ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇತ್ತೀಚೆಗೆ ‘ಅಪರಿಚಿತರ’ ಗುಂಡಿನ ದಾಳಿಗೆ ಹತ್ಯೆಗೀಡಾಗುತ್ತಿರುವ ಉಗ್ರರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಲಷ್ಕರೆ ತಯ್ಬಾ ಕಮಾಂಡರ್ (Lashkar Commander) ಅಕ್ರಮ್ ಘಾಜಿಯನ್ನು (Akram Ghazi) ಗುಂಡಿಕ್ಕಿ ಹತ್ಯೆ ಮಾಡಲಾದ ಬೆನ್ನಲ್ಲೇ ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ಮತ್ತೊಬ್ಬ ಉಗ್ರನು (JeM Terrorist) ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.
ಜೈಶೆ ಮೊಹಮ್ಮದ್ ಉಗ್ರ, ಉಗ್ರ ಸಂಘಟನೆಯ ಸಂಸ್ಥಾಪಕ ಮೌಲಾನ ಮಸೂದ್ ಅಜರ್‌ನ ಆಪ್ತನಾಗಿದ್ದ ಮೌಲಾನಾ ರಹೀಮ್ ಉಲ್ಲಾ ತಾರಿಕ್‌ನನ್ನು ಕರಾಚಿಯ ಒರಾಂಗಿ ಪಟ್ಟಣದಲ್ಲಿ ಹತ್ಯೆ ಮಾಡಲಾಗಿದೆ. ಬೈಕ್‌ನಲ್ಲಿ ಬಂದ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ವಾಪಸಾಗುವಾಗ ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
Pakistan – JeM Terrorist and close friend of wanted Maulana Masood Azhar, Maulana Raheem ullah Tariq shot dead by 'unknown men' in Orangi Town area of Karachi. pic.twitter.com/MXOlFGA7cb
— Megh Updates 🚨™ (@MeghUpdates) November 12, 2023
ಮೌಲಾನಾ ರಹೀಮ್ ಉಲ್ಲಾ ತಾರಿಕ್ ಭಾರತ ವಿರೋಧಿ ಸಭೆಗಳಲ್ಲಿ ಪಾಲ್ಗೊಂಡು, ಭಾರತದ ವಿರುದ್ಧ ಹೇಳಿಕೆ ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದಷ್ಟೇ ಹತ್ಯೆಗೀಡಾಗಿದ್ದ ಅಕ್ರಮ್ ಘಾಜಿ ಕೂಡ ಜಮ್ಮು-ಕಾಶ್ಮೀರದಲ್ಲಿ ಹಲವು ಉಗ್ರ ದಾಳಿಯ ರೂವಾರಿಯಾಗಿದ್ದ ಎನ್ನಲಾಗಿತ್ತು.
ಉಗ್ರರ ಮಧ್ಯೆಯೇ ದ್ವೇಷ?
ಪಾಕಿಸ್ತಾನ ಸರ್ಕಾರವು ಐಎಸ್‌ಐ ಮೂಲಕ ಉಗ್ರರಿಗೆ ಹಲವು ರೀತಿಯಲ್ಲಿ ನೆರವು ನೀಡುತ್ತಿದ್ದರೂ ಇತ್ತೀಚೆಗೆ ಉಗ್ರರಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ಸರಬರಾಜು ಆಗುತ್ತಿಲ್ಲ. ಪಾಕಿಸ್ತಾನವೇ ಆರ್ಥಿಕವಾಗಿ ದಿವಾಳಿಯಾಗಿದ್ದು, ಜಾಗತಿಕ ಸಂಸ್ಥೆಗಳ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಅಮೆರಿಕ ಕೂಡ ಮೊದಲಿನ ಹಾಗೆ ಹಣದ ನೆರವು ನೀಡುತ್ತಿಲ್ಲ. ಇದರಿಂದಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಇದು ಪಾಕಿಸ್ತಾನದಲ್ಲಿ ಉಗ್ರರ ಮಧ್ಯೆಯೇ ಒಳಜಗಳಕ್ಕೆ ಕಾರಣವಾಗಿದೆ. ಹಾಗಾಗಿಯೇ, ಉಗ್ರರನ್ನೇ ಹತ್ಯೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪಾಕ್‌ನಲ್ಲಿ ವಾಂಟೆಡ್ ಉಗ್ರನ ಹತ್ಯೆ; ಇದು ಬಾಲಾಕೋಟ್ ದಾಳಿ ವೇಳೆ ಬದುಕುಳಿದಿದ್ದ ಕ್ರಿಮಿ!
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದಲ್ಲಿ ಲಷ್ಕರೆ ಜಬ್ಬರ್ ಉಗ್ರ ಸಂಘಟನೆ ಸಂಸ್ಥಾಪಕ ಮಸೂದ್ ಅಜರ್ ಆಪ್ತ ದಾವೂದ್ ಮಲಿಕ್‌ನನ್ನು ಹತ್ಯೆ ಮಾಡಲಾಗಿತ್ತು. ಪಾಕಿಸ್ತಾನದ ಉತ್ತರ ವಾಜಿರಿಸ್ತಾನ್ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ದಾವೂದ್ ಮಲಿಕ್‌ನನ್ನು ಹತ್ಯೆ ಮಾಡಿದ್ದರು. ಉತ್ತರ ವಾಜಿರಿಸ್ತಾನ್ ಜಿಲ್ಲೆಯ ಮಿರಾಲಿ ಪ್ರದೇಶದಲ್ಲಿ ದಾವೂದ್ ಮಲಿಕ್ ಹಾಗೂ ಆತನ ತಂಡವು ಅಕ್ಟೋಬರ್ 20ರಂದು ಅಪರಿಚಿತನೊಬ್ಬನ ಮೇಲೆ ದಾಳಿ ನಡೆಸಿದ್ದ. ದಾಳಿ ಬಳಿಕ ದಾವೂದ್ ಮಲಿಕ್ ಹಾಗೂ ತಂಡವು ಅಲ್ಲಿಂದ ಕಾಲ್ಕಿತ್ತಿತ್ತು. ಇದಾದ ಮರುದಿನವೇ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ