ವಾಷಿಂಗ್ಟನ್: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಕಾಳಗವು (Israel Palestine War) ತಾರಕಕ್ಕೇರಿದ್ದು, ರಾತ್ರೋರಾತ್ರಿ ಗಾಜಾ ಸರ್ಕಾರಿ ಆಸ್ಪತ್ರೆ ಮೇಲೆ ರಾಕೆಟ್ ದಾಳಿ ನಡೆಸಲಾಗಿದೆ. ಇದರಿಂದ 500ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ದಾಳಿಯ ಕುರಿತು ಹಮಾಸ್ ಉಗ್ರರು ಇಸ್ರೇಲ್ ಮೇಲೆ, ಇಸ್ರೇಲ್ ಸೇನೆ ಹಮಾಸ್ ಉಗ್ರರ ಮೇಲೆ ಆರೋಪ ಮಾಡುತ್ತಿವೆ. ಇದರ ಬೆನ್ನಲ್ಲೇ, ಇಸ್ರೇಲ್-ಹಮಾಸ್ ಉಗ್ರರ ಸಮರಕ್ಕೆ ಕುರಿತಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಹಾಗೂ ಹಲವು ಇಸ್ಲಾಮಿಕ್ ದೇಶಗಳ ಜತೆ ಜೋರ್ಡಾನ್‌ನಲ್ಲಿ ನಡೆಯಬೇಕಿದ್ದ ಸಭೆಯನ್ನು ರದ್ದುಗೊಳಿಸಲಾಗಿದೆ.
ಜೋರ್ಡಾನ್‌ನ ಅಮಾನ್‌ನಲ್ಲಿ ಬುಧವಾರ (ಅಕ್ಟೋಬರ್ 18) ಜೋ ಬೈಡೆನ್ ಜತೆ ನಡೆಯಬೇಕಿದ್ದ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಜೋರ್ಡಾನ್ ವಿದೇಶಾಂಗ ಸಚಿವ ಆಯ್‌ಮಾನ್ ಸಫಾದಿ ಮಾಹಿತಿ ನೀಡಿದ್ದಾರೆ. ಗಾಜಾದಲ್ಲಿರುವ ಸರ್ಕಾರಿ ಆಸ್ಪತ್ರೆ ಮೇಲೆ ಇಸ್ರೇಲ್ ಸೇನೆಯೇ ದಾಳಿ ನಡೆಸಿರುವ ಕುರಿತು ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿಯೇ ಸಭೆ ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೋರ್ಡಾನ್ ಅರಸ ಅಬ್ದುಲ್ಲಾ, ಈಜಿಪ್ತ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸ್ಸಿ ಹಾಗೂ ಪ್ಯಾಲೆಸ್ತೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರ ಜತೆ ಜೋ ಬೈಡೆನ್ ಮಾತುಕತೆ ನಡೆಸಬೇಕಿತ್ತು. ಇಸ್ರೇಲ್ ಹಾಗೂ ಹಮಾಸ್ ಕಾಳಗ ತಡೆಯುವ ದಿಸೆಯಲ್ಲಿ ಎಲ್ಲ ದೇಶಗಳು ಸಭೆ ನಡೆಸಿ, ಶಾಂತಿಸ್ಥಾಪನೆ ದಿಸೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು.
#WATCH | Joint Base Andrews, Maryland: US President Joe Biden departs for Israel.
— ANI (@ANI) October 17, 2023
(Source: Reuters) pic.twitter.com/lp2A0PHErf
ಇಸ್ರೇಲ್‌ಗೆ ಹೊರಟ ಜೋ ಬೈಡೆನ್
ಜೋರ್ಡಾನ್‌ನಲ್ಲಿ ನಡೆಯಬೇಕಿದ್ದ ಶೃಂಗಸಭೆ ರದ್ದಾದರೂ ಜೋ ಬೈಡೆನ್ ಅವರು ಬುಧವಾರ ಇಸ್ರೇಲ್ ಭೇಟಿಗೆ ಪ್ರಯಾಣ ಆರಂಭಿಸಿದ್ದಾರೆ. ಇಸ್ರೇಲ್‌ನಲ್ಲಿ ಉಗ್ರರ ದಾಳಿ ಬಳಿಕ ಉಂಟಾದ ಪರಿಸ್ಥಿತಿ ಸೇರಿ ಹಲವು ವಿಷಯಗಳ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜತೆ ಜೋ ಬೈಡೆನ್ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಪ್ರತಿದಾಳಿ ನಡೆಸಿರುವುದನ್ನು ಜೋ ಬೈಡೆನ್ ಸಮರ್ಥಿಸಿಕೊಂಡಿದ್ದಾರೆ. ಹಾಗೆಯೇ, ಇಸ್ರೇಲ್‌ಗೆ ಬೆಂಬಲಿಸಿ ಶಸ್ತ್ರಾಸ್ತ್ರಗಳನ್ನೂ ಒದಗಿಸಿದ್ದಾರೆ.
ಇದನ್ನೂ ಓದಿ: Sundar Pichai: ಇಸ್ಲಾಂ ಎಂದರೆ ಅಂಜುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದ ಸುಂದರ್ ಪಿಚೈ!
ಇಸ್ರೇಲ್ ಹಾಗೂ ಹಮಾಸ್ ಉಗ್ರರ ದಾಳಿ-ಪ್ರತಿದಾಳಿ ಕುರಿತು ಜಗತ್ತು ಆತಂಕ ವ್ಯಕ್ತಪಡಿಸಿದರೂ ದಾಳಿಯ ತೀವ್ರತೆ ಕಡಿಮೆಯಾಗಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಗಾಜಾ ನಗರದ ಸರ್ಕಾರಿ ಆಸ್ಪತ್ರೆ ಮೇಲೆ ರಾತ್ರೋರಾತ್ರಿ ನಡೆದ ವಾಯುದಾಳಿಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಸೇರಿ 500 ಜನ ಮೃತಪಟ್ಟಿದ್ದಾರೆ. ಹಾಗೆಯೇ, ಆಸ್ಪತ್ರೆಯಲ್ಲಿದ್ದ ನೂರಾರು ಜನ ಗಾಯಗೊಂಡಿದ್ದಾರೆ. ಇಡೀ ಆಸ್ಪತ್ರೆ ಈಗ ಮಸಣದಂತಾಗಿದ್ದು, ಗಾಯಗೊಂಡವರು, ಸಂಬಂಧಿಕರನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ ಎಂದು ತಿಳಿದುಬಂದಿದೆ.