ಮಾಲೆ: ಮಾಲ್ಡೀವ್ಸ್‌ನಲ್ಲಿ ಭಾನುವಾರ (ಏಪ್ರಿಲ್ 21) ಸಂಸತ್ ಚುನಾವಣೆ ಆರಂಭವಾಗಿದೆ. ಮೊಹಮ್ಮದ್ ಮುಯಿಜು ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಭಾರತ ವಿರೋಧಿ ನಿಲವು ತಾಳಿದ್ದು, ಮುಯಿಜು ವಿರುದ್ಧ ಮಾಲ್ಡೀವ್ಸ್‌ನಲ್ಲೇ ಆಕ್ರೋಶ ವ್ಯಕ್ತವಾಗಿದೆ. ಇದಾದ ಬಳಿಕ ನಡೆಯುತ್ತಿರುವ ಮೊದಲ ಸಂಸತ್ ಚುನಾವಣೆ ಇದಾಗಿದ್ದು, ಚೀನಾ ಪರ ನಿಲುವಿನ ಮೊಹಮ್ಮದ್ ಮುಯಿಜು (Mohamed Muizzu) ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (PNC) ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮಾಲ್ಡೀವ್ಸ್‌ನ 93 ಸಂಸತ್ ಕ್ಷೇತ್ರಗಳಲ್ಲಿ ಭಾನುವಾರ ಮತದಾನ ಆರಂಭವಾಗಿದೆ. ಸುಮಾರು 368 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲೂ, ಭಾರತದ ಪರ ನಿಲುವು ಹೊಂದಿರುವ, ಮೊಹಮ್ಮದ್ ಮುಯಿಜು ವಿದೇಶಾಂಗ ನೀತಿ, ಚೀನಾ ಪರ ನಿಲುವನ್ನು ಟೀಕಿಸುವ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷವು (MDP) ಮುನ್ನಡೆ ಸಾಧಿಸುವ ವಿಶ್ವಾಸ ಹೊಂದಿದೆ. ಹಾಗೊಂದು ವೇಳೆ, ಎಂಡಿಪಿ ಗೆಲುವು ಸಾಧಿಸಿದರೆ ಭಾರತಕ್ಕೆ ಹೆಚ್ಚು ಅನುಕೂಲವಾಗಲಿದೆ. ಹಾಗಾಗಿ, ಸೋಮವಾರ ಪ್ರಕಟವಾಗುವ ಚುನಾವಣೆ ಫಲಿತಾಂಶವು ಕುತೂಹಲ ಕೆರಳಿಸಿದೆ.
ಕೆಲ ತಿಂಗಳ ಹಿಂದೆ ಮೊಹಮ್ಮದ್ ಮುಯಿಜು ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಭಾರತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಚೀನಾ ಜತೆ ಮಹತ್ವದ ಒಪ್ಪಂದ ಮಾಡಿಕೊಳ್ಳುತ್ತಿರುವ ಮೊಹಮ್ಮದ್ ಮುಯಿಜು, ಭಾರತೀಯರ ಸೈನಿಕರನ್ನು ಮಾತ್ರ ಮಾಲ್ಡೀವ್ಸ್‌ನಿಂದ ವಾಪಸ್ ಕರೆಸಿಕೊಳ್ಳಿ ಎಂದು ಆಗ್ರಹಿಸಿದ್ದಾರೆ. ಚೀನಾ ನೀಡುವ ಹಣಕಾಸು ನೆರವಿನಿಂದಾಗಿ ಇವರು ಇಂತಹ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು. ಮಾಲ್ಡೀವ್ಸ್ ಸಂಸದರು ಭಾರತದ ಕ್ಷಮೆಯಾಚಿಸಿದ್ದರು. ಭಾರತದಲ್ಲಂತೂ ಮಾಲ್ಡೀವ್ಸ್ ವಿರುದ್ಧ ಅಭಿಯಾನವೇ ಶುರುವಾಗಿತ್ತು. ನೂರಾರು ಸೆಲೆಬ್ರಿಟಿಗಳು, ನಟರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಲಿಕ ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡಿದ್ದರು. ಈಗ ಅದರ ಪರಿಣಾಮವನ್ನು ಮಾಲ್ಡೀವ್ಸ್ ಎದುರಿಸುತ್ತಿದೆ.
ಭಾರತೀಯರ ಭೇಟಿ ಕುಸಿತ
ಮಾಲ್ಡೀವ್ಸ್‌ಗೆ ತೆರಳುವ ಪ್ರವಾಸಿಗರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿತ್ತು. ಆದರೆ, ಬಾಯ್ಕಾಟ್ ಅಭಿಯಾನದ ಬಳಿಕ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2024ರ ಏಪ್ರಿಲ್ 10ರವರೆಗೆ ಮಾಲ್ಡೀವ್ಸ್‌ಗೆ 6.63 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಚೀನಾದ 71 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಬ್ರಿಟನ್, ರಷ್ಯಾ, ಇಟಲಿ, ಜರ್ಮನಿ ಹಾಗೂ ಭಾರತದ ಪ್ರವಾಸಿಗರಿದ್ದಾರೆ.
ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 2023ರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 2023ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ 2,09,198 ಜನ ಭೇಟಿ ನೀಡಿದರೆ, ರಷ್ಯಾದಿಂದ 2,09,146 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು, ಚೀನಾದಿಂದ ಕಳೆದ ವರ್ಷ 1,87,118 ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಇದೇ ಕಾರಣಕ್ಕಾಗಿಯೇ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಂಘವು, ಭಾರತದ ವಿರುದ್ಧ ಸಚಿವರು ನೀಡಿದ ಉದ್ಧಟತನದ ಹೇಳಿಕೆಯನ್ನು ಖಂಡಿಸಿದೆ.
ಇದನ್ನೂ ಓದಿ: Maldives Minister: ಭಾರತದ ತಿರಂಗಾಕ್ಕೆ ಅವಮಾನ; ಕ್ಷಮೆ ಕೇಳಿದ ಮಾಲ್ಡೀವ್ಸ್ ಸಚಿವೆ!