Site icon Vistara News

Jaahnavi Kandula: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿನಿಗೆ ಕಾರು ಗುದ್ದಿಸಿ ನಕ್ಕ ಪೊಲೀಸ್ ವಜಾ

Jaahnavi Kandula

Jaahnavi Kandula

ವಾಷಿಂಗ್ಟನ್‌: ಅಮೆರಿಕದ ಸಿಯಾಟಲ್‌ (Seattle)ನಲ್ಲಿ ಕಳೆದ ವರ್ಷ ನಡೆದ ಅಪಘಾತದಲ್ಲಿ ಮೃತಪಟ್ಟ ಭಾರತದ ಜಾಹ್ನವಿ ಕಂಡುಲಾ (Jaahnavi Kandula) ಎಂಬ 23 ವರ್ಷದ ವಿದ್ಯಾರ್ಥಿನಿಯನ್ನು ಅಪಹಾಸ್ಯ ಮಾಡಿದ ಪೊಲೀಸ್ ಅಧಿಕಾರಿ ಡ್ಯಾನಿಯಲ್‌ ಆಡೆರರ್‌ (Daniel Auderer)ನನ್ನು ವಜಾಗೊಳಿಸಲಾಗಿದೆ.

2023ರ ಜನವರಿ 26ರಂದು ಸಿಯಾಟಲ್‌ನಲ್ಲಿ ಜಾಹ್ನವಿ ಕಂಡುಲಾ ಅವರಿಗೆ ಸಿಯಾಟಲ್‌ನ ಪೊಲೀಸ್‌ ಅಧಿಕಾರಿ ಕೆವಿನ್‌ ಡೇವ್‌ ಚಲಾಯಿಸುತ್ತಿದ್ದ ಪೊಲೀಸ್‌ ವಾಹನ ಡಿಕ್ಕಿಯಾಗಿತ್ತು. ಈ ವೇಳೆ ವಾಹನ ಗಂಟೆಗೆ ಸುಮಾರು 119 ಕಿಲೋಮೀಟರ್‌ ವೇಗದಲ್ಲಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಕಂಡುಲಾ ಅವರ ದೇಹವು ದೂರಕ್ಕೆ ಎಸೆಯಲ್ಪಟ್ಟಿತ್ತು. ಕೂಡಲೇ ಅವರನ್ನು ಹಾರ್ಬರ್ವ್ಯೂ ಮೆಡಿಕಲ್ ಸೆಂಟರ್‌ಗೆ ಕರೆದೊಯ್ಯಲಾಗಿದ್ದರೂ, ತೀವ್ರ ಗಾಯಗಳಿಂದ ಆಕೆ ಮೃತಪಟ್ಟಿದ್ದರು. ಆಂಧ್ರಪ್ರದೇಶದ ಕಡಪ ಮೂಲದವರಾದ ಜಾಹ್ನವಿ ಕಂಡುಲಾ ಅವರು ಸಿಯಾಟಲ್‌ನಲ್ಲಿರುವ ನಾರ್ತ್‌ ಈಸ್ಟ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು. 

ಈ ವೇಳೆ ವಾಹನದಲ್ಲಿದ್ದ ಸಿಯಾಟಲ್‌ ಪೊಲೀಸ್‌ ಆಫೀಸರ್ಸ್‌ ಗಿಲ್ಡ್‌ ಉಪಾಧ್ಯಕ್ಷ ಡ್ಯಾನಿಯಲ್‌ ಆಡೆರರ್‌ ಅಪಘಾತದ ಕುರಿತು ಜೋಕ್‌ ಮಾಡಿದ್ದರು. “ಓಹ್‌ ಅವಳು ಸತ್ತೇ ಹೋದಳು. 11 ಸಾವಿರ ಡಾಲರ್‌ ಮೊತ್ತದ ಚೆಕ್‌ ಬರೆದು ಬಿಸಾಡೋಣ. ಓಹ್, ಅವಳಿಗೆ 23 ವರ್ಷ ವಯಸ್ಸಲ್ಲ, ಹಾಗಾದರೆ ಅವಳ ಜೀವಕ್ಕೆ ಹೆಚ್ಚಿನ ಬೆಲೆ ಇಲ್ಲ” ಎಂದು ನಕ್ಕಿರುವ ವಿಡಿಯೊ ವೈರಲ್‌ ಆಗಿತ್ತು. ಜಾಹ್ನವಿ ಕಂಡುಲಾ ಸಾವಿನ ಕುರಿತು ಭಾರತ ಹಾಗೂ ಅಮೆರಿಕದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಸಿಯಾಟಲ್ ಪೊಲೀಸ್ ಇಲಾಖೆಯಿಂದ ಆಡೆರರ್ ಅವರನ್ನು ವಜಾಗೊಳಿಸಲಾಗಿದೆ ಎಂದು ಬುಧವಾರ ಸಂಜೆ ಇಲಾಖೆಗೆ ಕಳುಹಿಸಲಾದ ಆಂತರಿಕ ಇಮಲ್‌ನಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ. ಆಡರರ್ ಅವರ ಮಾತುಗಳು ಕಂಡುಲಾ ಅವರ ಕುಟುಂಬಕ್ಕೆ ಉಂಟು ಮಾಡಿದ ನೋವನ್ನು ಅಳಿಸಲು ಸಾಧ್ಯವಿಲ್ಲ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.

“ಈ ವೈಯಕ್ತಿಕ ಪೊಲೀಸ್ ಅಧಿಕಾರಿಯ ನಡೆ ಸಿಯಾಟಲ್ ಪೊಲೀಸ್ ಇಲಾಖೆ ಮತ್ತು ನಮ್ಮ ಇಡೀ ವೃತ್ತಿಗೆ ಅವಮಾನವನ್ನು ತಂದಿವೆ. ಅವರ ವಿರುದ್ದ ಕ್ರಮ ಕೈಗೊಳ್ಳದೇ ಇದ್ದರೆ ಇಡೀ ಇಲಾಖೆಗೆ ಮತ್ತಷ್ಟು ಅವಮಾನ ಎಸಗಿದಂತಾಗುತ್ತದೆ. ಆ ಕಾರಣಕ್ಕಾಗಿ ನಾನು ಅವರನ್ನು ವಜಾಗೊಳಿಸಲಾಗುತ್ತದೆ” ಎಂದು ಅಧಿಕಾರಿಗಳು ಕಾರಣ ನೀಡಿದ್ದಾರೆ.

ಖಂಡನೆ

ಜಾಹ್ನವಿ ಕಂಡುಲಾ ಸಾವಿನ ಕುರಿತು ಅಪಹಾಸ್ಯ ಮಾಡಿ ನಕ್ಕ ವಿಡಿಯೊ ವೈರಲ್‌ ಆಗುತ್ತಲೇ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಭಾರತದ ಕಾನ್ಸುಲೇಟ್‌ ಖಂಡನೆ ವ್ಯಕ್ತಪಡಿಸಿತ್ತು. “ಇದು ಅತ್ಯಂತ ಅಪಾಯಕಾರಿ ಘಟನೆ. ಇಂತಹ ಪ್ರಕರಣಗಳನ್ನು ನಾವು ಸಹಿಸುವುದಿಲ್ಲ. ಕೂಡಲೇ ಪ್ರಕರಣದ ಕುರಿತು ಸಮಗ್ರ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿತ್ತು. ಭಾರಿ ಆಕ್ರೋಶದ ಬಳಿಕ, ಸಮಗ್ರ ತನಿಖೆ ಮಾಡಲಾಗುವುದು ಎಂದು ಸಿಯಾಟಲ್‌ ಪೊಲೀಸರು ತಿಳಿಸಿದ್ದರು. ಅಮೆರಿಕದಲ್ಲಿ ಭಾರತೀಯರ ಜೀವಕ್ಕೆ ಬೆಲೆಯೇ ಇಲ್ಲವೇ ಎನ್ನುವ ವಿಚಾರ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಇದನ್ನೂ ಓದಿ: Jaahnavi Kandula: ಸಾಕ್ಷಿಗಳ ಕೊರತೆ; ಭಾರತೀಯ ವಿದ್ಯಾರ್ಥಿನಿಯನ್ನು ಕೊಂದ ಪೊಲೀಸ್‌ ಅಧಿಕಾರಿ ಶಿಕ್ಷೆಯಿಂದ ಪಾರು

Exit mobile version