Site icon Vistara News

Khalistan Terrorists: ಮತ್ತೆ ಖಲಿಸ್ತಾನಿಗಳಿಂದ ಹಿಂದೂ ದೇವಾಲಯದ ಮೇಲೆ ದಾಳಿ

khalistan

khalistan

ನವದೆಹಲಿ: ಅಮೆರಿಕದ ಕ್ಯಾಲಿಫೋರ್ನಿಯಾದ ಹೇವಾರ್ಡ್‌ನಲ್ಲಿ (Hayward) ಹಿಂದೂ ದೇವಾಲಯದ ಮೇಲೆ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಭಾರತ ವಿರೋಧಿ ಗೀಚು ಬರಹದಿಂದ ದಾಳಿ ಮಾಡಲಾಗಿದೆ (Anti-India graffiti). ಕ್ಯಾಲಿಫೋರ್ನಿಯಾದ ಸ್ವಾಮಿನಾರಾಯಣ ಮಂದಿರವನ್ನು ಧ್ವಂಸಗೊಳಿಸಿದ ಎರಡು ವಾರಗಳ ನಂತರ ಮತ್ತು ಶಿವ ದುರ್ಗಾ ದೇವಸ್ಥಾನದಲ್ಲಿ ಕಳ್ಳತನ ನಡೆದ ಕೆಲವೇ ದಿನಗಳ ಅಂತರದಲ್ಲಿ ಈ ಘಟನೆ ವರದಿಯಾಗಿದೆ. ಇದೀಗ ಹೇವಾರ್ಡ್‌ನ ವಿಜಯ್ ಅವರ ಶೆರವಾಲಿ ದೇವಾಲಯವನ್ನು (Vijay’s Sherawali Temple) ಖಲಿಸ್ತಾನಿ ಪರ ಬರಹಗಳಿಂದ ವಿರೂಪಗೊಳಿಸಲಾಗಿದೆ (Khalistan Terrorists).

ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ʼಹಿಂದೂ ಅಮೆರಿಕನ್‌ ಫೌಂಡೇಷನ್‌. (Hindu American Foundation) ಗ್ರೂಪ್‌ ದೇವಾಲಯದ ಫೋಟೊವನ್ನು ಹಂಚಿಕೊಂಡಿದೆ. “ಬೇ ಏರಿಯಾದ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ್‌ ಪರ ಗೀಚು ಬರಹದಿಂದ ದಾಳಿ ಮಾಡಲಾಗಿದೆ. ಸ್ವಾಮಿ ನಾರಾಯಣ ಮಂದಿರದ ಮೇಲಿನ ದಾಳಿಯ ಎರಡು ವಾರಗಳ ನಂತರ ಮತ್ತು ಅದೇ ಪ್ರದೇಶದ ಶಿವ ದುರ್ಗಾ ದೇವಸ್ಥಾನದಲ್ಲಿ ಕಳ್ಳತನವಾದ ಒಂದು ವಾರದ ನಂತರ ಸಿಎ ಹೇವಾರ್ಡ್‌ನಲ್ಲಿರುವ ವಿಜಯ್ ಅವರ ಶೆರವಾಲಿ ದೇವಾಲಯವನ್ನು ವಿರೂಪಗೊಳಿಸಲಾಗಿದೆ” ಎಂದು ಹಿಂದೂ ಅಮೆರಿಕನ್‌ ಫೌಂಡೇಷನ್‌ ಬರೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಮೇಲೆ ಹೆಚ್ಚುತ್ತಿರುವ ದಾಳಿಗಳನ್ನು ಭಾರತ ಬಲವಾಗಿ ಖಂಡಿಸಿದೆ.

ಕೆಲವು ದಿನಗಳ ಹಿಂದೆ ನೆವಾರ್ಕ್‌ನ ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯ ಹೊರಭಾಗದ ಗೋಡೆಗಳ ಮೇಲೆ ಭಾರತ ವಿರೋಧಿ, ಖಲಿಸ್ತಾನಿ ಪರ ಘೋಷಣೆಗಳನ್ನು ಗೀಚಿ ವಿರೂಪಗೊಳಿಸಲಾಗಿತ್ತು. ಗೋಡೆಗಳ ಮೇಲೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದ್ವೇಷಪೂರಿತ ಘೋಷಣೆಗಳನ್ನು ಬರೆದಿರುವುದು ಪತ್ತೆಯಾಗಿತ್ತು.

ಈ ಘಟನೆಯನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್‌ (Indian Consulate) ಕಚೇರಿ ಕಠಿಣ ಶಬ್ದಗಳಲ್ಲಿ ಖಂಡಿಸಿತ್ತು. “ನೆವಾರ್ಕ್‌ನಲ್ಲಿರುವ ಸ್ವಾಮಿನಾರಾಯಣ ಮಂದಿರವನ್ನು ಹಾನಿಗೆಡವಿರುವ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದು ಭಾರತೀಯ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ. ಅಮೆರಿಕ ಅಧಿಕಾರಿಗಳು ಈ ಕೂಡಲೇ ಸೂಕ್ತ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿತ್ತು.

ಮಾತ್ರವಲ್ಲ ವಿದೇಶಾಂಗ ಸಚಿವ ಎಸ್.ಜೈಶಂಕರ್ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. “ಭಾರತದ ಹೊರಗಿನ ಉಗ್ರಗಾಮಿಗಳು ಮತ್ತು ಪ್ರತ್ಯೇಕತಾವಾದಿ ಶಕ್ತಿಗಳಿಗೆ ಎಲ್ಲೂ ಅವಕಾಶ ಸಿಗಬಾರದು. ಘಟನೆ ಬಗ್ಗೆ ಸರ್ಕಾರ ಮತ್ತು ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದೇವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಭರವಸೆ ಇದೆʼʼ ಎಂದು ಅವರು ತಿಳಿಸಿದ್ದರು.

ಘಟನೆ ಹೆಚ್ಚಳ

ಇಂತಹ ದ್ವೇಷದ ಅಪರಾಧಗಳ ಘಟನೆಗಳು ಅಮೆರಿಕದಲ್ಲಿ ಹಲವಾರು ಬಾರಿ ದಾಖಲಾಗಿವೆ. ಯುಎಸ್ ಮತ್ತು ಕೆನಡಾದಲ್ಲಿ ಇವು ಹೆಚ್ಚುತ್ತಿವೆ. ಆಗಸ್ಟ್‌ನಲ್ಲಿ, ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (SFJ) ಕಾರ್ಯಕರ್ತರು ದೆಹಲಿಯಲ್ಲಿ ನಡೆದ G20 ಶೃಂಗಸಭೆಗೆ ಮುಂಚಿತವಾಗಿ ಖಲಿಸ್ತಾನ್ ಪರ ಗೀಚುಬರಹದೊಂದಿಗೆ ಐದು ಮೆಟ್ರೋ ನಿಲ್ದಾಣಗಳನ್ನು ವಿರೂಪಗೊಳಿಸಿದರು. ಎಸ್‌ಎಫ್‌ಐ ದೆಹಲಿ ಮೆಟ್ರೋ ಸ್ಟೇಷನ್‌ಗಳಲ್ಲಿ ʼದೆಹಲಿ ಬನೇಗಾ ಖಲಿಸ್ತಾನ್’ ಮತ್ತು ʼಖಲಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಬರೆಯಲಾಗಿತ್ತು. ಈ ಪ್ರಕರಣದಲ್ಲಿ ಸೆಪ್ಟೆಂಬರ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಎರಡು ತಿಂಗಳ ನಂತರ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: Khalistan Terrorists: ಅಮೆರಿಕದಲ್ಲಿ ಖಲಿಸ್ತಾನಿಗಳಿಂದ ಹಿಂದೂ ದೇವಾಲಯ ವಿರೂಪ, ಭಾರತ ತೀವ್ರ ಖಂಡನೆ

Exit mobile version