Site icon Vistara News

UK Population | ಇಂಗ್ಲೆಂಡ್‌ನಲ್ಲಿ ಕ್ರೈಸ್ತರ ಸಂಖ್ಯೆಯೇ ಕ್ಷೀಣ! ಹಿಂದೂ-ಮುಸ್ಲಿಮರು ಎಷ್ಟಿದ್ದಾರೆ?

UK Population

ಲಂಡನ್: ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಮತ್ತು ವೇಲ್ಸ್‌ನ ಜನಸಂಖ್ಯೆಯ ಪೈಕಿ (UK Population) ಅರ್ಧಕ್ಕಿಂತ ಕಡಿಮೆ ಜನರು ಕ್ರಿಶ್ಚಿಯನ್ ಎಂದು ಗುರುತಿಸಿಕೊಂಡಿದ್ದಾರೆ. ಮಂಗಳವಾರ ಬಿಡುಗಡೆಯಾದ ಜನಗಣತಿಯ ವರದಿಯಿಂದ ಈ ಮಾಹಿತಿ ತಿಳಿದು ಬಂದಿದೆ. ಕ್ರಿಶ್ಚಿಯನ್ ನಂತರ ‘ಯಾವುದೇ ಧರ್ಮವಿಲ್ಲ’ (no religion) ಎಂದು ಹೇಳುವವರ ಸಂಖ್ಯೆ ಇದೆ. ಇನ್ನು ಮುಸ್ಲಿಮ್ ಸಮುದಾಯದ ಬೆಳವಣಿಗೆ ತ್ವರಿತಗತಿಯಲ್ಲಾಗುತ್ತಿದೆ ಎಂಬ ಮಾಹಿತಿಯನ್ನು ಜನಗಣತಿ ವರದಿಯಲ್ಲಿ ತೋರಿಸಲಾಗಿದೆ.

ಹೆಚ್ಚುತ್ತಿರುವ ಜಾತ್ಯತೀತ ಯುಗದಲ್ಲಿ ಕ್ರೈಸ್ತರ ಸಂಖ್ಯೆ ಕ್ಷೀಣಿಸುತ್ತಿರುವುದು ಆಶ್ಚರ್ಯವೇನಲ್ಲ ಎಂದು ಯಾರ್ಕ್‌ನ ಆರ್ಚ್ ಬಿಷಪ್ ಸ್ಟೀಫನ್ ಕಾಟ್ರೆಲ್ ಅವರು ಹೇಳಿದ್ದಾರೆ. ಆದರೆ, ಯುರೋಪ್‌ನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಯುದ್ಧವನ್ನು ಎದುರಿಸುತ್ತಿರುವ ಜನರಿಗೆ ಇನ್ನೂ ಆಧ್ಯಾತ್ಮಿಕ ನೆರವಿನ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಮೊದಲಿಗೆ 2001ರಲ್ಲಿ ಧರ್ಮದ ಪ್ರಶ್ನೆಯನ್ನು ಇಂಗ್ಲೆಂಡ್‌ ಜನಗಣತಿಯಲ್ಲಿ ಸೇರಿಸಲಾಯಿತು. ಈ ಪ್ರಶ್ನೆಗೆ ಉತ್ತರಿಸುವುದು ಕಡ್ಡಾಯವಲ್ಲ. ಹಾಗಿದ್ದೂ ಶೇ.94.0ರಷ್ಟು ಜನರು ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಸುಮಾರು 27.5 ದಶಲಕ್ಷ ಜನರು ಅಥವಾ 46.2 ಪ್ರತಿಶತ ಜನರು ತಾವು ಕ್ರಿಶ್ಚಿಯನ್ ಎಂದು ಹೇಳಿಕೊಂಡಿದ್ದಾರೆ. ಅಂದರೆ, 2011ಕ್ಕೆ ಹೋಲಿಸಿದರೆ, ಶೇ.13.1ರಷ್ಟು ಕಡಿಮೆಯಾಗಿದೆ.

ಯಾವುದೇ ಧರ್ಮವಿಲ್ಲ ಎಂದು ಹೇಳಿಕೊಳ್ಳುವವರ ಸಂಖ್ಯೆ 12 ಪಾಯಿಂಟ್‌ಗಳಿಂಜದ 37.2 ಪ್ರತಿಶತಕ್ಕೆ ಏರಿಕೆಯಾಗಿದೆ ಅಥವಾ ಹೀಗೆ ಹೇಳುವವರ ಸಂಖ್ಯೆ 22.2 ದಶಲಕ್ಷವಿದೆ. ಇದೇ ವೇಳೆ, ಮುಸ್ಲಿಮರ ಸಂಖ್ಯೆ 3.9 ದಶಲಕ್ಷದಷ್ಟಿದೆ. ಮತ್ತೊಂದೆಡೆ ಹಿಂದೂಗಳ ಸಂಖ್ಯೆ 1.0 ದಶಲಕ್ಷದಷ್ಟಿದ್ದರೆ, 524,000ರಷ್ಟು ಸಿಖ್ಖರಿದ್ದಾರೆ. ಯುಹೂದಿಗಳಿಗಿಂತಲೂ ಬೌದ್ಧ ಧರ್ಮದ ಜನರು ಹೆಚ್ಚಿದ್ದಾರೆ. ಈಗ ಇಂಗ್ಲೆಂಡ್ ಮತ್ತು ವೇಲ್ಸ್‌ಗಳ ಜನಸಂಖ್ಯೆಯನ್ನು ಮಾತ್ರವೇ ಬಿಡುಗಡೆ ಮಾಡಲಾಗಿದ್ದು, ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡ್ ಜನಸಂಖ್ಯೆಯನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ | World Population | 800 ಕೋಟಿ ದಾಟಲಿದೆ ಜಗತ್ತಿನ ಜನಸಂಖ್ಯೆ, ಆದರೆ ಯಾವಾಗ?

Exit mobile version