Site icon Vistara News

Jai Shri Ram Slogan: ಪ್ಯಾಲೆಸ್ತೇನ್ ವಿರುದ್ಧ ಜೈಶ್ರೀರಾಮ್ ಘೋಷಣೆ ಕೂಗಿದ ಇಸ್ರೇಲ್ ಬೆಂಬಲಿಗರು!

Jai Shri Ram Slogan

Jai Shri Ram Slogan

ವಾಷಿಂಗ್ಟನ್‌: ಅಮೆರಿಕದ ವಿವಿಧ ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವ ಪ್ಯಾಲೆಸ್ತೀನ್‌ ಪರ ಪ್ರತಿಭಟನೆಗಳು ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿವೆ. ಈ ಮಧ್ಯೆ ಇದಕ್ಕೆ ವಿರುದ್ಧವಾಗಿ ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ (UCLA) ಇಸ್ರೇಲ್ ಬೆಂಬಲಿಗರು ಮೆರವಣಿಗೆ ನಡೆಸಿದ್ದಾರೆ. ಈ ಮೆರವಣಿಗೆಯಲ್ಲಿ ಇಸ್ರೇಲ್ ಬೆಂಬಲಿಗರು ಜೈ ಶ್ರೀ ರಾಮ್ ಎಂಬ ಘೋಷಣೆ (Jai Shri Ram Slogan) ಕೂಗಿದ್ದಾರೆ.

ವಾರಾಂತ್ಯದಲ್ಲಿ ಯುಸಿಎಲ್ಎಯಲ್ಲಿ ಪ್ಯಾಲೆಸ್ತೀನ್‌ ಪರ ಮತ್ತು ಇಸ್ರೇಲ್ ಪರ ಪ್ರತಿಭಟನಾಕಾರರ ನಡುವಿನ ಘರ್ಷಣೆಗಳು ತೀವ್ರಗೊಂಡಿದ್ದವು. ಬ್ಲೂಮಿಂಗ್ಟನ್‌ನ ಇಂಡಿಯಾನಾ ವಿಶ್ವವಿದ್ಯಾಲಯ, ಅರಿಜೋನಾ ಸ್ಟೇಟ್ ಯೂನಿವರ್ಸಿಟಿ ಮತ್ತು ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯದಂತಹ ಇತರ ಕ್ಯಾಂಪಸ್‌ಗಳಲ್ಲಿಯೂ ಇದೇ ರೀತಿಯ ದೃಶ್ಯಗಳನ್ನು ಕಂಡು ಬಂದಿವೆ. ಇನ್ನು ಯುಸಿಎಲ್ಎಯಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿತ್ತು.

ಈ ಗೊಂದಲದ ಮಧ್ಯೆ ಅಮೆರಿಕದ ರಾಷ್ಟ್ರೀಯವಾದಿಯೊಬ್ಬರು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುವ ಮೂಲಕ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಈ ಘೋಷಣೆಯನ್ನು ಭಾರತದಲ್ಲಿ ಹಿಂದುಗಳಿಗೆ ಸಂಬಂಧಿಸಿದ ಧಾರ್ಮಿಕ ಮೆರವಣಿಗೆ ಸಂದರ್ಭದಲ್ಲಿ ಕೂಗಲಾಗುತ್ತದೆ. ಭಗವಾನ್ ರಾಮನಿಗೆ ಸಂಬಂಧಿಸಿದ ಈ ಘೋಷಣೆಯನ್ನು ಭಾರತ-ವಿರೋಧಿಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿದಲ್ಲಿ ಬಳಸಲ್ಪಟ್ಟಿದ್ದು ವಿಶೇಷ.

ಯುಸಿಎಲ್ಎಯ ಕಾರ್ಯತಂತ್ರದ ಸಂವಹನಗಳ ಉಪಕುಲಪತಿ ಮೇರಿ ಒಸಾಕೊ ಈ ಬಗ್ಗೆ ಮಾತನಾಡಿ, ʼʼಎರಡೂ ಕಡೆಯ ಪ್ರತಿಭಟನಾಕಾರರು ವಾಗ್ವಾದಗಳಲ್ಲಿ ತೊಡಗಿದ್ದರು. ಜತೆಗೆ ಘರ್ಷಣೆಯೂ ನಡೆಯಿತು. ಎರಡೂ ಕಡೆಯವರ ಘೋಷಣೆಗಳು ಮುಗಿಲು ಮುಟ್ಟಿದ್ದವುʼʼ ಎಂದು ವಿವರಿಸಿದ್ದಾರೆ. “ಯುಸಿಎಲ್ಎಯಲ್ಲಿ ಇದುವರೆಗೆ ಅನೇಕ ಶಾಂತಿಯುತ ಪ್ರತಿಭಟನೆ ನಡೆದಿದ್ದವು. ಆದರೆ ಇದೀಗ ಇಲ್ಲಿ ಭುಗಿಲೆದ್ದ ಹಿಂಸಾಚಾರ ತೀವ್ರ ನೋವುಂಟು ಮಾಡಿದೆʼʼ ಎಂದು ಹೇಳಿದ್ದಾರೆ.

ತೀವ್ರಗೊಂಡ ಪ್ರತಿಭಟನೆ

ಕಳೆದ ವಾರ ಅಮೆರಿಕದ ಕ್ಯಾಂಪಸ್‌ಗಳಲ್ಲಿ ವ್ಯಾಪಕವಾಗಿ ಪ್ಯಾಲೆಸ್ತೀನ್‌ ಪರ ಪ್ರತಿಭಟನೆಗಳು ನಡೆದವು. ಈ ಸಂಬಂಧ ಅನೇಕರನ್ನು ಬಂಧಿಸಲಾಗಿದೆ. ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯವೊಂದರಿಂದಲೇ 100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಯೇಲ್ ವಿಶ್ವವಿದ್ಯಾಲದಿಂದಲೂ ಅನೇಕರನ್ನು ವಶಕ್ಕೆ ಪಡೆಯಲಾಗಿದೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದಲೂ ಪ್ರತಿಭಟನಾಕಾರರನ್ನು ಸೆರೆ ಹಿಡಿಯಲಾಗಿದೆ. ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿನ ಪ್ರತಿಭನಾಕಾರರನ್ನು ಬಲವಂತವಾಗಿ ಚದುರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.

ಪ್ಯಾಲೆಸ್ತೀನ್‌ ವಿರುದ್ಧ ನಡೆಸುತ್ತಿರುವ ಯುದ್ಧವನ್ನು ಇಸ್ರೇಲ್ ನಿಲ್ಲಿಸಬೇಕು. ಇಸ್ರೇಲ್‌ಗೆ ಅಮೆರಿಕದ ಮಿಲಿಟರಿ ಸಹಾಯವನ್ನು ಕೊನೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಈ ರೀತಿಯ ಪ್ರತಿಭಟನೆಗಳು ಶಿಕ್ಷಣಕ್ಕೆ ಅಡ್ಡಿಪಡಿಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚುತ್ತಿರುವ ಪ್ರತಿಭಟನೆಗಳ ಮಧ್ಯೆ ಅಧ್ಯಕ್ಷ ಜೋ ಬೈಡನ್ ಈ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Prakash Raj: ಕಾಶ್ಮೀರವನ್ನು ಪ್ಯಾಲೆಸ್ತೀನ್‌ಗೆ ಹೋಲಿಸಿದ ಪ್ರಕಾಶ್‌ ರಾಜ್;‌ ಕೆಂಡವಾದ ಜನ

“ಜೋ ಬೈಡನ್ ಶಾಂತಿಯುತ ಪ್ರತಿಭಟನೆಯನ್ನು ಗೌರವಿಸುತ್ತಾರೆ. ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ತಮ್ಮ ದೃಷ್ಟಿಕೋನಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು ಎನ್ನುವುದು ಅವರ ಅಭಿಪ್ರಾಯ. ಆದರೆ ಅದು ಶಾಂತಿಯುತವಾಗಿರಬೇಕು. ಜತೆಗೆ ಯಹೂದಿ ವಿರೋಧಿ ಮತ್ತು ದ್ವೇಷ ಭಾಷಣವನ್ನು ಅವರು ಖಂಡಿಸುತ್ತಾರೆʼʼ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.

Exit mobile version