ಕೊಲಂಬೊ: ಆಳುವವರ ವಿರುದ್ಧ ಸಿಡಿದೆದ್ದಿರುವ ಶ್ರೀಲಂಕಾದ ಪ್ರಜೆಗಳು ಪ್ರಧಾನಿ ರನಿಲ್ ವಿಕ್ರಮಸಿಂಘೆ ಮನೆಗೆ ಬೆಂಕಿಯಿಕ್ಕಿದ್ದಾರೆ. ಪರಾರಿಯಾಗಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಭವನವನ್ನು ಮನಸೋಇಚ್ಛೆ ಉಧ್ವಂಸ ಮಾಡಿರುವ ಹೋರಾಟಗಾರರು, ಅಲ್ಲಿನ ಈಜುಕೊಳದಲ್ಲಿ ಮಸ್ತಿ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಕುಸಿದಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತಲಾಗದ ಲಂಕಾ ಸರಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ಶನಿವಾರ ಭುಗಿಲೆದ್ದಿತ್ತು. ಸಾರ್ವಜನಿಕರ ರೋಷಾವೇಷಕ್ಕೆ ಭಯಗೊಂಡ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ದೇಶವನ್ನೇ ಬಿಟ್ಟು ಪಲಾಯನ ಮಾಡಿದ್ದು, ಹಡಗಿನಲ್ಲಿ ಸಮುದ್ರದ ನಡುವೆ ಬೀಡು ಬಿಟ್ಟಿದ್ದಾರೆ. ಜನಾಕ್ರೋಶದ ಮುಂದೆ ಮಂಡಿಯೂರಿದ ಪ್ರಧಾನಿ ರನಿಲ್ ವಿಕ್ರಮಸಿಂಘೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಸುರಕ್ಷಿತ ಪ್ರದೇಶಕ್ಕೆ ಧಾವಿಸಿದ್ದಾರೆ.
ಈ ನಡುವೆ ಕೊಲಂಬೊದ ಕಡಲ ತೀರದಲ್ಲಿರುವ ಅಧ್ಯಕ್ಷರ ನಿವಾಸಕ್ಕೆ ಲಗ್ಗೆ ಇಟ್ಟ ಪ್ರತಿಭಟನಾಕಾರರು ಭವನದಲ್ಲಿ ಸ್ವೇಚ್ಛೆಯಾಗಿ ವಿಹರಿಸಿದರು. ಅಧ್ಯಕ್ಷರ ಖಾಸಗಿ ಈಜುಕೊಳದಲ್ಲಿ ಈಜಾಡಿ ಮೋಜು ಮಾಡಿದರು. ಕಿಚನ್‌ಗೆ ನುಗ್ಗಿ ಸಿಕ್ಕಿದ್ದನ್ನು ತಿಂದರು. ಅತ್ತ ಪ್ರಧಾನಿ ರನಿಲ್ ಅವರ ಖಾಸಗಿ ನಿವಾಸಕ್ಕೂ ದೊಡ್ಡ ಸಂಖ್ಯೆಯಲ್ಲಿ ದಾಳಿ ಮಾಡಿದ ಪ್ರತಿಭಟನಾಕಾರರು, ಮನೆಗೆ ಬೆಂಕಿ ಇಟ್ಟಿದ್ದಾರೆ. ಭದ್ರತಾ ಪಡೆಗಳು, ಪೊಲೀಸರು ಇವರನ್ನು ತಡೆಯುವ ಯಾವ ಪ್ರಯತ್ನವನ್ನೂ ಮಾಡಿಲ್ಲ. ಈ ನಡುವೆ, ಕೊಲಂಬೋ ಅಂತಾರಾಷ್ಟ್ರೀಯ ಏರ್ಪೋರ್ಟ್‌ನತ್ತ ವಿಐಪಿ ವಾಹನಗಳು ಧಾವಿಸುತ್ತಿರುವುದು ಕಂಡುಬಂದಿದೆ. ಸಾರ್ವಜನಿಕ ಆಕ್ರೋಶಕ್ಕೆ ಬೆದರಿದ ಗಣ್ಯರು ದೇಶ ಬಿಡುತ್ತಿದ್ದಾರೆ ಎನ್ನಲಾಗಿದೆ.
ಸರ್ವ ಪಕ್ಷ ಸರಕಾರ ರಚನೆ ಹೇಗೆ?
ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ರಾಜೀನಾಮೆ ನೀಡಬೇಕು ಎನ್ನುವುದು ಜನರ ಪ್ರಧಾನ ಆಗ್ರಹವಾಗಿತ್ತು. ವಿಕ್ರಮಸಿಂಘೆ ಅವರು ಸಂಪುಟದ ಸಚಿವರ ಜತೆಗೆ ಮಾತುಕತೆ ನಡೆಸಿ ರಾಜೀನಾಮೆ ಪ್ರಕಟಿಸಿದ್ದು, ಸರ್ವ ಪಕ್ಷ ಸರಕಾರ ರಚಿಸಲು ದಾರಿ ಮಾಡಿಕೊಡುತ್ತಿದ್ದೇನೆ ಎಂದಿದ್ದಾರೆ.
ಹೀಗಾಗಬೇಕಿದ್ದರೆ ನಾಲ್ಕು ಸಂಗತಿಗಳು ಆಗಬೇಕು- ಮೊದಲನೆಯದಾಗಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಹಾಗೂ ಅಧ್ಯಕ್ಷ ಗೊಟಾಬಯ ರಾಜಪಕ್ಸ ರಾಜೀನಾಮೆ ನೀಡಬೇಕು. ರನಿಲ್ ರಾಜೀನಾಮೆ ನೀಡಿದ್ದಾರೆ, ರಾಜಪಕ್ಸ ಇನ್ನೂ ನೀಡಿಲ್ಲ. ಎರಡನೆಯದು, ಗರಿಷ್ಠ 30 ದಿನಗಳ ಕಾಲ ಸಂಸತ್ತಿನ ಸ್ಪೀಕರ್ ಅವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ. ಮೂರನೆಯದು- ಉಳಿದ ಕಾಲಾವಧಿಗೆ ಒಬ್ಬರು ಸಂಸದರನ್ನು ಅಧ್ಯಕ್ಷರನ್ನಾಗಿ ಸಂಸತ್ತು ಆಯ್ಕೆ ಮಾಡುತ್ತದೆ. ನಾಲ್ಕನೆಯದು- ಎಲ್ಲ ಪಕ್ಷಗಳು ಸೇರಿ ಮಧ್ಯಂತರ ಸರಕಾರ ರಚಿಸುವುದು, ಮುಂದಿನ ಚುನಾವಣೆಯನ್ನು ಆದಷ್ಟು ಬೇಗನೆ ನಡೆಸುವುದು.
ಇದನ್ನೂ ಓದಿ: ವಿಸ್ತಾರ TOP 10 NEWS | ಹೊತ್ತಿ ಉರಿದ ಲಂಕೆಯಿಂದ ಹಾರಿದ ಗೊಟಬಯ ಹಾಗೂ ದಿನದ ಪ್ರಮುಖ ಸುದ್ದಿಗಳಿವು