Site icon Vistara News

Lanka on fire: ದೇಶ ಬಿಟ್ಟು ಪರಾರಿಯಾದ ಗೊಟಬಯ, ನೌಕಾಪಡೆ ಹಡಗಿನ ಮೂಲಕ ಎಸ್ಕೇಪ್‌?

gotabaya Rajapaksa

ಕೊಲಂಬೊ: ರಾಷ್ಟ್ರದ ಜನರ ಆಕ್ರೋಶದ ಕೇಂದ್ರ ಬಿಂದುವಾಗಿರುವ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ದೇಶವನ್ನೇ ಬಿಟ್ಟು ಪರಾರಿಯಾಗಿರುವ ಸಂಶಯ ವ್ಯಕ್ತವಾಗಿದೆ. ಕಳೆದ ಎರಡು ದಿನಗಳಿಂದ ದೇಶದಲ್ಲಿ ರಾಜಪಕ್ಸ ಕುಟುಂಬದ ವಿರುದ್ಧ ಆಕ್ರೋಶ ತಾರಕಕ್ಕೇರಿತ್ತು. ಶನಿವಾರವಂತೂ ಸಾವಿರಾರು ಪ್ರತಿಭಟನಾಕಾರರು ನೇರವಾಗಿ ರಾಜಪಕ್ಸ ಅವರು ನೆಲೆಸಿರುವ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ದಾಳಿ ಮಾಡಿದ್ದಾರೆ.

ಅಧ್ಯಕ್ಷರ ನಿವಾಸಕ್ಕೆ ಶನಿವಾರ ಮುತ್ತಿಗೆ ಹಾಕುವ ವಿಚಾರ ಬಯಲಾಗುತ್ತಿದ್ದಂತೆಯೇ ಸಮುದ್ರ ತೀರದ ಈ ಭವನಕ್ಕೆ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ, ಪ್ರವಾಹೋಪಾದಿಯಲ್ಲಿ ಜನ ನುಗ್ಗಿದ್ದರಿಂದ ಯಾವ ಪೊಲೀಸ್‌, ಮಿಲಿಟರಿ ವ್ಯವಸ್ಥೆಗಳು ಅವರನ್ನು ತಡೆಯಲು ಶಕ್ತವಾಗಲಿಲ್ಲ. ಹೀಗಾಗಿ ದೊಡ್ಡ ಸಂಖ್ಯೆಯ ಪ್ರತಿಭಟನಾಕಾರರು ಅಧ್ಯಕ್ಷರ ಅಧಿಕೃತ ಭವನಕ್ಕೆ ಲಗ್ಗೆ ಇಟ್ಟು ದಾಂಧಲೆ ಎಬ್ಬಿಸಿದ್ದಾರೆ.

ಆದರೆ, ಅಷ್ಟು ಹೊತ್ತಿಗೆ ಅಧ್ಯಕ್ಷ ಗೊಟಬಯ ಅವರು ನಿವಾಸದಿಂದ ಎಸ್ಕೇಪ್‌ ಆಗಿದ್ದರು. ಒಂದು ಮೂಲದ ಪ್ರಕಾರ, ಗೊಟಬಯ ಅವರು ಶುಕ್ರವಾರ ರಾತ್ರಿಯೇ ತಮ್ಮ ನಿವಾಸದಿಂದ ಪ್ಯಾಕಪ್‌ ಮಾಡಿದ್ದಾರೆ ಎನ್ನಲಾಗಿದೆ. ರಾಜಪಕ್ಸ ಅವರ ಬ್ಯಾಗ್‌ಗಳನ್ನು ನೌಕಾಪಡೆಗೆ ಸೇರಿದ ಒಂದು ಹಡಗಿಗೆ ರವಾನೆ ಮಾಡುತ್ತಿರುವ ವಿಡಿಯೊ ಒಂದು ಹೊರಬಿದ್ದಿದೆ. ಇದೇ ವೇಳೆ, ಅಧ್ಯಕ್ಷರಿಗೆ ಸೇರಿದ ಭದ್ರತಾ ವಾಹನಗಳು ವಿಮಾನ ನಿಲ್ದಾಣದ ಕಡೆಗೆ ಸಾಗಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ, ವಿಮಾನ ನಿಲ್ದಾಣದ ಕಡೆಗೆ ಹೋಗುವಂತೆ ನಾಟಕವಾಡಿ ಬಳಿಕ ಬಂದರಿನ ಕಡೆಗೆ ಸಾಗಿರಬಹುದು ಎಂಬ ಸಂಶಯ ಕಾಡಿದೆ.

ಇದೇ ಹಡಗಿನಲ್ಲಿ ಗೊಟಬಯ ರಾಜಪಕ್ಸ ಪರಾರಿಯಾದರೆ?

ಒಟ್ಟಾರೆಯಾಗಿ ಗೊಟಬಯ ರಾಜಪಕ್ಸ ಅವರು ದೇಶ ಬಿಟ್ಟು ಪರಾರಿಯಾಗಿರುವುದು ಬಹುತೇಕ ಖಚಿತವಾಗಿದೆ. ಜನಾಕ್ರೋಶ ಎಷ್ಟರಮಟ್ಟಿಗೆ ಇದೆ ಎಂದರೆ ಅವರು ಕೊಲಂಬೊದಲ್ಲಂತೂ ಇರುವುದು ಖಂಡಿತ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ.

ವಿಮಾನ ನಿಲ್ದಾಣದ ಕಡೆಗೆ ವೇಗವಾಗಿ ಸಾಗುತ್ತಿರುವ ಕಾರುಗಳು.. ಆದರೆ, ಹೋಗಿದ್ದು ಬಂದರಿಗೆ ಎಂಬ ಮಾಹಿತಿ ಇದೆ.

ಆದರೆ, ಅವರು ನೌಕಾಪಡೆಯ ಹಡಗಿನ ಮೂಲಕ ಎಲ್ಲಿಗೆ ಹೋಗಿರಬಹುದು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಭಾರತಕ್ಕೆ ಬಂದಿರುವ ಸಾಧ್ಯತೆ ಭಾರಿ ಕಡಿಮೆ ಇದೆ. ರಾಜಪಕ್ಸ ಅವರು ಇತ್ತೀಚಿನ ದಿನಗಳಲ್ಲಿ ರಷ್ಯಾದ ಜತೆ ಉತ್ತಮ ಬಾಂಧವ್ಯವನ್ನು ಸ್ಥಾಪಿಸಿಕೊಂಡಿದ್ದು, ಅಲ್ಲಿಗೆ ಹೋಗಿರಬಹುದೇ ಎಂಬ ಸಂಶಯವಿದೆ.
ಇದರ ನಡುವೆಯೇ ಅವರು ಪ್ರಧಾನಿ ರನಿಲ್‌ ವಿಕ್ರಮ್‌ ಸಿಂಘೆ ಅವರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗಿದ್ದು, ಅವರು ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಬದ್ಧ ಎಂದು ಹೇಳಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ| Lanka on fire: ಜೀವಭಯದಿಂದ ಗೊಟಬಯ ಎಸ್ಕೇಪ್‌, ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ಪ್ರತಿಭಟನಾಕಾರರ ದಾಂಧಲೆ

Exit mobile version