ನ್ಯೂಯಾರ್ಕ್: ಒಸಾಮಾ ಬಿನ್ ಲಾಡೆನ್‌ನಂಥ ಅಂತಾರಾಷ್ಟ್ರೀಯ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ, ಸಂಸತ್ತಿನ ಮೇಲೆ ದಾಳಿ ನಡೆಸಿದ ಉಗ್ರರ ಅಡಗುತಾಣವಾಗಿದ್ದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸುವ ಯಾವುದೇ ಯೋಗ್ಯತೆ ಇಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ( Jai Shankar ) ಪಾಕ್ ವಿರುದ್ಧ ಗುಡುಗಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವವನ್ನು ವಿಸ್ತರಿಸಬಾರದು. ಕಾಶ್ಮೀರ ವಿವಾದವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಲು ಪಾಕಿಸ್ತಾನ ಬಯಸುತ್ತದೆ ಎಂದು ಪಾಕ್ ವಿದೇಶಾಂಗ ಸಚಿವ ಬಿಲ್ವಾಲ್ ಭುಟ್ಟೊ ಅವರ ಹೇಳಿಕೆಯನ್ನು ಕಠಿಣ ಶಬ್ದಗಳಲ್ಲಿ ಅವರು ಖಂಡಿಸಿದ್ದಾರೆ.
” ಒಸಾಮಾ ಬಿನ್ ಲಾಡೆನ್‌ಗೆ ಆತಿಥ್ಯ ನೀಡಿದ್ದ ಹಾಗೂ ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರಿಗೆ ಆಶ್ರಯ, ಕುಮ್ಮಕ್ಕು ಕೊಟ್ಟಿದ್ದ ನೆರೆಯ ದೇಶಕ್ಕೆ, ವಿಶ್ವಸಂಸ್ಥೆಯಂಥ ವೇದಿಕೆಯಲ್ಲಿ ಇತರರಿಗೆ ಉಪದೇಶ ನೀಡುವ ವಿಶ್ವಾಸಾರ್ಹತೆ ಅಥವಾ ಯಾವುದೇ ಯೋಗ್ಯತೆಯೂ ಇಲ್ಲʼʼ ಎಂದು ಪಾಕಿಸ್ತಾನದ ಹೆಸರು ಹೇಳದೆಯೇ ಜೈಶಂಕರ್ ತರಾಟೆಗೆ ತೆಗೆದುಕೊಂಡರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಕುರಿತ ಸಂವಾದದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಮುಂಬಯಿ ಮೇಲೆ 26/11 ರ ಉಗ್ರ ದಾಳಿಯ ಭಯೋತ್ಪಾದಕರಿಗೆ, ಸಂಚುಕೋರರಿಗೆ ಈಗಲೂ ಆಶ್ರಯ ನೀಡಲಾಗುತ್ತಿದೆ. ಅವರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಆದ್ದರಿಂದ ನಾನಾ ಸ್ತರಗಳಲ್ಲಿ ಭಯೋತ್ಪಾದಕರಿಗೆ ಕುಮ್ಮಕ್ಕು, ಆಶ್ರಯ ನೀಡುತ್ತಿರುವುದನ್ನು ನಿಲ್ಲಿಸಲು ಹಾಗೂ ನಾನಾ ವೇದಿಕೆಗಳ ದುರ್ಬಳಕೆಯನ್ನು ತಡೆಯಲು ವಿಶ್ವ ಸಮುದಾಯ ಸಂಘಟಿತ ಉಪಕ್ರಮಗಳನ್ನು ಕೈಗೊಳ್ಳಬೇಕು ಎಂದು ಜೈ ಶಂಕರ್ ಹೇಳಿದರು.
ವಿಶ್ವಸಂಸ್ಥೆಯಲ್ಲಿ 15 ರಾಷ್ಟ್ರಗಳ ಮಂಡಳಿಯ ಅಧ್ಯಕ್ಷತೆಯನ್ನು ಪ್ರಸ್ತುತ ಭಾರತ ವಹಿಸಿದೆ. ಆದರೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಇದುವರೆಗೆ ಸಿಕ್ಕಿಲ್ಲ.
ಭಯೋತ್ಪಾದನೆಯ ವಿರುದ್ಧ ನಾವು ಅತ್ಯುತ್ತಮವಾದ ತಂತ್ರಗಳನ್ನು ಸಂಘಟಿತವಾಗಿ ಕೈಗೊಳ್ಳುವ ಕಾಲ ಸನ್ನಿಹಿತವಾಗಿದೆ. ಹೀಗಿರುವಾಗ ಭಯೋತ್ಪಾದನೆಯ ಬೆದರಿಕೆಯನ್ನು ಸಾಮಾನ್ಯ ಎಂದು ಪರಿಗಣಿಸಲು ನಡೆಸುವ ಯತ್ನಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಚೀನಾ ಮತ್ತು ಪಾಕಿಸ್ತಾನವನ್ನು ಜೈ ಶಂಕರ್ ಟೀಕಿಸಿದರು.