Site icon Vistara News

Lanka on fire: ಶ್ರೀಲಂಕಾ ಅಧ್ಯಕ್ಷರ ಮನೆ ಈಗ ಪ್ರವಾಸಿ ತಾಣ, ಹೋರಾಟ ಸೇರಿಕೊಂಡ ಸಿಂಹಳಿ ಕ್ರಿಕೆಟಿಗರು

sanath jayasurya

ಕೊಲಂಬೊ: ಶನಿವಾರ ರೊಚ್ಚಿಗೆದ್ದ ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ಸ್ವೇಚ್ಛಾಚಾರ ನಡೆಸಿದ್ದರು. ಭಾನುವಾರ ಅದು ಪ್ರವಾಸಿ ತಾಣದಂತೆ ಮಾರ್ಪಟ್ಟಿದೆ. ಸಾವಿರಾರು ಜನರು ಯಾವುದೇ ಸೆಕ್ಯುರಿಟಿಯ ಭಯವಿಲ್ಲದೆ ಒಳಹೊರಗೆ ಓಡಾಡುತ್ತಿದ್ದಾರೆ.

ಕೊಲಂಬೋದಲ್ಲಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಭವ್ಯ ಭವನ ಈಗ ಪ್ರತಿಭಟನಾಕಾರರ ವಿರಾಮದ, ಮೋಜು ಮಸ್ತಿಯ ತಾಣವಾಗಿದೆ. ಪ್ರತಿಭಟನಾಕಾರರು ಇಲ್ಲಿನ ಈಜುಕೊಳದಲ್ಲಿ ವಿಹರಿಸುತ್ತಿದ್ದಾರೆ. ಕಿಚನ್‌ಗೆ ನುಗ್ಗಿ ಸಿಕ್ಕಿದ್ದನ್ನು ಸೇವಿಸುವುದು, ಕುಡಿಯುವುದು ಮಾಡುತ್ತಿದ್ದಾರೆ. ಯಾವುದೇ ಪೊಲೀಸರು ಅವರನ್ನು ತಡೆಯುತ್ತಿಲ್ಲವಾದ್ದರಿಂದ ಭವನವನ್ನು ನೋಡುವುದಕ್ಕಾಗಿ ರಾಜಧಾನಿಯ ನಿವಾಸಿಗಳು ಅತ್ತ ಬರುತ್ತಿದ್ದು, ಜನರಿಂದ ತುಂಬಿಹೋಗಿದೆ. ʼGota Go’ ಎಂದು ಬರೆದಿರುವ ಫಲಕಗಳು ಅಲ್ಲಲ್ಲಿ ಕಾಣುತ್ತಿವೆ.

ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಜುಲೈ 13ರಂದು ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೂ ತಾವು ಭವನ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಹಠ ಹಿಡಿದಿದ್ದಾರೆ. ಗೊಟಬಯ ಪರಾರಿಯಾಗಿದ್ದು, ನೌಕಾಪಡೆ ಹಡಗಿನಲ್ಲಿ ಅವಿತು ಕುಳಿತಿದ್ದಾರೆ. ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರು ಶನಿವಾರ ರಾಜೀನಾಮೆ ನೀಡಿದ್ದು, ಶನಿವಾರ ರಾತ್ರಿ ಅವರ ನಿವಾಸದಲ್ಲಿ ಬೆಂಕಿ ಬಿದ್ದಿತ್ತು.

ಇದನ್ನೂ ಓದಿ: Lanka on fire: ಲಂಕಾ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ರಾಜೀನಾಮೆ, ಮನೆಗೆ ಬಿಗಿ ಭದ್ರತೆ

ಕ್ರಿಕಟಿಗರ ಸೇರ್ಪಡೆ

ಈ ನಡುವೆ, ರಾಜಪಕ್ಸ ಸಹೋದರರ ಪದಚ್ಯುತಿ ಹಾಗೂ ಹೊಸ ಸರ್ಕಾರಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಅಲ್ಲಿನ ಕ್ರಿಕೆಟಿಗರು, ಮಾಜಿ ಆಟಗಾರರು ಸಹ ಸೇರಿಕೊಂಡಿದ್ದಾರೆ. ಸನತ್‌ ಜಯಸೂರ್ಯ, ಕುಮಾರ ಸಂಗಕ್ಕರ, ಮಹೇಲ ಜಯವರ್ಧನೆ ಮುಂತಾದವರು ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೊಲಂಬೊದ ಬೀದಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸನತ್‌ ಜಯಸೂರ್ಯ ಅವರೂ ಭಾಗಿಯಾಗಿರುವುದು ಕಂಡುಬಂದಿದೆ. ʼʼದೇಶ ಹಿಂದೆ ಎಂದೂ ಈ ಪ್ರಮಾಣದಲ್ಲಿ ಒಗ್ಗಟ್ಟಾದುದನ್ನು ನಾನು ಕಂಡಿರಲಿಲ್ಲ. ವಿಫಲ ನಾಯಕ ಕೆಳಗಿಳಿಯಲೇಬೇಕು. ನಾನು ಯಾವತ್ತೂ ಲಂಕೆಯ ಜನರ ಜತೆಗಿರುತ್ತೇನೆ. ಶೀಘ್ರದಲ್ಲಿಯೇ ನಾವು ವಿಜಯ ಆಚರಿಸಿಕೊಳ್ಳಲಿದ್ದೇವೆʼʼ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಕುಮಾರ ಸಂಗಕ್ಕರ ಅವರೂ ಪ್ರತಿಭಟನಾಕಾರರ ದಂಡಿನ ಫೋಟೋವನ್ನು ಟ್ವೀಟ್‌ ಮಾಡಿ ʼʼಇದು ನಮ್ಮ ಭವಿಷ್ಯಕ್ಕಾಗಿʼʼ ಎಂದು ಟ್ವೀಟ್‌ ಮಾಡಿದ್ದರು. ʼʼಒಂದು ದೇಶವಾಗಿ ನಾವು ದಿಕ್ಕು ಬದಲಿಸುತ್ತಿದ್ದೇವೆ. ಜನತೆ ಮಾತನಾಡುತ್ತಿದ್ದಾರೆ. ಯಾರೂ ಇದನ್ನು ಬದಲಿಸಲಾರರುʼʼ ಎಂದು ಮಹೇಲ ಜಯವರ್ಧನೆ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Lanka on fire: ಶ್ರೀಲಂಕಾದ ಅಸಹಾಯಕ ಸ್ಥಿತಿಗೆ ಯಾರು ಕಾರಣ? ನಿಜಕ್ಕೂ ಏನಾಗಿದೆ ದ್ವೀಪ ರಾಷ್ಟ್ರಕ್ಕೆ?

Exit mobile version