮಾಸ್ ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಕಮಾಂಡರ್‌ಗಳು ಅಂದಾಜಿಸಿದ್ದಾರೆ. ಗಾಜಾದಲ್ಲಿನ ಹಮಾಸ್ ನಾಯಕ ಯಾಹ್ಯಾ ಸಿನ್ವರ್ ಮತ್ತು ಮೊಹಮ್ಮದ್ ದೀಫ್ ಸೇರಿದಂತೆ ಪ್ರಮುಖ ಮುಖಂಡರನ್ನು ಪತ್ತೆಹಚ್ಚಲು ಮತ್ತು ನಿರ್ಮೂಲನೆ ಮಾಡಲು ಇಸ್ರೇಲ್ ಪಡೆಗಳು ಇತ್ತೀಚೆಗೆ ದಕ್ಷಿಣ ಗಾಜಾವನ್ನು ಪ್ರವೇಶಿಸಿವೆ. ಹಮಾಸ್‌ನ ಎರಡನೇ ಅತಿದೊಡ್ಡ ಉತ್ತರ ಬ್ರಿಗೇಡ್ ಅನ್ನು ಗಮನಾರ್ಹವಾಗಿ ನಾಶಗೊಳಿಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

Exit mobile version