ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಅಮೆರಿಕ ಪ್ರಥಮ ಮಹಿಳೆ, ಅಧ್ಯಕ್ಷ ಜೋ ಬೈಡೆನ್ ಪತ್ನಿ ಜಿಲ್ ಬೈಡೆನ್ (Jill Biden) ಅವರು ಕೀನ್ಯಾದ ನೈರೋಬಿಯಲ್ಲಿ ಶನಿವಾರ ಯುವಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅವರು ಯುವ ಸಬಲೀಕರಣದ ಬಗ್ಗೆ ಚರ್ಚಿಸಿದರು. ಸುರಕ್ಷಿತ ಲೈಂಗಿಕ ಸಂಪರ್ಕ, ಡೇಟಿಂಗ್, ಕಾಂಡೊಮ್ ಬಳಕೆ, ಸಂತಾನ ನಿರೋಧ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.
ಸುರಕ್ಷಿತ ಸೆಕ್ಸ್, ಡೇಟಿಂಗ್ ಮತ್ತಿತರ ಸೂಕ್ಷ್ಮ ವಿಷಯಗಳ ಬಗ್ಗೆ ಎಷ್ಟೋ ಜನರು ಇಂಥ ವಿಷಯಗಳನ್ನು ಮುಕ್ತವಾಗಿ ಮಾತನಾಡುವುದಿಲ್ಲ. ಸರಿಯಾದ ತಿಳಿವಳಿಕೆ ಹೊಂದಿರುವುದಿಲ್ಲ. ಆದರೆ ಅರಿವಿಗೋಸ್ಕರ ಇದನ್ನೆಲ್ಲ ಬಹಿರಂಗವಾಗಿ ಮಾತನಾಡುವುದು ತಪ್ಪಲ್ಲ. ಕೀನ್ಯಾ ಯುವಕರು ಈ ಬಗ್ಗೆ ಅಪಾರ ಅರಿವು ಹೊಂದಿದ್ದಾರೆ. ಸುರಕ್ಷತಾ ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇದು ನನಗೆ ಇಷ್ಟವಾಯಿತು ಎಂದು ಅವರು ಹೇಳಿದರು. ಅಷ್ಟೇ ಅಲ್ಲ, ಯುವಕರೊಂದಿಗೆ ಸಂವಾದದ ನಂತರ ಅವರು, ತಮ್ಮದೇ ಬ್ಯಾಂಕಿಂಗ್ ವ್ಯವಸ್ಥೆ ರಚಿಸಿಕೊಂಡು, ಸ್ವಾವಲಂಬಿಗಳಾದ ಮಹಿಳೆಯರನ್ನು, ರೈತರಿಗೆ ನೆರವಾಗುವ ಉತ್ಪನ್ನಗಳನ್ನು ತಯಾರಿಸುತ್ತಿರುವ ಸ್ಥಳೀಯ ಉದ್ಯಮಿಗಳನ್ನು ಭೇಟಿಯಾಗಿ ಅವರೊಂದಿಗೂ ಮಾತುಕತೆ ನಡೆಸಿದರು.
ಇದನ್ನೂ ಓದಿ: Viral Video: ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪತಿಯ ತುಟಿಗೆ ಚುಂಬಿಸಿದ ಅಧ್ಯಕ್ಷ ಜೋ ಬೈಡೆನ್ ಪತ್ನಿ
ಆಫ್ರಿಕಾ ಖಂಡದ ದೇಶಗಳೊಂದಿಗೆ ಯುಎಸ್ ಸಂಬಂಧವನ್ನು ಗಾಢಗೊಳಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮುಂದಾಗಿದ್ದಾರೆ. ಈ ಯೋಜನೆಯ ಒಂದು ಭಾಗವಾಗಿಯೇ ಜಿಲ್ ಬೈಡೆನ್ ಅವರು ಐದು ದಿನಗಳ ಆಫ್ರಿಕಾ ಪ್ರವಾಸ ಹಮ್ಮಿಕೊಂಡಿದ್ದು, ಇಂದು ಭಾನುವಾರ ಆಫ್ರಿಕಾದಲ್ಲಿ ಕೊನೇ ದಿನ. ಅವರು ನಮೀಬಿಯಾ, ಕೀನ್ಯಾಗಳಿಗೆ ಭೇಟಿ ನೀಡಿ, ಅಲ್ಲೆಲ್ಲ ಕಡೆಗಳಲ್ಲೂ ಮಹಿಳೆಯರು ಮತ್ತು ಯುವಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ, ಸಂವಾದ ನಡೆಸಿದ್ದಾರೆ.