Site icon Vistara News

Kuwait Fire: ಕುವೈತ್‌ ಅಗ್ನಿ ದುರಂತ; 45 ಭಾರತೀಯರ ಮೃತದೇಹ ಇಂದು ಸ್ವದೇಶಕ್ಕೆ

Kuwait Fire

Kuwait Fire

ಕುವೈತ್‌ ಸಿಟಿ: ಕುವೈತ್‌ನ ಮಂಗಾಫ್ ನಗರದಲ್ಲಿನ ಆರು ಮಹಡಿಯ ಬೃಹತ್‌ ಕಟ್ಟಡವೊಂದರಲ್ಲಿ ಬುಧವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ (Kuwait Fire) ಮೃತಪಟ್ಟ ಸುಮಾರು 45 ಭಾರತೀಯರ ಮೃತದೇಹವನ್ನು ಇಂದು (ಜೂನ್‌ 14) ದೇಶಕ್ಕೆ ಕರೆ ತರಲಾಗುತ್ತಿದೆ. ಶುಕ್ರವಾರ ಬೆಳಗ್ಗೆ ಕೊಚ್ಚಿಗೆ ಬಂದಿಳಿಯುವ ವಿಶೇಷ ವಿಮಾನ ಬಳಿಕ ನವದೆಹಲಿಗೆ ತೆರಳಲಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಮೃತಪಟ್ಟ ಭಾರತೀಯರಲ್ಲಿ ಬಹುತೇಕ ಮಂದಿ ಕೇರಳದವರು. ದುರಂತದಲ್ಲಿ ಸುಮಾರು 23 ಮಂದಿ ಕೇರಳದವರು ಅಸುನೀಗಿದ್ದು, ತಮಿಳುನಾಡಿನ 7 ಮಂದಿ, ಆಂಧ್ರ ಪ್ರದೇಶ ಮತ್ತು ಉತ್ತರ ಪ್ರದೇಶದ ತಲಾ 3 ಮಂದಿ, ಒಡಿಶಾದ ಇಬ್ಬರು, ಕರ್ನಾಟಕ, ಬಿಹಾರ, ಪಂಜಾಬ್‌, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್‌ ಮತ್ತು ಹರಿಯಾಣದ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಗುರುವಾರ ಮುಂಜಾನೆ ಕುವೈತ್ ತಲುಪಿದ್ದು, ಮೃತದೇಹಗಳನ್ನು ಶೀಘ್ರವಾಗಿ ಸ್ವದೇಶಕ್ಕೆ ಕಳುಹಿಸಲು ಮತ್ತು ಅಗ್ನಿ ದುರಂತದಲ್ಲಿ ಗಾಯಗೊಂಡವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಕುವೈತ್ ಸರ್ಕಾರದೊಂದಿಗೆ ಮಾತುಕತೆ ನಡೆಸಿದರು.

ಮಂಗಾಫ್ ಪ್ರದೇಶದ ಕಾರ್ಮಿಕ ವಸತಿ ನಿಲಯದಲ್ಲಿ ವಾಸವಿದ್ದ ಭಾರತದ ಮೂಲದ 176 ಕಾರ್ಮಿಕರ ಪೈಕಿ ಅಗ್ನಿ ದುರಂತದಲ್ಲಿ 45 ಮಂದಿ ಮೃತಪಟ್ಟಿದ್ದು, 33 ಮಂದಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದವರು ಸುರಕ್ಷಿತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕುವೈತ್‌ ತಲುಪಿದ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಭಾರತೀಯರು ಚಿಕಿತ್ಸೆ ಪಡೆಯುತ್ತಿರುವ ಐದು ಆಸ್ಪತ್ರೆಗಳಿಗೆ (ಅದಾನ್, ಮುಬಾರಕ್ ಅಲ್-ಕಬೀರ್, ಜಬರ್, ಫರ್ವಾನಿಯಾ ಮತ್ತು ಜಹ್ರಾ) ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿದರು. ಎಲ್ಲ ರೋಗಿಗಳು ಸುರಕ್ಷಿತರಾಗಿದ್ದಾರೆ ಮತ್ತು ಅವರ ವೈದ್ಯಕೀಯ ಸ್ಥಿತಿಯನ್ನು ಅವಲಂಬಿಸಿ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಕೀರ್ತಿ ವರ್ಧನ್ ಸಿಂಗ್ ಅವರು ಉಪ ಪ್ರಧಾನಿ ಶೇಖ್ ಫಹಾದ್ ಯೂಸುಫ್ ಸೌದ್ ಎಐ-ಸಬಾಹ್ ಅವರ ಜತೆಯೂ ಮಾತುಕತೆ ನಡೆಸಿದರು. ಈ ವೇಳೆ ಸರ್ಕಾರ, ಮೃತದೇಹಗಳನ್ನು ಶೀಘ್ರವಾಗಿ ಸ್ವದೇಶಕ್ಕೆ ಕಳುಹಿಸಲು ಮತ್ತು ಆಸ್ಪತ್ರೆಗೆ ದಾಖಲಾದ ಎಲ್ಲರಿಗೂ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಲು ಸಂಪೂರ್ಣ ಬೆಂಬಲ ಮತ್ತು ಸಹಾಯ ಒದಗಿಸುವುದಾಗಿ ಭರವಸೆ ನೀಡಿದೆ. ಮಾತ್ರವಲ್ಲ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ದುಲ್ಲಾ ಅಲಿ ಎಐ-ಯಾಹ್ಯಾ ಮತ್ತು ಆರೋಗ್ಯ ಸಚಿವ ಅಹ್ಮದ್ ಅಬ್ದೆಲ್ವಹಾಬ್ ಅಹ್ಮದ್ ಅಲ್-ಅವಾಡಿ ಅವರನ್ನು ಭೇಟಿಯಾಗಿ ಕೀರ್ತಿ ವರ್ಧನ್ ಸಿಂಗ್ ಚರ್ಚೆ ನಡೆಸಿದರು. ಸಂತ್ರಸ್ತರ ಕುಟುಂಬ ಸದಸ್ಯರು ಮತ್ತು ಗಾಯಗೊಂಡವರಿಗಾಗಿ 24×7 ಮೀಸಲಾದ ಸಹಾಯವಾಣಿ +965-65505246 ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯವಿದ್ದವರು ಸಂಪರ್ಕಿಸಬಹುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Hassan Ali: ರಿಯಾಸಿ ಉಗ್ರರ ದಾಳಿ ಖಂಡಿಸಿದ ಪಾಕ್‌ ಕ್ರಿಕೆಟಿಗ ಹಸನ್‌ ಅಲಿ; ಆಲ್‌ ಐಸ್‌ ಆನ್‌ ವೈಷ್ಣೋದೇವಿ ಎಂದಿದ್ದೇಕೆ?

ಬುಧವಾರ ಮುಂಜಾನೆ 4.30ಕ್ಕೆ ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಇಡೀ ಕಟ್ಟಡವನ್ನು ವ್ಯಾಪಿಸಿ ದುರಂತ ಸಂಭವಿಸಿದೆ.

Exit mobile version