Site icon Vistara News

Rishi Sunak | ಬ್ರಿಟನ್‌ ಭಾವಿ ಪ್ರಧಾನಿ ಬಗ್ಗೆ ಈ 9 ಸಂಗತಿ ನಿಮಗೆ ತಿಳಿದಿರಲಿ

rishi sunak

ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಹಗರಣಗಳ ಸುಳಿಯಲ್ಲಿ ಸಿಲುಕಿ ರಾಜೀನಾಮೆ ನೀಡಿದ್ದಾರೆ. ಭಾರತೀಯ ಮೂಲದ ರಿಷಿ ಸುನಕ್‌ ಅವರ ಹೆಸರು ಬ್ರಿಟನ್‌ ಪ್ರಧಾನಿ ಪದವಿಗೆ ಕೇಳಿ ಬರುತ್ತಿದೆ. ಇವರ ಬಗ್ಗೆ ನೀವು ತಿಳಿದಿರಬೇಕಾದ ಕೆಲವು ಸಂಗತಿಗಳು ಇಲ್ಲಿವೆ.

೧. ರಿಷಿ ಸುನಕ್‌ ಅವರು ಬ್ರಿಟನ್‌ ಸಂಜಾತ. ಇವರ ತಂದೆ ತಾಯಿ ಭಾರತೀಯ ಮೂಲದವರು. ರಿಷಿ ಇಂಗ್ಲೆಂಡಿನ ಸೌತಾಂಪ್ಟನ್‌ನಲ್ಲಿ ನೆಲೆಸಿದ್ದ ಪಂಜಾಬ್‌ ಮೂಲದ ಯಶ್ವೀರ್‌ ಮತ್ತು ಉಷಾ ಸುನಕ್‌ ಎಂಬ ದಂಪತಿಗೆ 1980ರಲ್ಲಿ ಜನಿಸಿದವರು. ಇವರ ಅಜ್ಜ ಅಜ್ಜಿ ಪಂಜಾಬ್‌ನಿಂದ ವಲಸೆ ಹೋದವರು. ತಂದೆ ವೈದ್ಯರು.

೨. ವಿದ್ಯಾರ್ಥಿ ದೆಸೆಯಲ್ಲೇ ಇನ್‌ಫೋಸಿಸ್‌ ಸ್ಥಾಪಕ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರನ್ನು ಭೇಟಿಯಾಗಿ, ಪ್ರೇಮಿಸಿ, 2009ರಲ್ಲಿ ರಿಷಿ ಹಾಗೂ ಅಕ್ಷತಾ ಮೂರ್ತಿ ಮದುವೆಯಾದರು. ಅದಕ್ಕೂ ಮುನ್ನ ರಿಷಿ ಅವರು ನಾರಾಯಣಮೂರ್ತಿ ಪಾಲುದಾರರಾಗಿದ್ದ ಇಂಗ್ಲೆಂಡ್‌ನ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿದ್ದರು.

೩. ರಿಷಿ ಆಕ್ಸ್‌ಫರ್ಡ್‌ ಯೂನಿವರ್ಸಿಟಿಯಲ್ಲಿ ಫಿಲಾಸಫಿ, ಪಾಲಿಟಿಕ್ಸ್‌ ಮತ್ತು ಎಕಾನಮಿಕ್ಸ್‌ ಓದಿದರು. ಪದವಿ ಪಡೆದ ನಂತರ ಗೋಲ್ಡ್‌ಮನ್‌ ಸ್ಯಾಕ್ಸ್‌ ಬ್ಯಾಂಕ್‌ನಲ್ಲಿ ಅನಲಿಸ್ಟ್‌ ಆಗಿ ಸೇರಿಕೊಂಡರು. 2014ರಲ್ಲಿ ರಿಚ್ಮಂಡ್‌ ಎಂಬಲ್ಲಿಂದ ಕನ್ಸರ್ವೇಟಿಕ್‌ ಪಕ್ಷದಿಂದ ಸ್ಪರ್ಧಿಸುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಬಳಿಕ ಎರಡು ಬಾರಿ ಆರಿಸಿ ಬಂದಿದ್ದಾರೆ. ಪ್ರತಿಸಲವೂ ಅವರ ಜನಪ್ರಿಯತೆ ಏರುತ್ತಾ ಹೋಯಿತು.

೪. ಕೋವಿಡ್‌ ಸಂದರ್ಭದಲ್ಲಿ ರಿಷಿ ಅವರ ಜನಪ್ರಿಯತೆ ಉತ್ತುಂಗಕ್ಕೆ ಏರಿತು. ಪ್ರಧಾನಿ ಬೋರಿಸ್‌ ಜಾನ್ಸನ್‌ ಕೊರೊನಾದ ಅಪಕ್ವ ನಿರ್ವಹಣೆ ಸೇರಿದಂತೆ ಅನೇಕ ವಿವಾದಗಳಲ್ಲಿ ಸಿಲುಕಿ ಹೆಸರು ಕೆಡಿಸಿಕೊಂಡ ಬಳಿಕ, ರಿಷಿ ಅವರು ಜಾನ್ಸನ್‌ನ ಉತ್ತರಾಧಿಕಾರಿ ಎಂದು ಬ್ರಿಟಿಷ್‌ ಮಾಧ್ಯಮಗಳು ಹೇಳತೊಡಗಿದವು.

೫. ಬೋರಿಸ್‌ ಪ್ರಧಾನಿಯಾಗುವುದಕ್ಕೆ ಮುನ್ನ ಹಲವು ಸಣ್ಣಪುಟ್ಟ ಖಾತೆಗಳ್ನು ರಿಷಿ ನಿರ್ವಹಿಸಿದ್ದರು. ಅವರಿಗೆ ಹಣಕಾಸು ಖಾತೆಯನ್ನು ಹೊರಿಸಿದ್ದು ಬೋರಿಸ್.‌ ಅದನ್ನು ರಿಷಿ ಸಮರ್ಥವಾಗಿ ನಿಭಾಯಿಸಿದರು.

೬. ಹಗರಣಗಳಲ್ಲಿ ಸಿಲುಕಿಕೊಂಡ ಬೋರಿಸ್‌ ಜಾನ್ಸನ್‌ ಅವರನ್ನು ಸಮರ್ಥಿಸಿಕೊಂಡು ಬಂದದ್ದರಿಂದ ರಿಷಿ ಅವರ ಜನಪ್ರಿಯತೆ ತುಸು ಇಳಿಯಿತು. ಕೊನೆಗೂ ರಿಷಿ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: ವಿಸ್ತಾರ Explainer: ರಾಜೀನಾಮೆ ನೀಡಿದ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿ ಆಗುವರೇ?

೭. ಪತ್ನಿ ಅಕ್ಷತಾ ಅವರು ಇಂಗ್ಲೆಂಡ್‌ ಸರಕಾರಕ್ಕೆ ಸಲ್ಲಿಸಬೇಕಾದ 20 ದಶಲಕ್ಷ ಪೌಂಡ್‌ (ಸುಮಾರು 197 ಕೋಟಿ ರೂಪಾಯಿ) ತೆರಿಗೆಯನ್ನು ತಪ್ಪಿಸಿದ್ದಾರೆ ಎಂಬ ಆರೋಪ ಬಂತು. ರಿಷಿ ಸಕಾಲದಲ್ಲಿ ಅದಕ್ಕೆ ಉತ್ತರಿಸಲಿಲ್ಲ. ಅಕ್ಷತಾ ಅವರು ಬ್ರಿಟನ್‌ನ non domicile ಪ್ರಜೆಯಾಗಿದ್ದರೆ ಅವರು ದೇಶದಾಚೆಯ ಮೂಲಗಳಿಂದ ಪಡೆದ ಆದಾಯಕ್ಕೆ ಬ್ರಿಟನ್‌ನಲ್ಲಿ ತೆರಿಗೆ ಕಟ್ಟಬೇಕಿಲ್ಲ. ಆದರೆ ನಾನ್‌ ಡೊಮಿಸೈಲ್‌ ಸ್ಥಾನಮಾನ ಅವರು ಪಡೆದಿರಲಿಲ್ಲ. ಕೊನೆಗೆ ಈ ತೆರಿಗೆ ಕಟ್ಟಲು ಅಕ್ಷತಾ ಒಪ್ಪಿದರು.

೮. ರಿಷಿ ಆಲ್ಕೋಹಾಲ್‌ ಸೇವಿಸುವುದಿಲ್ಲ. ಆದರೆ ಬೋರಿಸ್‌ ಜಾನ್ಸನ್‌ ಅವರ ವಿವಾದಿತ ಕೋವಿಡ್‌ ಕಾಲದ ಪಾರ್ಟಿಯಲ್ಲಿ ಇವರೂ ಇದ್ದರು. ಇವರನ್ನು ಆತ್ಮೀಯರು ʼDishy’ ಎಂದು ಕರೆಯುತ್ತಾರೆ.

೯. ಉಕ್ರೇನ್‌ ಮೇಲಿನ ಯುದ್ಧಕ್ಕಾಗಿ ರಷ್ಯಾದ ಮೇಲೆ ಹಲವು ವಾಣಿಜ್ಯ ನಿರ್ಬಂಧಗಳನ್ನು ಇಂಗ್ಲೆಂಡ್‌ ವಿಧಿಸಿದೆ. ಆದರೆ ಇನ್‌ಫೋಸಿಸ್‌ ಮಾತ್ರ ರಷ್ಯಾದಲ್ಲಿ ಎಂದಿನಂತೆ ತನ್ನ ವ್ಯವಹಾರ ನಡೆಸುತ್ತಿದೆ. ಇದರ ಬಗ್ಗೆ ರಿಷಿ ತುಟಿ ಪಿಟಿಕ್‌ ಎಂದಿಲ್ಲ.

ಇದನ್ನೂ ಓದಿ: ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್‌‌ ಬ್ರಿಟನ್‌ನ ಸರ್ಕಾರಕ್ಕೆ ರಾಜೀನಾಮೆ, ಜಾನ್ಸನ್‌ ನಾಯಕತ್ವದಲ್ಲಿ ಅವಿಶ್ವಾಸ

Exit mobile version