Site icon Vistara News

Maldives Debt: ಚೀನಾದಿಂದ ಸಾಲ ತಂದ ಮಾಲ್ಡೀವ್ಸ್‌ಗೆ ‘ದಿವಾಳಿ’ ಎಚ್ಚರಿಕೆ ನೀಡಿದ ಐಎಂಎಫ್!

Mohamed Muizzu And Xi Jinping

Maldives Orders Indian Officials To Leave After Military Pact With China

ಮಾಲೆ: ಚೀನಾ ಪರ ನಿಲುವು ಹೊಂದಿರುವ ಮೊಹಮ್ಮದ್‌ ಮುಯಿಜು ಅವರು ಅಧ್ಯಕ್ಷರಾದ ಬಳಿಕ ಮಾಲ್ಡೀವ್ಸ್‌ ವಿದೇಶಿ ಸಾಲ ಹೆಚ್ಚಾಗಿದೆ. ಅದರಲ್ಲೂ, ಚೀನಾದಿಂದ ಮೊಹಮ್ಮದ್‌ ಮುಯಿಜು (Mohamed Muizzu) ಸಾಲ (Maldives Debt) ತಂದಿದ್ದಾರೆ. ಸಾವಿರಾರು ಕೋಟಿ ರೂ. ಹೂಡಿಕೆಯ ಯೋಜನೆಗಳಿಗೆ ಸಹಿ ಹಾಕಿದ್ದಾರೆ. ಚೀನಾದ ಬಲೆಗೆ ಬಿದ್ದಿರುವ ಮಾಲ್ಡೀವ್ಸ್‌ ಆರ್ಥಿಕತೆ ಅಪಾಯದಲ್ಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಎಚ್ಚರಿಸಿದೆ. “ಮಾಲ್ಡೀವ್ಸ್‌ ವಿದೇಶಿ ಸಾಲ ಹೆಚ್ಚಾಗಿದ್ದು, ಅದು ಅಪಾಯದಲ್ಲಿದೆ” ಎಂದು ಐಎಂಎಫ್‌ ಎಚ್ಚರಿಸಿದೆ.

ಮಾಲ್ಡೀವ್ಸ್‌ ಎಷ್ಟು ವಿದೇಶಿ ಸಾಲ ಹೊಂದಿದೆ, ಚೀನಾದಿಂದ ಎಷ್ಟು ಸಾಲ ತಂದಿದೆ ಎಂಬುದರ ಕುರಿತು ಐಎಂಎಫ್‌ ಯಾವುದೇ ಮಾಹಿತಿ ನೀಡಿಲ್ಲ. “ಇಂಧನ ಬೆಲೆಯೇರಿಕೆ, ಹೆಚ್ಚಿನ ಆಮದು ಸೇರಿ ಹಲವು ಕಾರಣಗಳಿಂದ ಮಾಲ್ಡೀವ್ಸ್‌ ವಿತ್ತೀಯ ಕೊರತೆ ಸುಳಿಗೆ ಸಿಲುಕಿದೆ. ಅದರಲ್ಲೂ ವಿದೇಶಿ ಸಾಲದ ಪ್ರಮಾಣವೂ ಜಾಸ್ತಿಯಾಗುತ್ತಿರುವುದು ದ್ವೀಪ ರಾಷ್ಟ್ರವನ್ನು ಅಪಾಯಕ್ಕೆ ಸಿಲುಕಿದೆ. ಹಾಗಾಗಿ, ಮಾಲ್ಡೀವ್ಸ್‌ ತನ್ನ ನೀತಿಗಳನ್ನು ಬದಲಾಯಿಸಿಕೊಳ್ಳುವ ಅನಿವಾರ್ಯತೆಯಲ್ಲಿದೆ” ಎಂದು ಐಎಂಎಫ್‌ ಎಚ್ಚರಿಕೆ ನೀಡಿದೆ.

ಮೊಹಮ್ಮದ್‌ ಮುಯಿಜು ಚೀನಾ ಪರ ನಿಲುವು

ಚೀನಾ ಸರ್ಕಾರದಿಂದ ತೀವ್ರ ಸಾಲ ತಂದಿರುವ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಪರ ಒಲವುಳ್ಳ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಈ ಹಿಂದಿನ ಸರ್ಕಾರವು ಚೀನಾದಿಂದ ಸಾಕಷ್ಟು ಸಾಲವನ್ನು ಪಡೆದುಕೊಂಡಿದೆ. ಈಗ ಚೀನಾಗೆ ತೆರಳಿರುವ ಮೊಹಮ್ಮದ್‌ ಮುಯಿಜು, 50 ದಶಲಕ್ಷ ಡಾಲರ್‌ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಸಾಲ, ವ್ಯಾಪಾರದ ಆಸೆ ತೋರಿಸುತ್ತಿರುವ ಚೀನಾ, ಪಾಕಿಸ್ತಾನದಂತೆ ಮಾಲ್ಡೀವ್ಸ್‌ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ, ಮೊಹಮ್ಮದ್‌ ಮುಯಿಜು ಅವರು ಚೀನಾಗೆ ತೆರಳುವ ಕೆಲವೇ ಗಂಟೆಗಳ ಮೊದಲು ಮಾಲ್ಡೀವ್ಸ್‌ ಸಚಿವರು ಭಾರತದ ವಿರುದ್ಧ ಆರೋಪ ಮಾಡಿರುವುದು ಕೂಡ ಓಲೈಕೆಯ ಸಂಕೇತ ಎನ್ನಲಾಗುತ್ತಿದೆ.

ಇದನ್ನೂ ಓದಿ: Mohamed Muizzu: ಮೇ 10ರೊಳಗೆ ಭಾರತದ ಸೇನೆ ವಾಪಸ್;‌ ಮಾಲ್ಡೀವ್ಸ್‌ ಅಧ್ಯಕ್ಷ ಘೋಷಣೆ

ಚೀನಾ ಸರ್ಕಾರವನ್ನು ಓಲೈಸಲೆಂದೇ ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರನ್ನು ವಾಪಸ್‌ ಕರೆದುಕೊಳ್ಳಬೇಕು ಎಂದು ಮೊಹಮ್ಮದ್‌ ಮುಯಿಜು ಸೂಚಿಸಿದ್ದಾರೆ. ಮೇ 10ರೊಳಗೆ ಸೈನಿಕರನ್ನು ವಾಪಸ್‌ ಕರೆಸಿಕೊಳ್ಳಲಾಗುವುದು ಎಂದು ಭಾರತ ತಿಳಿಸಿದೆ. ಭಾರತದ ಸೈನಿಕರನ್ನು ಹಿಂತೆಗೆದುಕೊಳ್ಳಬೇಕು ಎಂದು ಇದಕ್ಕೂ ಮೊದಲು ಮಾಲ್ಡೀವ್ಸ್‌ ಮಾರ್ಚ್‌ 15ರ ಗಡುವು ನೀಡಿತ್ತು. ಆದರೆ, ಮಾಲ್ಡೀವ್ಸ್‌ ಹಾಗೂ ಭಾರತದ ಮಧ್ಯೆ ಮಾತುಕತೆ ನಡೆದು, ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹಾಗಾಗಿ, ಮೇ 10ರೊಳಗೆ ಭಾರತದ ಸೇನೆ ವಾಪಸಾಗಲಿದೆ ಎಂದು ಮುಯಿಜು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಮಾಲ್ಡೀವ್ಸ್‌ ಸಚಿವರು ನೀಡಿದ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿತ್ತು. ಭಾರತದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಕೂಡ ಆರಂಭವಾಗಿತ್ತು. ಅಷ್ಟೇ ಅಲ್ಲ, ಮೊಹಮ್ಮದ್‌ ಮುಯಿಜು ಅವರ ಭಾರತ ವಿರೋಧಿ ನೀತಿಗೆ ಮಾಲ್ಡೀವ್ಸ್‌ನಲ್ಲೇ ವಿರೋಧ ವ್ಯಕ್ತವಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version