Site icon Vistara News

Israel Palestine War: ಹಮಾಸ್‌ ನಾಯಕನ ಮಾತು ಕೇಳಿ ಪ್ರಾಣ ಬಿಡಬೇಡಿ; ಉಗ್ರರಿಗೆ ನೆತನ್ಯಾಹು ಎಚ್ಚರಿಕೆ

isreal war

isreal war

ಗಾಜಾ: ಗಾಜಾದಲ್ಲಿ ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಯುದ್ಧ ಮುಂದುವರಿದಿದೆ (Israel Palestine War). ಈ ಸಂಘರ್ಷ ಇದೀಗ 66ನೇ ದಿನಕ್ಕೆ ಕಾಲಿಟ್ಟಿದ್ದು, ನಿರಂತರ ದಾಳಿ ಮಾಡುತ್ತಿರುವ ಇಸ್ರೇಲಿ ಪಡೆಗಳು ಹಮಾಸ್ ಉಗ್ರರ ನಿರ್ನಾಮಕ್ಕೆ ಪಣ ತೊಟ್ಟಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಈಗಾಗಲೇ ಭಯೋತ್ಪಾದಕ ಗುಂಪಿಗೆ ಶರಣಾಗುವಂತೆ ಕರೆ ನೀಡಿದ್ದಾರೆ ಮತ್ತು ಇದು ಹಮಾಸ್ ಅಂತ್ಯದ ಆರಂಭ ಎಂದು ಎಚ್ಚರಿಸಿದ್ದಾರೆ.

ಇಸ್ರೇಲ್ ಪ್ರಧಾನಿ ಕಚೇರಿ ಪೋಸ್ಟ್ ಮಾಡಿದ ಇತ್ತೀಚಿನ ವಿಡಿಯೊದಲ್ಲಿ ಬೆಂಜಮಿನ್ ನೆತನ್ಯಾಹು, ಗಾಜಾದಲ್ಲಿರುವ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್‌ಗಾಗಿ ಪ್ರಾಣ ಕಳೆದುಕೊಳ್ಳಬೇಡಿ ಎಂದು ಭಯೋತ್ಪಾದಕರಿಗೆ ಕರೆ ನೀಡಿದ್ದಾರೆ. “ಕಳೆದ ಕೆಲವು ದಿನಗಳಲ್ಲಿ ಡಜನ್‌ಗಟ್ಟಲೆ ಹಮಾಸ್ ಭಯೋತ್ಪಾದಕರು ನಮ್ಮ ಪಡೆಗಳಿಗೆ ಶರಣಾಗಿದ್ದಾರೆ. ಅವರು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿದ್ದಾರೆ. ಯುದ್ಧ ಇನ್ನೂ ನಡೆಯುತ್ತಿದೆ. ಇದು ಹಮಾಸ್ ಅಂತ್ಯದ ಪ್ರಾರಂಭ. ನಾನು ಹಮಾಸ್ ಭಯೋತ್ಪಾದಕರಿಗೆ ಹೇಳುವುದೊಂದೆ, ಸಿನ್ವರ್‌ಗಾಗಿ ಪ್ರಾಣ ಕಳೆದುಕೊಳ್ಳಬೇಡಿ. ಈಗಲೇ ಶರಣಾಗಿ” ಎಂದಿದ್ದಾರೆ.

ದೊಡ್ಡ ಸುರಂಗ ಜಾಲ ಪತ್ತೆ

ಈತನ್ಮಧ್ಯೆ ಗಾಜಾ ನಗರದಲ್ಲಿ ದೊಡ್ಡ ಸುರಂಗ ಜಾಲವನ್ನು ಮಿಲಿಟರಿ ಪತ್ತೆ ಹಚ್ಚಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ. 401ನೇ ಶಸ್ತ್ರಸಜ್ಜಿತ ಬ್ರಿಗೇಡ್, ನೌಕಾಪಡೆಯ ಶೆಯೆಟ್ 13 ಕಮಾಂಡೋ ಘಟಕ ಮತ್ತು ವಾಯುಪಡೆಯ ಶಾಲ್ಡಾಗ್ ಘಟಕದ ಪಡೆಗಳು ಪ್ಯಾಲೆಸ್ತೀನ್‌ ಸ್ಕ್ವೇರ್ (Palestine Square) ಪ್ರದೇಶವನ್ನು ವಶಪಡಿಸಿಕೊಂಡಿವೆ ಎಂದು ಹಗರಿ ತಿಳಿಸಿದ್ದಾರೆ. ʼʼನಿಖರವಾದ ಮಾಹಿತಿ ಬಳಸಿ ಸೈನಿಕರು ಈ ಪ್ರದೇಶದಲ್ಲಿ ಹಮಾಸ್‌ ಉಗ್ರರ ಕಾರ್ಯತಂತ್ರದ ಸುರಂಗ ಜಾಲವನ್ನು ಕಂಡುಕೊಂಡಿದ್ದಾರೆ. ಇದು ಶಿಫಾ ಆಸ್ಪತ್ರೆಯನ್ನು ಸಂಪರ್ಕಿಸುವ ಸಾಧ್ಯತೆ ಇದೆʼʼ ಎಂದು ಅವರು ಹೇಳಿದ್ದಾರೆ.

“ಪ್ಯಾಲೆಸ್ತೀನ್‌ ಸ್ಕ್ವೇರ್ ಪ್ರದೇಶದಲ್ಲಿ ಯಾಹ್ಯಾ ಸಿನ್ವರ್ ಅವರ ಕಚೇರಿ, ಸರ್ಕಾರಿ ಕಚೇರಿ, ಹಿರಿಯ ಹಮಾಸ್ ಅಧಿಕಾರಿಗಳ ಆಸ್ತಿಗಳು ಮತ್ತು ಭಯೋತ್ಪಾದಕ ಸುರಂಗ ಜಾಲವಿದೆ” ಎಂದು ಹಗರಿ ಹೇಳಿದ್ದಾರೆ. “ಇದು ಮುಖ್ಯ ಕಮಾಂಡ್ ಸೆಂಟರ್‌ನ ಪ್ರದೇಶವಾಗಿದ್ದು, ಹಿರಿಯ ಹಮಾಸ್ ಸದಸ್ಯರು ಅಲ್ಲಿಂದ ಪಲಾಯನ ಮಾಡಿದ್ದಾರೆ. ಈ ಪ್ರದೇಶದಲ್ಲಿನ ಸುರಂಗ ಜಾಲದ ಬಗ್ಗೆ ಪಡೆಗಳು ತನಿಖೆ ಮುಂದುವರಿಸಿವೆʼʼ ಎಂದು ಅವರು ತಿಳಿಸಿದ್ದಾರೆ.

ಏತನ್ಮಧ್ಯೆ ಗಾಜಾ ಪಟ್ಟಿಯಲ್ಲಿ ಶನಿವಾರ (ಡಿಸೆಂಬರ್‌ 9)ರಂದು ನಡೆದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ಶೆಜೈಯಾ ಬೆಟಾಲಿಯನ್‌ನ ಹೊಸ ಕಮಾಂಡರ್‌ನನ್ನು ಕೊಂದಿರುವುದಾಗಿ ಐಡಿಎಫ್ (Israel Defense Forces) ಘೋಷಿಸಿದೆ. ಡಿಸೆಂಬರ್ 2ರಂದು ಇಸ್ರೇಲ್ ವೈಮಾನಿಕ ದಾಳಿಯಲ್ಲಿ ವಿಸ್ಸಾಮ್ ಫರ್ಹಾತ್ ಸಾವನ್ನಪ್ಪಿದ ನಂತರ ಅವರ ಸ್ಥಾನಕ್ಕೆ ಎಮಾದ್ ಖಾರಿಕಾ ಅವರನ್ನು ನೇಮಿಸಲಾಗಿತ್ತು. ಐಡಿಎಫ್ ಪ್ರಕಾರ, ಖಾರಿಕಾ ಈ ಹಿಂದೆ ಶೆಜೈಯಾ ಬೆಟಾಲಿಯನ್‌ನ ಉಪ ಕಮಾಂಡರ್ ಆಗಿದ್ದರು.

ಇದನ್ನೂ ಓದಿ: Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

ಉತ್ತರ ಗಾಜಾದಲ್ಲಿ ಶುಕ್ರವಾರ ಗಾಯಗೊಂಡ ಸೈನಿಕನೊಬ್ಬ ಮೃತಪಟ್ಟಿದ್ದಾನೆ ಎಂದು ಐಡಿಎಫ್ ಶನಿವಾರ ಘೋಷಿಸಿದ್ದು, ಹಮಾಸ್ ವಿರುದ್ಧದ ದಾಳಿಯಲ್ಲಿ ಮೃತಪಟ್ಟ ಸೈನಿಕರ ಸಂಖ್ಯೆ 98ಕ್ಕೆ ಏರಿದೆ ಎಂದು ವರದಿಯೊಂದು ತಿಳಿಸಿದೆ. ಮೃತ ಯೋಧನನ್ನು ಬಹಾದ್ 1 ಆಫೀಸರ್ಸ್ ಶಾಲೆಯ ಗೆಫೆನ್ ಬೆಟಾಲಿಯನ್‌ ಕೆಡೆಟ್ ಲೆಫ್ಟಿನೆಂಟ್ ನೆಥನೆಲ್ ಮೆನಾಚೆಮ್ ಈಟಾನ್ (22) ಎಂದು ಗುರುತಿಸಲಾಗಿದೆ. ಇದಲ್ಲದೆ ಇನ್ನೂ ಐದು ಮಂದಿ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಐಡಿಎಫ್ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version