Site icon Vistara News

Joe Biden: ಚುನಾವಣೆ ಮೊದಲೇ ಜೋ ಬೈಡೆನ್‌ಗೆ ಸಂಕಷ್ಟ; ಮಗನ ವಿರುದ್ಧ ಕ್ರಿಮಿನಲ್‌ ಚಾರ್ಜ್‌ಶೀಟ್!

Joe Biden And Hunter Biden

Joe Biden’s son Hunter Biden indicted on gun charges

ವಾಷಿಂಗ್ಟನ್: ಅಮೆರಿಕದಲ್ಲಿ ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಈಗಾಗಲೇ ರಿಪಬ್ಲಿಕನ್‌ ಪಕ್ಷದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿ ಹಲವರು ಮರು ಅಧ್ಯಕ್ಷೀಯ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇತ್ತ ಮತ್ತೊಂದು ಅವಧಿಗೆ ಅಧ್ಯಕ್ಷರಾಗಬೇಕು ಎಂಬ ಅಭಿಲಾಷೆ ಹೊಂದಿರುವ ಜೋ ಬೈಡೆನ್‌ (Joe Biden) ಅವರಿಗೆ ಸಂಕಷ್ಟ ಎದುರಾಗಿದೆ. ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಪುತ್ರ ಹಂಟರ್‌ ಬೈಡೆನ್‌ ವಿರುದ್ಧ ಕ್ರಿಮಿನಲ್‌ ದೋಷಾರೋಪ (Charge) ಸಲ್ಲಿಸಲಾಗಿದೆ. ಇದು ಈಗ ಜೋ ಬೈಡೆನ್‌ ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಏನಿದು ಪ್ರಕರಣ?

ಉದ್ಯಮಿಯಾಗಿರುವ ಹಂಟರ್‌ ಬೈಡೆನ್‌ ಅವರು ಐದು ವರ್ಷಗಳ ಹಿಂದೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಡೀಲ್‌ ವೇಳೆ ಅಕ್ರಮ ನಡೆದಿದೆ ಎಂಬ ಆರೋಪ ಅವರ ವಿರುದ್ಧ ಕೇಳಿಬಂದಿರುವ ಕಾರಣ ಹಂಟರ್‌ ಬೈಡೆನ್‌ ವಿರುದ್ಧ ತನಿಖೆ ನಡೆಸಲಾಗುತ್ತಿದೆ. 2018ರಲ್ಲಿ ಶಸ್ತ್ರಾಸ್ತ್ರ ಖರೀದಿಯಲ್ಲಿ ಅಕ್ರಮ ಹಾಗೂ ಖರೀದಿ ಒಪ್ಪಂದದ ವೇಳೆ ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಡೆಲಾವೇರ್‌ನಲ್ಲಿರುವ ಫೆಡರಲ್‌ ಕೋರ್ಟ್‌ನಲ್ಲಿ ಹಂಟರ್‌ ಬೈಡೆನ್‌ ವಿರುದ್ಧ ಕ್ರಿಮಿನಲ್‌ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಪ್ರತಿಪಕ್ಷದ ಆರೋಪವೇನು?

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ನಾಲ್ಕು ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ. ಇದನ್ನೇ ಜೋ ಬೈಡೆನ್‌ ಅವರು ಪ್ರಚಾರದ ಅಸ್ತ್ರವನ್ನಾಗಿಸಿಕೊಂಡಿದ್ದರು. ಈಗ ಡೊನಾಲ್ಡ್‌ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷವು ಜೋ ಬೈಡೆನ್‌ ಹಾಗೂ ಅವರ ಮಗನ ವಿರುದ್ಧ ಹರಿಹಾಯುತ್ತಿವೆ. “ಹಂಟರ್‌ ಬೈಡೆನ್‌ ಅವರು ಮಾದಕವಸ್ತು ವ್ಯಸನಿಯಾಗಿದ್ದಾರೆ. ಅವರು ಉಕ್ರೇನ್‌ ಹಾಗೂ ಚೀನಾ ಜತೆ ಅಕ್ರಮವಾಗಿ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದಾರೆ. ಡೀಲ್‌ಗಾಗಿ ಲಾಬಿ ಮಾಡಿದ್ದಾರೆ” ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: PM Modi US Visit: ನರೇಂದ್ರ ಮೋದಿಗೆ ಜೋ ಬೈಡೆನ್‌ ಟಿ-ಶರ್ಟ್‌ ಗಿಫ್ಟ್;‌ ಅದರಲ್ಲಿ ಬರೆದಿದ್ದೇನು?

ಹಾಗೊಂದು ವೇಳೆ, ಹಂಟರ್‌ ಬೈಡೆನ್‌ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿ, ಅವರ ಬಂಧನವಾದರೆ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷಕ್ಕೆ ದೊಡ್ಡ ಅಸ್ತ್ರವೇ ಸಿಕ್ಕಂತಾಗಲಿದೆ. ಈಗಾಗಲೇ ಜೋ ಬೈಡೆನ್‌ ವಿರುದ್ಧವೂ ಹಲವು ಆರೋಪ ಕೇಳಿಬಂದಿದ್ದು, ಶ್ವೇತಭವನವೇ ಜೋ ಬೈಡೆನ್‌ ಯಾವ ತಪ್ಪು ಕೂಡ ಮಾಡಿಲ್ಲ ಎಂದು ಸ್ಪಷ್ಟನೆ ನೀಡುವಂತಾಗಿದೆ. ಈಗ ಅವರ ಪುತ್ರನ ವಿರುದ್ಧವೇ ಕ್ರಿಮಿನಲ್‌ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿರುವುದು ಜೋ ಬೈಡೆನ್‌ ಅವರಿಗೆ ತುಸು ಹಿನ್ನಡೆ ಎಂದೇ ಹೇಳಲಾಗುತ್ತಿದೆ.

Exit mobile version