Site icon Vistara News

Lashkar Commander: ಪಾಕ್‌ನಲ್ಲಿ ಲಷ್ಕರೆ ಕಮಾಂಡರ್‌ನ ಹತ್ಯೆ; ಈತ ಕಾಶ್ಮೀರ ದಾಳಿ ರೂವಾರಿ!

Akram Ghazi

Key Let Commander Killed In Pakistan By Unidentified Men

ಇಸ್ಲಾಮಾಬಾದ್:‌ ಉಗ್ರರ ತವರೂರಾಗಿರುವ, ಉಗ್ರ ಪೋಷಣೆಯಿಂದಲೇ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಈಗ ಉಗ್ರರ ಮಧ್ಯೆಯೇ ಸಮರ ನಡೆಯುತ್ತಿದೆಯೇ? ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾದಲ್ಲಿ ಲಷ್ಕರೆ ತಯ್ಬಾ ಕಮಾಂಡರ್‌ (Lashkar Commander) ಅಕ್ರಮ್‌ ಘಾಜಿಯನ್ನು (Akram Ghazi) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕಳೆದ ಕೆಲ ದಿನಗಳಲ್ಲಿ ಹೀಗೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿರುವುದರಿಂದ ಇಂತಹದ್ದೊಂದು ಪ್ರಶ್ನೆ ಮೂಡುತ್ತಿದೆ.

2018ರಿಂದ 2020ರಲ್ಲಿ ಲಷ್ಕರೆ ತಯ್ಬಾ ಉಗ್ರ ಸಂಘಟನೆಯಲ್ಲಿ ಉಗ್ರರ ನೇಮಕಾತಿ ಹುದ್ದೆ ನಿಭಾಯಿಸಿದ ಅಕ್ರಮ್‌ ಘಾಜಿ, ಜಮ್ಮು-ಕಾಶ್ಮೀರದಲ್ಲಿ ಹಲವು ಉಗ್ರ ದಾಳಿಯ ರೂವಾರಿಯೂ ಆಗಿದ್ದಾನೆ ಎಂದು ತಿಳಿದುಬಂದಿದೆ. ಹಾಗೆಯೇ, ಭಾರತದ ವಿರೋಧಿ ಹೇಳಿಕೆ, ಘೋಷಣೆಗಳಿಂದಲೇ ಉಗ್ರರನ್ನು ಪ್ರಚೋದಿಸುತ್ತಿದ್ದ ಈತ ಹಲವು ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಬಜೌರ್‌ ಜಿಲ್ಲೆಯಲ್ಲಿ ಅಪರಿಚಿತರು ಬೈಕ್‌ನಲ್ಲಿ ಬಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಇದರ ಕುರಿತು ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಉಗ್ರರ ಮಧ್ಯೆಯೇ ದ್ವೇಷ?

ಪಾಕಿಸ್ತಾನ ಸರ್ಕಾರವು ಐಎಸ್‌ಐ ಮೂಲಕ ಉಗ್ರರಿಗೆ ಹಲವು ರೀತಿಯಲ್ಲಿ ನೆರವು ನೀಡುತ್ತಿದ್ದರೂ ಇತ್ತೀಚೆಗೆ ಉಗ್ರರಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ಸರಬರಾಜು ಆಗುತ್ತಿಲ್ಲ. ಪಾಕಿಸ್ತಾನವೇ ಆರ್ಥಿಕವಾಗಿ ದಿವಾಳಿಯಾಗಿದ್ದು, ಜಾಗತಿಕ ಸಂಸ್ಥೆಗಳ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಅಮೆರಿಕ ಕೂಡ ಮೊದಲಿನ ಹಾಗೆ ಹಣದ ನೆರವು ನೀಡುತ್ತಿಲ್ಲ. ಇದರಿಂದಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಇದು ಪಾಕಿಸ್ತಾನದಲ್ಲಿ ಉಗ್ರರ ಮಧ್ಯೆಯೇ ಒಳಜಗಳಕ್ಕೆ ಕಾರಣವಾಗಿದೆ. ಹಾಗಾಗಿಯೇ, ಉಗ್ರರನ್ನೇ ಹತ್ಯೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Terrorists Killed: ಕಾಶ್ಮೀರದಲ್ಲಿ ಈ ವರ್ಷ 31 ಉಗ್ರರ ಹತ್ಯೆಗೈದ ಸೇನೆ; ಲಿಸ್ಟ್‌ನಲ್ಲಿ ಇನ್ನೆಷ್ಟು ಉಗ್ರರಿದ್ದಾರೆ?

ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದಲ್ಲಿ ಲಷ್ಕರೆ ಜಬ್ಬರ್‌ ಉಗ್ರ ಸಂಘಟನೆ ಸಂಸ್ಥಾಪಕ ಮಸೂದ್‌ ಅಜರ್‌ ಆಪ್ತ ದಾವೂದ್‌ ಮಲಿಕ್‌ನನ್ನು ಹತ್ಯೆ ಮಾಡಲಾಗಿತ್ತು. ಪಾಕಿಸ್ತಾನದ ಉತ್ತರ ವಾಜಿರಿಸ್ತಾನ್‌ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ದಾವೂದ್‌ ಮಲಿಕ್‌ನನ್ನು ಹತ್ಯೆ ಮಾಡಿದ್ದರು. ಉತ್ತರ ವಾಜಿರಿಸ್ತಾನ್‌ ಜಿಲ್ಲೆಯ ಮಿರಾಲಿ ಪ್ರದೇಶದಲ್ಲಿ ದಾವೂದ್‌ ಮಲಿಕ್‌ ಹಾಗೂ ಆತನ ತಂಡವು ಅಕ್ಟೋಬರ್‌ 20ರಂದು ಅಪರಿಚಿತನೊಬ್ಬನ ಮೇಲೆ ದಾಳಿ ನಡೆಸಿದ್ದ. ದಾಳಿ ಬಳಿಕ ದಾವೂದ್‌ ಮಲಿಕ್‌ ಹಾಗೂ ತಂಡವು ಅಲ್ಲಿಂದ ಕಾಲ್ಕಿತ್ತಿತ್ತು. ಇದಾದ ಮರುದಿನವೇ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version