ಟೋಕಿಯೊ: “ಮಂಗನಿಂದ ಮಾನವ” ಎಂಬ ಮಾತಿದೆ. ಇದೇ ಕಾರಣಕ್ಕೆ ಮನುಷ್ಯ ಕೆಲವೊಮ್ಮೆ ಮಂಗನ ಹಾಗೆ ವರ್ತಿಸುವುದು (ಚೇಷ್ಟೆ, ಕೋಪ್ಯ ಇತ್ಯಾದಿ) ಎಂಬ ಮಾತೂ ಇದೆ. ಆದರೆ, ಜಪಾನ್‌ನಲ್ಲಿ ಮಾನವನೊಬ್ಬ ಶ್ವಾನವಾಗಿ ಬದಲಾಗಿದ್ದಾನೆ. ಹೀಗೆ, ಮಾನವನಿಂದ ಶ್ವಾನವಾಗಿ ಬದಲಾಗಲು (Human Dog) ಆತ 13.24 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ ಎಂಬುದು ಗಮನಾರ್ಹವಾಗಿದೆ. ಈತ ನಾಯಿಯಾಗಿ ಬದಲಾಗಿ ಓಡಾಡಿಕೊಂಡಿರುವ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ಹೌದು, ಜಪಾನ್ ಟೋಕೊ ಎಂಬ ವ್ಯಕ್ತಿಯು ಈಗ ಶ್ವಾನವಾಗಿ ಬದಲಾಗಿದ್ದಾನೆ. ಜಪಾನ್‌ನ ಜೆಪೆಟ್ ಎಂಬ ಕಂಪನಿಯು ಈತನಾಗಿ ಕೊಲಿ ನಾಯಿಯ ಕಾಸ್ಟ್ಯೂಮ್ ತಯಾರಿಸಿದೆ. ಈಗ ಈತನು ನಾಲ್ಕು ಕಾಲಿನಿಂದ ಓಡಾಡಿಕೊಂಡಿದ್ದಾನೆ. ಯುವತಿಯೊಬ್ಬಳು ಕೊಲಿ ನಾಯಿಯನ್ನು ಹಿಡಿದುಕೊಂಡು ತಿರುಗಾಡುವ, ಆ ಕೃತಕ ನಾಯಿಯು ರಸ್ತೆ ಮೇಲೆ ಹೊರಳಾಡುವ ವಿಡಿಯೊ ಸಂಚಲನ ಮೂಡಿಸಿದೆ.
ಮಾನವನಿಂದ ಶ್ವಾನ
ಟೋಕೊ ಏಕೆ ಹೀಗೆ?
ಟೋಕೊಗೆ ಮೊದಲಿನಿಂದಲೂ ಸಾಕು ಪ್ರಾಣಿಗಳು, ಅದರಲ್ಲೂ ನಾಯಿಗಳ ಮೇಲೆ ಎಲ್ಲಿಲ್ಲದ ಪ್ರೀತಿ ಇದೆಯಂತೆ. ಅಲ್ಲದೆ, ಕೆಲ ವರ್ಷಗಳ ಹಿಂದೆ ತಾನು ಕೂಡ ಶ್ವಾನವಾಗಿ ಬದಲಾಗಬೇಕು ಎಂಬ ಆಸೆ ಮೂಡಿದ್ದು, ಇದಕ್ಕಾಗಿ ಆತ ಜೆಪೆಟ್ ಕಂಪನಿಯ ಮೊರೆಹೋಗಿದ್ದಾನೆ. ಅಲ್ಲಿ, ತನಗೆ ಇಷ್ಟವಾದ ನಾಯಿಯ ಹಾಗೆ, ನಾಯಿಯನ್ನೇ ಹೋಲುವ ಹಾಗೆ ಕಾಸ್ಟ್ಯೂಮ್ ರೆಡಿ ಮಾಡಿಸಿಕೊಂಡಿದ್ದಾರೆ. ಇದಕ್ಕಾಗಿ ಆತ 13.24 ಲಕ್ಷ ರೂ. ಖರ್ಚು ಮಾಡಿದ್ದಾನೆ.
ಇದನ್ನೂ ಓದಿ: Viral video: ಅಲಾಯಿ ದೇವರಿಗೆ ಹೂ ನೀಡಿದ ಆಂಜನೇಯ, ವಿಡಿಯೋ ವೈರಲ್
“ನನಗೆ ಮೊದಲಿನಿಂದಲೂ ಪ್ರಾಣಿಯಾಗಿ ಬದಲಾಗುವ ಹಂಬಲ ಇತ್ತು. ಅದಕ್ಕಾಗಿ, ನಾಯಿಯ ರೂಪ ತಾಳಿದ್ದೇನೆ. ಇದರಿಂದ ನನಗೆ ಖುಷಿಯಾಗಿದೆ. ಆದರೆ, ಜನ ನನ್ನ ಬಗ್ಗೆ ಮನಸ್ಸಿಗೆ ಬಂದ ಹಾಗೆ ಮಾತನಾಡಬಾರದು ಎಂಬ ಕಾರಣದಿಂದ ನನ್ನ ಮುಖವನ್ನು ತೋರಿಸುತ್ತಿಲ್ಲ” ಎಂದು ಆತ ತಿಳಿಸಿದ್ದಾನೆ. ಅಂದಹಾಗೆ, ನಾಯಿ ಆಗಿ ಬದಲಾಗಿರುವ ವಿಡಿಯೊವನ್ನು ಟೋಕೊ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಒಟ್ಟಿನಲ್ಲಿ, ಮನುಷ್ಯನ ಹವ್ಯಾಸ, ರೂಢಿ, ಮನಸ್ಥಿತಿ, ಚಟುವಟಿಕೆಗಳು ತೀರಾ ಭಿನ್ನ ಎಂಬುದಕ್ಕೆ ಈತನೇ ನಿದರ್ಶನ ಆಗಿದ್ದಾನೆ.