ವಾಷಿಂಗ್ಟನ್: ಅಮೆರಿಕದಲ್ಲಿ ಸಲಿಂಗಿಗಳ ಮದುವೆ ಹಕ್ಕುಗಳ ರಕ್ಷಣೆ (Same Sex Marriage In US) ದಿಸೆಯಲ್ಲಿ ಜೋ ಬೈಡೆನ್ ಮಹತ್ವದ ಹೆಜ್ಜೆ ಇರಿಸಿದ್ದಾರೆ. ಸಲಿಂಗಿಗಳ ಮದುವೆ ಹಕ್ಕುಗಳ ರಕ್ಷಣೆಯ ಪ್ರಮುಖ ವಿಧೇಯಕಕ್ಕೆ ಬೈಡೆನ್ ಸಹಿ ಹಾಕಿದ್ದು, ದೇಶಾದ್ಯಂತ ಸಲಿಂಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಶ್ವೇತಭವನದಲ್ಲಿರುವ ಸೌತ್ ಲಾನ್‌ನಲ್ಲಿ ಮದುವೆ ಹಕ್ಕುಗಳ ರಕ್ಷಣೆ ಕಾಯ್ದೆ (Respect For Marriage Act)ಗೆ ಜೋ ಬೈಡೆನ್ ಒಪ್ಪಿಗೆಯ ಮುದ್ರೆ ಒತ್ತಿದ್ದು, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿ ಸಚಿವರು, ಸಂಸದರು ಭಾಗಿಯಾಗಿದ್ದರು. ಹಾಗೆಯೇ, 5,300ಕ್ಕೂ ಹೆಚ್ಚು ನಾಗರಿಕರು ಕೂಡ ಸಹಿ ಹಾಕುವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಸಮಾನತೆಯೆಡೆಗೆ ಹೆಜ್ಜೆ ಎಂದ ಅಮೆರಿಕ ಅಧ್ಯಕ್ಷ
ಸಲಿಂಗಿಗಳ ಮದುವೆ ಹಕ್ಕುಗಳ ರಕ್ಷಣೆ ವಿಧೇಯಕಕ್ಕೆ ಸಹಿ ಹಾಕಿದ ಬಳಿಕ ಜೋ ಬೈಡೆನ್ ಟ್ವೀಟ್ ಮಾಡಿದ್ದು, “ನಾವಿಂದು ಸಮಾನತೆ, ನ್ಯಾಯ, ಎಲ್ಲರಿಗೂ ಏಕರೂಪದ ಹಕ್ಕುಗಳ ಕಡೆಗೆ ಮಹತ್ವದ ಹೆಜ್ಜೆ ಇರಿಸುತ್ತಿದ್ದೇವೆ” ಎಂದಿದ್ದಾರೆ. “ಹಕ್ಕುಗಳು ಎಂಬುದು ಕೆಲವೊಬ್ಬರಿಗೆ ಮಾತ್ರ ಸೀಮಿತವಲ್ಲ, ಅವು ಎಲ್ಲರಿಗೂ ಅನ್ವಯವಾಗುತ್ತವೆ” ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
2015ರಲ್ಲಿಯೇ ಬೈಡೆನ್ ಬೆಂಬಲ
ಅಮೆರಿಕ ಸುಪ್ರೀಂ ಕೋರ್ಟ್ 2015ರಲ್ಲಿಯೇ ಸಲಿಂಗಿಗಳ ಮದುವೆ ಮಾನ್ಯ ಎಂದು ಘೋಷಿಸಿದಾಗಲೇ ಸುಪ್ರೀಂ ತೀರ್ಮಾನಕ್ಕೆ ಜೋ ಬೈಡೆನ್ ಬೆಂಬಲ ಸೂಚಿಸಿದ್ದರು. ಈಗ ಅವರೇ ವಿಧೇಯಕಕ್ಕೆ ಸಹಿ ಹಾಕಿದ್ದಾರೆ. ಪುರುಷ ಹಾಗೂ ಮಹಿಳೆಯ ಮದುವೆಯಂತೆ ಈಗ ಸಲಿಂಗಿಗಳ ಮದುವೆಯೂ ಮಾನ್ಯವಾಗಿದ್ದು, ಎಲ್ಲರಿಗೂ ಸಮಾನ ಹಕ್ಕುಗಳು ಸಿಗಲಿವೆ. 2021ರಲ್ಲಿ ನಡೆದ ಸಮೀಕ್ಷೆ ಪ್ರಕಾರ, ಅಮೆರಿಕದಲ್ಲಿ ಸಲಿಂಗಿಗಳ ಮದುವೆಗೆ ಶೇ.68ರಷ್ಟು ಜನರ ಬಂಬಲವಿದೆ.
ಇದನ್ನೂ ಓದಿ | ಪಾಲಕರ ವಿರೋಧದ ವಿರುದ್ಧ ಹೈಕೋರ್ಟ್ಗೆ ಹೋಗಿದ್ದ ಸಲಿಂಗಿ ಯುವತಿಯರಿಗೆ ಗೆಲುವು: ಉಂಗುರ ಬದಲಿಸಿಕೊಂಡು ಸಂಭ್ರಮ