Site icon Vistara News

Joe Biden: ಮೃತ ನಾಯಕರನ್ನು ಭೇಟಿಯಾಗಿದ್ದೇನೆ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡ ಬೈಡನ್‌

joe biden

joe biden

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden)​​ ಅವರು ಮೃತ ನಾಯಕರನ್ನು ಭೇಟಿಯಾಗಿದ್ದೇನೆ ಎಂದು ಬಾಯ್ತಪ್ಪಿನಿಂದ ಹೇಳಿದ್ದಾರೆ. ಈ ಮೂಲಕ ವಾರದ ಅಂತರದಲ್ಲಿ ಅವರು ಎರಡನೇ ಬಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಅವರು ಈ ಗೊಂದಲದ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನ್ಯೂಯಾರ್ಕ್‌ನಲ್ಲಿ ಬುಧವಾರ (ಫೆಬ್ರವರಿ 7) ನಡೆದ ಪ್ರಚಾರ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಬೈಡನ್ ಅವರು ಜರ್ಮನಿಯ ಮಾಜಿ ಚಾನ್ಸಲರ್‌ ಹೆಲ್ಮಟ್‌ ಕೋಲ್‌ ಅವರ ಬಗ್ಗೆ ಪ್ರಸ್ತಾವಿಸಿದ್ದರು. ʼʼ2020ರಲ್ಲಿ ಜರ್ಮನ್ ಚಾನ್ಸಲರ್ ಹೆಲ್ಮಟ್ ಕೋಲ್ ಅವರು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರುʼʼ ಎಂದು ಹೇಳಿದ್ದಾರೆ. ಆದರೆ ಹೆಲ್ಮಟ್‌ ಕೋಲ್‌ 2017ರಲ್ಲಿ ನಿಧನರಾಗಿದ್ದರು.

ಶೀತಲ ಸಮರದಿಂದಾಗಿ ವಿಭಜನೆಗೊಂಡಿದ್ದ ಜರ್ಮನಿಯನ್ನು ಒಗ್ಗೂಡಿಸುವಲ್ಲಿ ಕೋಲ್‌ ಪ್ರಮುಖ ಪಾತ್ರ ವಹಿಸಿದ್ದರು. 1982ರಿಂದ 16 ವರ್ಷಗಳ ಕಾಲ ಅವರು ಚಾನ್ಸಲರ್‌ ಆಗಿದ್ದರು. 1989ರಲ್ಲಿ ಬರ್ಲಿನ್‌ ಗೋಡೆ ನೆಲಸಮವಾದ ಬಳಿಕ ಯುರೋಪ್‌ನ ಏಕೀಕರಣಕ್ಕಾಗಿ ಶ್ರಮಿಸಿದ್ದರು.

ಇದಕ್ಕೂ ಮುನ್ನ ಬೈಡನ್‌ ಅವರು ಭಾನುವಾರ (ಫೆಬ್ರವರಿ 4) ನೆವಾಡಾದಲ್ಲಿ ಮಾತನಾಡಿ, ಫ್ರೆಂಚ್ ಸಹವರ್ತಿ ಎಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಸುಮಾರು ಮೂರು ದಶಕಗಳ ಹಿಂದೆ ನಿಧನರಾದ ಮಾಜಿ ನಾಯಕ ಫ್ರಾಂಕೋಯಿಸ್ ಮಿತ್ರಾಂಡ್ ಎಂದು ಸಂಭೋದಿಸಿದ್ದರು. ಇಂಗ್ಲೆಂಡ್‌ನ ಕಾರ್ನ್ವಾಲ್‌ನಲ್ಲಿ 2021ರಲ್ಲಿ ನಡೆದ ಜಿ 7 ವಿಶ್ವ ನಾಯಕರ ಸಭೆಯಲ್ಲಿ ಮಿತ್ರಾಂಡ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದರು. ಮಿತ್ರಾಂಡ್ ಅವರು 1996ರಲ್ಲಿ ನಿಧನ ಹೊಂದಿದ್ದರು. ಸದ್ಯ ಬೈಡನ್‌ ಅವರ ಈ ಹೇಳಿಕೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಮಿತ್ರಾಂಡ್ 1981ರಿಂದ 1995ರ ವರೆಗೆ ಫ್ರೆಂಚ್ ಅಧ್ಯಕ್ಷರಾಗಿದ್ದರು.

ಪ್ರಾಥಮಿಕ ಚುನಾವಣೆಯಲ್ಲಿ ಜೋ ಬೈಡನ್​​ಗೆ ಗೆಲುವು

ಜನವರಿ 3ರಂದು ನಡೆದ ದಕ್ಷಿಣ ಕೆರೊಲಿನಾ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್ ಗೆಲುವು ಸಾಧಿಸಿದ್ದಾರೆ. 55 ಪ್ರತಿನಿಧಿಗಳು ಕಣದಲ್ಲಿದ್ದರು. ಆದರೂ ಬೈಡನ್ ಗೆಲುವು ನಿರೀಕ್ಷಿತವಾಗಿತ್ತು. ಎದುರಾಳಿಗಳಾದ ಮರಿಯಾನೆ ವಿಲಿಯಮ್ಸನ್ ಮತ್ತು ಡೀನ್ ಫಿಲಿಪ್ಸ್ (ಡಿ-ಮಿನ್) ಅವರನ್ನು ಸೋಲಿಸಿ ಗೆದ್ದಿದ್ದಾರೆ.

ಈ ಗೆಲುವಿನ ಬಳಿಕ ಮಾತನಾಡಿದ ಬೈಡೆನ್​, ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಸ್ಥಾನದ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವುದಾಗಿ ಹೇಳಿದ್ದಾರೆ. 81 ವರ್ಷದ ಹಾಲಿ ಅಧ್ಯಕ್ಷ ಬೈಡೆನ್​ ತಮ್ಮ ಪಕ್ಷದ ನಾಮನಿರ್ದೇಶನಕ್ಕಾಗಿ ಕೆರೊಲಿನಾದಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ಇಬ್ಬರು ಪ್ರತಿಸ್ಪರ್ಧಿಗಳ ವಿರುದ್ಧ ಭರ್ಜರಿ ವಿಜಯ ಗಳಿಸಿದ್ದಾರೆ.

ಇದನ್ನೂ ಓದಿ: G20 Summit 2023 : ಜಿ20 ಶೃಂಗ ಸಭೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬರುವುದೂ ಅನುಮಾನ

ಬೈಡನ್ ತಮ್ಮ ವಿಜಯವನ್ನು ಘೋಷಿಸುವ ವೇಳೆ ಲಾಸ್ ಏಂಜಲೀಸ್​ನಲ್ಲಿ ನಿಧಿಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. “2020ರಲ್ಲಿ, ದಕ್ಷಿಣ ಕೆರೊಲಿನಾದ ಮತದಾರರು ರಾಜಕೀಯ ಪಂಡಿತರ ಲೆಕ್ಕಾಚಾರ ತಪ್ಪು ಎಬುದನ್ನು ಸಾಬೀತುಪಡಿಸಿದರು. ಮತದಾರರು ನಮ್ಮ ಅಭಿಯಾನಕ್ಕೆ ಹೊಸ ಜೀವ ತುಂಬಿದ್ದಾರೆ. ಅಧ್ಯಕ್ಷ ಸ್ಥಾನ ಹಾದಿಯಲ್ಲಿ ನಮ್ಮನ್ನು ಇರಿಸಿದ್ದಾರೆ. ಈಗ 2024ರಲ್ಲಿ ದಕ್ಷಿಣ ಕೆರೊಲಿನಾದ ಜನರು ಮತ್ತೆ ಮಾತನಾಡಿದ್ದಾರೆ. ನನ್ನನ್ನು ಮತ್ತೆ ಅಧ್ಯಕ್ಷ ಸ್ಥಾನ ಹಾದಿಯಲ್ಲಿ ಇಟ್ಟಿದ್ದಾರೆ. ಈ ಮೂಕ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೆ ಸೋಲುವಂತೆ ಮಾಡಿದ್ದಾರೆʼʼ ಎಂದು ಬೈಡೆನ್ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version