Site icon Vistara News

ಪಾಕ್‌ನಲ್ಲಿ ವಾಂಟೆಡ್ ಉಗ್ರನ ಹತ್ಯೆ; ಇದು ಬಾಲಾಕೋಟ್‌ ದಾಳಿ ವೇಳೆ ಬದುಕುಳಿದಿದ್ದ ಕ್ರಿಮಿ!

dawood malik

Lashkar-E-Jabbar Founder Maulana Masood Azhar's Close Aide Dawood Malik Shot In Pakistan

ಇಸ್ಲಾಮಾಬಾದ್:‌ ಉಗ್ರರನ್ನು ಪೋಷಣೆ ಮಾಡಿ, ಉಗ್ರರಿಗೆ ಹಣಕಾಸು ನೆರವು ನೀಡಿ, ಭಾರತದ ವಿರೋಧಿ ಕೃತ್ಯಗಳಿಗೆ ಭಾರಿ ಸಹಕಾರ ನೀಡಿದ ಪಾಕಿಸ್ತಾನವೀಗ (Pakistan) ಹಣಕ್ಕಾಗಿ ಜಗತ್ತಿನ ಎದುರು ಭಿಕ್ಷಾ ಪಾತ್ರೆ ಹಿಡಿದು ನಿಲ್ಲುವಂತಾಗಿದೆ. ಹೀಗಿದ್ದರೂ ಪಾಕಿಸ್ತಾನದಲ್ಲಿ ಭಾರತ ವಿರೋಧಿ ಕೃತ್ಯಗಳಿಗೆ ಸಂಚು ರೂಪಿಸುವುದು, ಗಡಿ ಮೂಲಕ ಉಗ್ರರು ನುಸುಳುವುದು ನಿಂತಿಲ್ಲ. ಆದರೆ, ಲಷ್ಕರೆ ಜಬ್ಬರ್‌ ಉಗ್ರ ಸಂಘಟನೆ ಸಂಸ್ಥಾಪಕ ಮಸೂದ್‌ ಅಜರ್‌ (Masood Azhar) ಆಪ್ತ ದಾವೂದ್‌ ಮಲಿಕ್‌ನನ್ನು (Dawood Malik) ಹತ್ಯೆ ಮಾಡಲಾಗಿದೆ. ಇದರಿಂದ ಪಾಕ್‌ನಲ್ಲಿ ಭಾರತ ವಿರೋಧಿ ಕೃತ್ಯಗಳಿಗೆ ಭಾರಿ ಹಿನ್ನಡೆಯಾಗಿದೆ. ದಾವೂದ್‌ ಮಲಿಕ್‌ ಬಾಲಾಕೋಟ್‌ ದಾಳಿ ವೇಳೆ ಬದುಕುಳಿದಿದ್ದ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಉತ್ತರ ವಾಜಿರಿಸ್ತಾನ್‌ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ದಾವೂದ್‌ ಮಲಿಕ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಉತ್ತರ ವಾಜಿರಿಸ್ತಾನ್‌ ಜಿಲ್ಲೆಯ ಮಿರಾಲಿ ಪ್ರದೇಶದಲ್ಲಿ ದಾವೂದ್‌ ಮಲಿಕ್‌ ಹಾಗೂ ಆತನ ತಂಡವು ಶುಕ್ರವಾರ (ಅಕ್ಟೋಬರ್‌ 20) ಅಪರಿಚಿತನೊಬ್ಬನ ಮೇಲೆ ದಾಳಿ ನಡೆಸಿದ್ದ. ದಾಳಿ ಬಳಿಕ ದಾವೂದ್‌ ಮಲಿಕ್‌ ಹಾಗೂ ತಂಡವು ಅಲ್ಲಿಂದ ಕಾಲ್ಕಿತ್ತಿತ್ತು. ಇದಾದ ಮರುದಿನವೇ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ‌

ಈತನ ಹತ್ಯೆ ಪ್ರಮುಖ?

ಮಸೂದ್‌ ಅಜರ್‌ ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆಯ ಸಂಸ್ಥಾಪಕನೂ ಆಗಿದ್ದು, ಪುಲ್ವಾಮ ದಾಳಿಯ ರೂವಾರಿಯಾಗಿದ್ದಾನೆ. ಈತನನ್ನು 2019ರಲ್ಲಿ ಜಾಗತಿಕ ಉಗ್ರ ಎಂದೂ ಘೋಷಿಸಲಾಗಿದೆ. ಮಸೂದ್‌ ಅಜರ್‌ಗೆ ದಾವೂದ್‌ ಮಲಿಕ್‌ ಬಲಗೈ ಬಂಟ ಎಂದೇ ಖ್ಯಾತಿಯಾಗಿದ್ದು, ಜೈಶೆ ಮೊಹಮ್ಮದ್‌, ಲಷ್ಕರೆ ಝಾಂಗ್ವಿ ಸೇರಿ ಹಲವು ಉಗ್ರ ಸಂಘಟನೆಗಳಲ್ಲಿ ಕೆಲಸ ಮಾಡಿದ್ದಾನೆ. ಹಲವು ಮಾರಣಾಂತಿಕ ಉಗ್ರರ ದಾಳಿಯ ರೂವಾರಿಯೂ ದಾವೂದ್‌ ಮಲಿಕ್‌ ಆಗಿರುವುದರಿಂದ ಈತನ ಹತ್ಯೆಯು ಪ್ರಮುಖವಾಗಿದೆ.

ಇದನ್ನೂ ಓದಿ: Khalistani Terrorist: ಕೆನಡಾದಲ್ಲಿ ಖಲಿಸ್ತಾನಿ ಉಗ್ರನ ಹತ್ಯೆ; ಹೊಣೆ ಹೊತ್ತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ!

ಬಾಲಾಕೋಟ್‌ ದಾಳಿ ವೇಳೆ ಬದುಕುಳಿದಿದ್ದ

ಹಾಗೆ ನೋಡಿದರೆ, 2019ರಲ್ಲಿ ಪುಲ್ವಾಮ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡ ಬಾಲಾಕೋಟ್‌ ವಾಯುದಾಳಿ ವೇಳೆಯೇ ದಾವೂದ್‌ ಮಲಿಕ್‌ ಹತನಾಗಬೇಕಿತ್ತು. ಮೂಲಗಳ ಪ್ರಕಾರ ಈತನು ಬಾಲಾಕೋಟ್‌ ದಾಳಿಯಲ್ಲಿ ಅದೃಷ್ಟವಶಾತ್‌ ಬದುಕುಳಿದಿದ್ದ ಎಂದು ತಿಳಿದುಬಂದಿದೆ. ಅಕ್ಟೋಬರ್‌ ಆರಂಭದಲ್ಲಿಯೇ ಪಾಕಿಸ್ತಾನದಲ್ಲಿ ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆಯ ಹಫೀಜ್‌ ಸಯೀದ್‌ ಆಪ್ತ ಕೈಸರ್‌ ಫಾರೂಕ್‌ ಕೂಡ ಹೀಗೆಯೇ ಹತ್ಯೆಗೀಡಾಗಿದ್ದ. ಅಂದಹಾಗೆ, ಮಸೂದ್‌ ಅಜರ್‌ ಹಾಗೂ ಸಯೀದ್‌ ಹಫೀಜ್‌ ಭಾರತದ ವಾಂಟೆಡ್‌ ಉಗ್ರರ ಲಿಸ್ಟ್‌ನಲ್ಲಿದ್ದಾರೆ.

Exit mobile version