ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಜೋ ಬೈಡೆನ್ (Joe Biden) ಅವರ ಮಗ ಹಂಟರ್ ಬೈಡೆನ್ (Hunter Biden) ತೆರಿಗೆ ಕಳ್ಳತನ ಮಾಡಿದ್ದು, ಮಾದಕ ದ್ರವ್ಯ ವ್ಯಸನದ ವೇಳೆ ಅಕ್ರಮ ಗನ್ ಹೊಂದಿದ್ದುದು ತನಿಖೆಯ ಬಳಿಕ ಖಚಿತವಾಗಿದೆ. ಈ ಕುರಿತು ತಪೊಪ್ಪಿಗೆಯನ್ನು ಹಂಟರ್ ಬೈಡೆನ್ ಬರೆದು ಕೊಡಲಿದ್ದಾನೆ.
ಐದು ವರ್ಷಗಳ ತನಿಖೆಯ ನಂತರ ತನ್ನ ಎರಡು ದುಷ್ಕೃತ್ಯಗಳನ್ನು ಹಂಟರ್ ಬೈಡೆನ್ ಒಪ್ಪಿಕೊಂಡಿದ್ದಾನೆ. ತೆರಿಗೆ ಅಪರಾಧ ಹಾಗೂ ಮಾದಕವಸ್ತು ಬಳಕೆದಾರನಾಗಿದ್ದಾಗ ಅಕ್ರಮವಾಗಿ ಗನ್ ಹೊಂದಿದ್ದನ್ನು ಒಪ್ಪಿಕೊಂಡಿದ್ದು, ಈ ಬಗ್ಗೆ ತಪ್ಪೊಪ್ಪಿಗೆ ಪತ್ರ ನೀಡಲಿದ್ದಾನೆ. ಡೆಲಾವೇರ್‌ನಲ್ಲಿರುವ US ಅಟಾರ್ನಿ ಈ ತಪ್ಪೊಪ್ಪಿಗೆ ಪತ್ರ ಒಪ್ಪಂದ ತಲುಪಿಸಿದ್ದು, ಈ ಒಪ್ಪಂದದ ಷರತ್ತುಗಳ ಪ್ರಕಾರ ಅವರನ್ನು ಜೈಲಿನಿಂದ ಹೊರಗಿಡುವ ಸಾಧ್ಯತೆಯಿದೆ.
ಅದರ ಪ್ರಕಾರ, ಅಧ್ಯಕ್ಷರ ಮಗ ಒಂದೊಂದು ತೆರಿಗೆ ಅಪರಾಧದಲ್ಲಿಯೂ ಗರಿಷ್ಠ ಒಂದು ವರ್ಷದ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಅಕ್ರಮ ಬಂದೂಕು ಹೊಂದಿದ್ದಕ್ಕೆ 10 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಆದರೆ ತಪ್ಪೊಪ್ಪಿಗೆ ಒಪ್ಪಂದ ಮಾಡಿಕೊಂಡಿರುವ ಪರಿಣಾಮ ಆತ ಜೈಲಿನಿಂದ ಹೊರಗಿರುತ್ತಾನೆ. ಆದರೆ ವೈದ್ಯಕೀಯ ಚಿಕಿತ್ಸೆ, ಪುನರ್ವಸತಿ, ಮೇಲ್ವಿಚಾರಣೆಗೆ ಒಳಪಡಬೇಕಾಗುತ್ತದೆ. ಅಂತಿಮ ಒಪ್ಪಂದವನ್ನು ನ್ಯಾಯಾಧೀಶರು ಅನುಮೋದಿಸಬೇಕಾಗುತ್ತದೆ. ಅವರು ಶಿಕ್ಷೆಯನ್ನು ಸಹ ನಿರ್ಧರಿಸುತ್ತಾರೆ.
ಹಂಟರ್ ಬೈಡೆನ್ ತೆರಿಗೆ ಆರೋಪದ ಮೇಲೆ ತನ್ನ ತಪ್ಪಿತಸ್ಥ ಮನವಿ ಸಲ್ಲಿಸಲು ನ್ಯಾಯಾಲಯಕ್ಕೆ ಯಾವಾಗ ಹಾಜರಾಗುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. 53 ವರ್ಷದ ಹಂಟರ್ ಬೈಡೆನ್ ಈ ಹಿಂದೆ ವಕೀಲರಾಗಿದ್ದರು. ಚೀನಾ ಮತ್ತು ಉಕ್ರೇನ್‌ನಲ್ಲಿ ವಿದೇಶಾಂಗ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಹಂಟರ್ ತಮ್ಮ ಆದಾಯವನ್ನು ಸರಿಯಾಗಿ ವರದಿ ಮಾಡಿರಲಿಲ್ಲ. 2017 ಮತ್ತು 2018 ಎರಡೂ ವರ್ಷ $ 100,000ಗಿಂತ ಅಧಿಕ ತೆರಿಗೆ ಪಾವತಿಸಲು ವಿಫಲರಾಗಿದ್ದರು.
ಕೊಕೇನ್ ಸೇವನೆ ಮಾಡಿದ ಪರಿಣಾಮ 2014ರಲ್ಲಿ ಅವರನ್ನು ಯುಎಸ್ ನೌಕಾಪಡೆಯಿಂದ ವಜಾ ಮಾಡಲಾಗಿತ್ತು. 2018ರಲ್ಲಿ ಬಂದೂಕು ಖರೀದಿಸಲು ಬಳಸಿದ ಕಾಗದಪತ್ರದಲ್ಲಿ ಸುಳ್ಳು ಹೇಳಿಕೆ ಒದಗಿಸಿದ್ದರು. 2018ರಲ್ಲಿ ಮಾದಕ ವಸ್ತು ಬಳಸುತ್ತಿದ್ದಾಗ ಬಂದೂಕನ್ನು ಹೊಂದಿದ್ದರು. 2021ರಲ್ಲಿ ಬಂದ ಒಂದು ಪುಸ್ತಕದಲ್ಲಿ, ತಾನು ಆ ಸಮಯದಲ್ಲಿ ಕೊಕೇನ್ ಅನ್ನು ಹೆಚ್ಚು ಬಳಸುತ್ತಿದ್ದುದನ್ನು ಹಂಟರ್ ಒಪ್ಪಿಕೊಂಡಿದ್ದರು.
ಹಂಟರ್ ಅವರ ಮೇಲಿನ ಈ ಆರೋಪಗಳು ಬೈಡೆನ್ ವಿರೋಧಿಗಳಿಗೆ ಅಸ್ತ್ರಗಳಾಗಿವೆ. ಕೆಲವು ರಿಪಬ್ಲಿಕನ್ ಶಾಸಕರು ಮತ್ತು ಅಧ್ಯಕ್ಷೀಯ ಪದವಿ ಆಕಾಂಕ್ಷಿಗಳು, ಜೋ ಬೈಡೆನ್ ಅವರು ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಂಟರ್ ಬೈಡೆನ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನೂ ಮಾಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ.
ಇದನ್ನೂ ಓದಿ: US Debt Ceiling Crisis : ಸಾಲದ ಸುಳಿಯಲ್ಲಿ ಅಮೆರಿಕ, ಡಿಫಾಲ್ಟ್ ತಪ್ಪಿಸಲು ಬೈಡೆನ್ ಶತಪ್ರಯತ್ನ